ದೇಶದ 2 ನೇ ಕ್ರೀಡಾ ವಿಶ್ವವಿದ್ಯಾನಿಲಯ ಕೊಡಗಿನಲ್ಲಿ ಸ್ಥಾಪನೆಯಾಗಲಿದೆಯೇ ?

March 7, 2021

ಮಡಿಕೇರಿ ಮಾ.7 : ದೇಶ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಸಾವಿರಾರು ಕ್ರೀಡಾ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ಕೊಡಗು ಜಿಲ್ಲೆಯಲ್ಲಿ ದೇಶದ ಎರಡನೇ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುವ ವಿಶ್ವಾಸ ಹಲವರಲ್ಲಿ ಮೂಡಿದೆ.
ಈಗಾಗಲೇ ಸಮಾಜ ಸೇವಕ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದಲ್ಲಿ ರಾಜ್ಯ ಬಜೆಟ್ ಗೂ ಮೊದಲೇ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರಿಗೆ ಕೊಡಗಿನ ನಿಯೋಗ ಕ್ರೀಡಾ ವಿವಿಯ ಬೇಡಿಕೆಯನ್ನು ಮುಂದಿಟ್ಟು ಮನವಿ ಸಲ್ಲಿಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ಕೊಡವ ಸಮಾಜಗಳ ಒಕ್ಕೂಟ, ಕೊಡಗು ಹಾಕಿ ಅಕಾಡೆಮಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದಾರೆ.
ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನಿಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ರಾಷ್ಟ್ರೀಯ ಕ್ರೀಡಾ ವಿವಿ ಮಸೂದೆ 2017 ಕ್ಕೆ ಈ ಹಿಂದೆಯೇ ಒಪ್ಪಿಗೆ ನೀಡಿದೆ. ರಾಷ್ಟ್ರಪತಿಗಳ ಅಂಕಿತವು ದೊರೆತು ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮಣಿಪುರದಲ್ಲಿ ಅಧಿಕೃತವಾಗಿ ಚಾಲನೆ ದೊರೆತ್ತಿದೆ. ಕ್ರೀಡಾ ಶಿಕ್ಷಣವನ್ನು ದೇಶದಲ್ಲೆಡೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಈ ಬಿಲ್ ನ್ನು ಪರಿಚಯಿಸಲಾಗಿತ್ತು. ಕ್ರೀಡಾ ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಕ್ರೀಡಾ ವಿಜ್ಞಾನ, ಕ್ರೀಡಾ ತಂತ್ರಜ್ಞಾನ, ಕ್ರೀಡಾ ನಿರ್ವಹಣೆ, ತರಬೇತಿ ಮತ್ತು ಕ್ರೀಡಾ ಶಿಕ್ಷಣವನ್ನು ಉತ್ತೇಜಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಕ್ರೀಡಾ ವಿಭಾಗಗಳಿಗೆ ಅತ್ಯುತ್ತಮ ಅಂತರ ರಾಷ್ಟ್ರೀಯ ಮಾದರಿಯ ಸೌಲಭ್ಯಗಳನ್ನು ಅಳವಡಿಸಿಕೊಂಡು ವಿವಿ ಕಾರ್ಯನಿರ್ವಹಿಸಲಿದೆ.
ದೇಶದ ಮೊದಲ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಮಣಿಪುರ ಸರ್ಕಾರ 325.90 ಎಕರೆ ಭೂಮಿಯನ್ನು ಪಶ್ಚಿಮದ ಇಂಫಾಲ್ ಜಿಲ್ಲೆಯ ಕೌಟ್ರುಕ್ ನಲ್ಲಿ ಮೀಸಲಿಟ್ಟಿದೆ.
ದೇಶದ 2ನೇ ಕ್ರೀಡಾ ವಿಶ್ವವಿದ್ಯಾನಿಲಯ ಕೊಡಗಿನಲ್ಲೇ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸುವ ಮೂಲಕ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಲಿದೆ ಮತ್ತು ಈ ಬಜೆಟ್‍ನಲ್ಲೇ ಯೋಜನೆ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿದೆ. ವಿವಿ ಸ್ಥಾಪನೆ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಬಳಿಗೂ ನಿಯೋಗ ತೆರಳುವುದಾಗಿ ಅವರು ತಿಳಿಸಿದ್ದಾರೆ.

error: Content is protected !!