ದಬ್ಬಡ್ಕ, ಚೆಂಬು ಗ್ರಾಮಸ್ಥರಿಂದ ಶ್ರಮದಾನ : ಶಾಸಕರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ

March 7, 2021

ಮಡಿಕೇರಿ ಮಾ.7 : ಚೆಂಬು ಗ್ರಾಮದ ಕಲ್ಲುಗುಂಡಿ, ದಬ್ಬಡ್ಕ, ಚೆಟ್ಟಿಮಾನಿ ಮೂಲಕ ಸಾಗುವ ರಸ್ತೆ ದಬ್ಬಡ್ಕ ಗ್ರಾಮಸ್ಥರಿಗೆ ಭಾಗಮಂಡಲವನ್ನು ಶೀಘ್ರ ಸಂಪರ್ಕಿಸಲು ಅನುಕೂಲಕರವಾಗಿದೆ. ರಸ್ತೆ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಯಾವುದೇ ಸ್ಪಂದನೆ ನೀಡಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಆರೋಪಿಸಿದ್ದಾರೆ.
ದಬ್ಬಡ್ಕ ಯುವಕರ ತಂಡ ಹಾಗೂ ಗ್ರಾಮಸ್ಥರು ಕಲ್ಲುಗುಂಡಿ, ದಬ್ಬಡ್ಕ, ಚೆಟ್ಟಿಮಾನಿ ರಸ್ತೆ ದುರಸ್ತಿ ಕಾರ್ಯವನ್ನು ಶ್ರಮದಾನ ಮೂಲಕ ನಡೆಸಿದರು. ಶ್ರಮದಾನದಲ್ಲಿ ಪಾಲ್ಗೊಂಡು ಮಾತನಾಡಿದ ಸೂರಜ್, ಈ ರಸ್ತೆ ದಬ್ಬಡ್ಕ ಮತ್ತು ಭಾಗಮಂಡಲ ಸಂಪರ್ಕಕ್ಕೆ ಅತ್ಯಂತ ಸಮೀಪದ ಮಾರ್ಗವಾಗಿದೆ ಎಂದರು. ಗ್ರಾಮಸ್ಥರು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಸರಕಾರ ಹಾಗೂ ಸ್ಥಳೀಯ ಶಾಸಕರ ಮುಂದೆ ಕಳೆದ ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಪರ್ಕ ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳುವಲ್ಲಿಯವರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟ ನಡೆಯಲಿದೆ. ಅಲ್ಲದೆ ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆದು ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಶ್ರಮದಾನ ಮಾಡಲು ಅನುಮತಿ ನೀಡಿದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದ ಸೂರಜ್, ಜನಪರ ಕಾರ್ಯಗಳಿಗೆ ಅಧಿಕಾರಿಗಳು ಇದೇ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು.
ಶ್ರಮದಾನದ ನೇತೃತ್ವವನ್ನು ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರುಗಳಾದ ಆದಮ್ ಸೆಂಟ್ಯಾರ್, ಗಿರೀಶ್ ಹೊಸೂರು ಹಾಗೂ ಕಮಲ ಕೇಶವ ವಹಿಸಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಗ್ರಾ.ಪಂ ಮಾಜಿ ಸದಸ್ಯ ಭುವನೇಶ್ವರ, ಯುವಕರ ತಂಡದ ಭರತ್ ಕೆದಂಬಾಡಿ, ಅಜಿತ್ ಪನೇಡ್ಕ, ಯತೀಶ್ ಕೆದಂಬಾಡಿ, ಮಧು ಹೊಸೂರು, ದಿನಕರ ಗುಂಡ್ಯ, ಭಾರತಿ ಅಡಿಲ್ಕಜೆ, ದೇವಜನ ದೇವಪ್ರಸಾದ್ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಸುಮಾರು 17 ಕಿ.ಮೀ ದೂರದ ಶ್ರಮದಾನವನ್ನು ಯಶಸ್ವಿಯಾಗಿ ಪೂರೈಸಿದ ದಬ್ಬಡ್ಕ ಗ್ರಾಮಸ್ಥರನ್ನು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಯೋಗೇಶ್ವರ್ ಇದೇ ಸಂದರ್ಭ ಅಭಿನಂದಿಸಿದರು.

error: Content is protected !!