ಸಣ್ಣ ಕಥೆ : ***** ತಪ್ಪು ಯಾರದ್ದು ? *****

07/03/2021


          ಅದೊಂದು ಸುಂದರ ಗುಡ್ಡ ಅದರ ತಪ್ಪಲಲ್ಲಿ ಮನಸೆಳೆಯುವಂತಹ ಪಾರ್ಕ್. ಪಾರ್ಕಿನ ಮೂಲೆಯಲ್ಲಿ ಒಂದು ವೀವ್ ಪಾಯಿಂಟ್.  ಆ ಎತ್ತರದಲ್ಲಿ ನಿಂತರೆ ಸೂರ್ಯೋದಯ ಸೂರ್ಯಾಸ್ತದ ವಿಹಂಗಮ ನೋಟ. ಆದರ ಸೆಳೆತ ಎಂಥದ್ದು ಎಂದರೆ ಶನಿವಾರ, ಬಾನುವಾರಗಳಲ್ಲಿ ಆ ಗುಡ್ಡ ಗಿಜಿಗುಡುತ್ತಿತ್ತು. ಆದರೆ ಬಾಕಿ ದಿನಗಳಲ್ಲಿ ಅಷ್ಟು ಜನರಿರುತ್ತಿರಲಿಲ್ಲ. ಬಂದರು ಸುರ್ಯೋದಯ ನೋಡಿ ಹೋಗುತ್ತಿದ್ದರು. ಸೂರ್ಯಾಸ್ತಕೆ ಒಂದು ಹತ್ತು ಹನ್ನೆರಡು ಜನ ಇದ್ದರೆ ವಿಶೇಷ. ಅವರು ಸೂರ್ಯ ಮುಳುಗಿದ ತಕ್ಷಣ ಹೊರಟುಬಿಡುತ್ತಿದ್ದರು. ಆ ಪಾರ್ಕ್ ಸುಮಾರು ಎಂಟು ಗಂಟೆಯವರೆಗೂ ತೆರೆದಿರುತ್ತಿತ್ತು.  ಕೆಲವೇ ಕೆಲವು ಜನರಿಗೆ (ಅಲ್ಲಿಯ ಸ್ಥಳೀಯರಿಗೆ) ಗೊತ್ತಿದಂತ ಇನ್ನೊಂದು ಜಾಗವು ಆ ಪಾರ್ಕ್ನಲ್ಲಿತ್ತು. ಸ್ವಲ್ಪ ಇಳಿಜಾರ ನಲ್ಲಿ ಇಳಿದು ಹೋದರೆ ಈ ವೀವ್ ಪಾಯಿಂಟ್ ಗಿಂತಲೂ ಎತ್ತರವಾದ ಸುಂದರವಾದ ಜಾಗವೊಂದಿತ್ತು. ಅಲ್ಲಿ ನಿಂತರೆ ಇಡೀ ಊರೇ ಸುಂದರವಾಗಿ ಕಾಣುತ್ತಿತ್ತು. ಇಲ್ಲಿ ಮದ್ಯದಲ್ಲಿ ಜನಜಂಗುಳಿ ಜಾಸ್ತಿ ಇದ್ದದರಿಂದ ಗೊತ್ತಿರುವವರು ಏಕಾಂತ ಪ್ರಿಯರು ಅಲ್ಲಿ ಹೋಗಿ ಕೂರುತ್ತಿದ್ದರು.
            ಅಂದು ಆಫೀಸಿನ ಕೆಲಸದ ಒತ್ತಡದಿಂದ ತಲೆ ಬಿಸಿಯಾಗಿದ್ದ ಸಾಮ್ರಾಟ್ ಸಂಜೆಯಾಗುತ್ತಲು ಏಕಾಂಗಿಯಾಗಿ ಅಲ್ಲಿ ಹೋಗಿ ಕೂರಲು ನಿರ್ಧರಿಸಿದ್ದ. ಮನೆಯಲ್ಲಿ ಹೇಳಿದರೆ ತಂಗಿ ತಾನು ಬರುತ್ತೇನೆಂದು ಹಠಹಿಡಿಯುವ ಚಾನ್ಸ್ ಇದ್ದಿದ್ದರಿಂದ ಯಾರಿಗೂ ಹೇಳದೆ ಹೊರಟು ಬಂದಿದ್ದ. ಮನಸು ಏಕಾಂಗಿಯಾಗಿ ಇರಲು ಹವಣಿಸಿದರೂ ಕಣ್ಣು ಸುಮ್ಮನಿರುವುದಿಲ್ಲವಲ್ಲ. ಅಂದು ವಾರದ ಕೊನೆಯಲ್ಲದ್ದರಿಂದ ಜನಜಂಗುಳಿ ಅಷ್ಟೇನು ಇರಲಿಲ್ಲ. ಅದೂ ಅಲ್ಲದೆ ಸಾಮ್ರಾಟ್ ಬರುವಾಗಲೆ ಆರುಗಂಟೆಯಾಗಿತ್ತು. ಟಿಕೆಟ್ ತೆಗೆದುಕೊಂಡು ಈ ಕಡೆ ತಿರುಗಿದರೆ ಕೆಳಗಡೆ ಏನೋ ಮಿರಮಿರನೆ ಮಿಂಚಿತು. ಬಗ್ಗಿ ನೋಡಿದರೆ ಅದೊಂದು ಸುಂದರವಾದ ಚಿನ್ನದ ಜುಮುಕಿ. ಯಾರಾದಿರಬಹುದೆಂದು ಸುತ್ತಮುತ್ತ ತಿರುಗಿ ನೋಡಿದರೆ ಹೆಣ್ಣು ಮಕ್ಕಳು ಯಾರು ಕಂಡುಬರಲಿಲ್ಲ. ಜುಮುಕಿ ಈಗಿನ ಫ್ಯಾಷನ್ ನಂತೆ ಸುಮಾರು ದೊಡ್ಡದಿತ್ತು. ಎರಡು ಗ್ರಾಂಗಿಂತಲು ಹೆಚ್ಚೇ ಇತ್ತೆನ್ನಬೇಕು. ನೋಡುವ ಇಂತಲ್ಲಿ ಸಿಕ್ಕಿದೆ ಗುರುತು ಹೇಳಿ ಪಡಕೊಳ್ಳಿ ಅಂತ ಒಂದು ಸ್ಥಳೀಯ ಪೇಪರ್ ಎಡ್ ಕೊಡೋದು ಕಳೆದುಕೊಂಡವರು ಬಂದು ಪಡೆದುಕೊಂಡರೆ ಓಕೆ ಇಲ್ಲಾಂದ್ರೆ ಅವರನ್ನ ನಾನೆಲ್ಲಿ ಹುಡುಕಲಿ. ಅಲ್ಲಾ ಈ ಸುಂದರ ಜುಮುಕಿಯ ಒಡತಿ ಇದರಂತೆ ಸುಂದರ ಹುಡುಗಿಯಾಗಿದ್ದರೆ ಹೆಣ್ಣು ನೋಡೋ ಕಷ್ಟ ತಪ್ಪಿತು. ಒಂದು ವೇಳೆ.ಮದುವೆಯಾದವಳಾಗಿ ಬಂದರೆ… ತನ್ನ ಮನಸಿನ ನಾಗಾಲೋಟಕ್ಕೆ ತಾನೆ ನಗುತ್ತಾ ಪಾರ್ಕಿನೊಳಗೆ ಕಾಲಿಟ್ಟ ಸಾಮ್ರಾಟ್.
         ಅಲ್ಲಿ ಒಂದು ಸುಂದರವಾದ ಮುದ್ದು ಮುದ್ದಾದ ಇಪ್ಪತ್ತು ಇಪ್ಪತ್ತೆರಡರ ಹರೆಯದ ಹುಡುಗಿ ಆತಂಕದಿಂದ ಪಾರ್ಕಿನೊಳಗೆ ನೆಲನೋಡುತ್ತಾ ಹಿಂದಕ್ಕೂ, ಮುಂದಕ್ಕೂ ನಡೆದಾಡುತ್ತಿದ್ದಳು. ಒಂದು ಕೈಯ್ಯಲ್ಲಿ ಕಣ್ಣೀರು ಒರೆಸುತ್ತಾ ಹೂವಿನ ಗಿಡಗಳ ಸುತ್ತಾ ಮಾಡಿದ್ದ ಕಾಲುದಾರಿಯಲ್ಲಿ ಇಂಚಿಂಚೂ ಬಿಡದೆ ಹುಡುಕುತ್ತಿದ್ದಳು. ಪಾರ್ಕಿನ ಪ್ರಖರ ಲೈಟ್ ಬೇರೆ ಆಗಲೆ ಉರಿಯಹತ್ತಿತ್ತು. ಸಾಮ್ರಾಟ್ ಸ್ವಲ್ಪ ಹೊತ್ತು ಆ ಹುಡುಗಿಯತ್ತಲೆ ನೋಡುತ್ತಾ ಸುಮ್ಮನೆ ಕುಳಿತ. ಬಾಬ್ ಕೂದಲಾದ್ದರಿಂದ ಅವಳ ಇನ್ನೊಂದು ಕಿವಿ ಕೂದಲಿಂದ ಮುಚ್ಚಿಹೋಗಿತ್ತು. ಜೊತೆಯಲ್ಲಿ ಬೇರೆ ಯಾರು ಇದ್ದಂತಿರಲಿಲ್ಲ. ಕೊನೆಗೂ ಅವಳ ಆತಂಕ ನೋಡಲಾರದೆ ಮನಸು ತಡೆಯದೆ ಎದ್ದು, ಕ್ಷಮಿಸಿ ನೀವು ತಪ್ಪು ತಿಳಿಯದಿದ್ದರೆ ನೀವು ಏನು ಹುಡುಕಾಡುತ್ತಿದ್ದಿರಾಂತ ಕೇಳಬಹುದಾ ಅಂದ.
