ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಮಡಿಕೇರಿ ಮಹಿಳಾ ಕಾಂಗ್ರೆಸ್ ಒತ್ತಾಯ

March 7, 2021

ಮಡಿಕೇರಿ ಮಾ.7 : ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಎಚ್ಚೆತ್ತುಕೊಂಡು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ಮಡಿಕೇರಿ ಸಮೀಪ ನಡೆದ ಒಂಟಿ ಮಹಿಳೆ ಕೊಲೆ ಮತ್ತು ಕಳ್ಳತನ, ಕುಶಾಲನಗರದಲ್ಲಿ ಸರಣಿ ಕಳ್ಳತನ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾಫಿ ಕಳ್ಳತನದ ಪ್ರಕರಣಗಳು ನಡೆದಿದ್ದು, ಕಾರ್ಮಿಕರ ರೂಪದಲ್ಲಿ ಜಿಲ್ಲೆಯಲ್ಲಿ ನೆಲೆ ನಿಲ್ಲುತ್ತಿರುವ ಅಪರಿಚಿತರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಹಿಂದೆ ಜಿಲ್ಲೆಗೆ ಆಗಮಿಸುವ ಹೊರ ರಾಜ್ಯದ ಕಾರ್ಮಿಕರ ಸಂಪೂರ್ಣ ಮಾಹಿತಿ ಆಯಾ ವಿಭಾಗದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿತ್ತು. ಆದರೆ ಕೋವಿಡ್ ಲಾಕ್ ಡೌನ್ ನಂತರದ ದಿನಗಳಲ್ಲಿ ಜಿಲ್ಲೆಗೆ ಆಗಮಿಸಿರುವ ಹೊರಗಿನ ಕಾರ್ಮಿಕರು ಹಾಗೂ ರಸ್ತೆ ಬದಿಯ ಅಪರಿಚಿತ ವ್ಯಾಪಾರಿಗಳ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕಳ್ಳತನÀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆದ್ದಾರಿ ಬದಿಯ ಕೆದಕಲ್ ಶ್ರೀಭದ್ರಕಾಳಿ ದೇವಾಲಯದ ಹುಂಡಿಗೇ ಚೋರರು ಕನ್ನ ಹಾಕಿದ್ದಾರೆ. ಇಲಾಖೆಗೆ ಸಾಕಷ್ಟು ವಾಹನಗಳನ್ನು ಸರ್ಕಾರ ನೀಡಿದ್ದು, ಪೊಲೀಸರÀ ರಾತ್ರಿ ಗಸ್ತನ್ನು ಖಡ್ಡಾಯಗೊಳಿಸಬೇಕಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಆರೋಪಿಗಳನ್ನು ಸುಲಭವಾಗಿ ಬಂಧಿಸಲು ಮತ್ತು ಅಪರಿಚಿತರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಪಾರ್ವತಿ ಫ್ಯಾನ್ಸಿ, ಬಹುತೇಕ ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆಯ ಪರಿಣಾಮವಾಗಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು, ಬೆಳೆಗಾರರು, ರೈತರು ಹಾಗೂ ಜನಸಾಮಾನ್ಯರು ಇಂದು ಚೋರ ಭಯದಿಂದ ಕಂಗೆಟ್ಟಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

error: Content is protected !!