         ಒಂದೇ ಸಲಕ್ಕೆ ಹತ್ತಿರದಿಂದ ಬಂದ ಶಬ್ದಕ್ಕೆ ಬೆಚ್ಚಿ ತಿರುಗಿ ಒಂದು ಅಮಾಯಕ ನೋಟ ಬೀರಿದವಳಿಗೆ ಏನನಿಸಿತೋ ಆ ಅಸಹಾಯಕತೆಯಲ್ಲಿ ಹುಲ್ಲುಕಡ್ಡಿ ಆಸರೆಯಾದಂತಾಯ್ತೋ ಏನೋ ಹೇಳಲೋ ಬಾರದೋ ಎಂಬ ಮುಗ್ದತೆಯಲ್ಲೆ ಅದು ಅದೂ…ನನ್ನ ಕಿವಿಯ ಜುಂಕಿ ಬಿದ್ದು ಹೋಗಿದೆ. ನಿನ್ನೆಯಷ್ಟೇ ನನ್ನ ಹುಟ್ಟಿದಹಬ್ಬಕ್ಕೆ ಅಮ್ಮ ಕೊಟ್ಟಿದ್ರು ಇವತ್ತು ಕಳೆದು ಹೋಗಿದೆ ಅಮ್ಮಂಗೆ ಏನು ಹೇಳ್ಲಿ ಅತಂಕ ಎಂಬ ಅವಳ ಮಾತಿಗೆ ಮುಖವೆತ್ತಿ ಅವಳನ್ನು ನೋಡಿದವನಿಗೆ ಕಂಡದ್ದು ಲೈಟ್ ಬೆಳಕಲ್ಲಿ ಬೆಳ್ಳಿಯಂತೆ ಹೊಳೆಯುತ್ತಿರುವ ನೀರು ತುಂಬಿದ ಕಂಗಳು. ಮೊದಲೆ ಅವಳಿಗೆ ಫಿಧಾ ಆಗಿದ್ದವನಿಗೆ ಅವಳನ್ನು ಕಾಡಲು ಇಷ್ಟ ಆಗಲಿಲ್ಲ. ಜೇಬಿನಿಂದ ಜುಮುಕಿ ತೆಗೆದು ಇದಾ ಎಂದು ತೋರಿಸಿದ. ಆ ಬೆಳ್ಳಿಬೆಳಕಲ್ಲಿ ಅವಳ ಮುಖದಲ್ಲಿ ಮಿಂಚಿದ ಹರ್ಷ ಯಾವ ಕವಿಗೂ ವರ್ಣಿಸಲಸದಳ. ಅವನು ತನ್ನ ಆತ್ಮೀಯನೆಂಬಂತೆ ಅವನ ಹತ್ತಿರವೆ ಕುಳಿತು ಧನ್ಯವಾದ ಹೇಳಿದ್ದಳು. ಅವಳಾಗಿಯೆ ಅವನು ಯಾರು ಏನು ವಿಚಾರಿಸಿ ಎಷ್ಟೋ ವರ್ಷದ ಸ್ನೇಹಿತರೆಂಬಂತೆ ಮಾತಾಡ ತೊಡಗಿದ್ದರು. ಅದು ಇದೂ ಮಾತಾಡ್ತಾ ಪಾರ್ಕಿನ ಸೌಂದರ್ಯದ ಬಗ್ಗೆ ಮಾತು ಬಂದಾಗ ಇಲ್ಲಲ್ಲಾ ಅಲ್ಲೊಂದು ಪಾಯಿಂಟ್ ಇದೆ ಅದು ತುಂಬಾ ಚೆನ್ನಾಗಿದೆ ಅಂದಳು. ಸುಮ್ಮನೆ ಕತ್ತಲಲ್ಲಿ ಕಲ್ಲು ಎಸೆಯುವಂತೆ ಹೋಗೋಣ್ವಾ ಅಂದ.
              ಅವಳು ಹೂಂ ಹೋಗೋಣ ಅಂದಾಗ ಅವನಿಗೆ ಸ್ವರ್ಗ ಮೂರೇ ಗೇಣು ಉಳಿದಿತ್ತು. ಇಬ್ಬರೂ ಅದೆಷ್ಟು ಹತ್ತಿರವಾಗಿ ಹೋಗಿದ್ದರೆಂದರೆ ಕೈ ಕೈ ಹಿಡಿದು ಆ ವೀವ್ ಪಾಯಿಂಟ್ ಗೆ ಹೋಗಿದ್ದರು. ಅಲ್ಲಿ ನಗು ಮಾತು ಹರಟೆ ಟೈಟಾನಿಕ್ ಫಿಲಂನಂತೆ ಕಣ್ಣು ಮುಚ್ಚಿ ವೀವ್ ಪಾಯಿಂಟ್ ನಲ್ಲಿ ಗಾಳಿಸೇವನೆ ಮಾಡ್ತಾ ನಿಂತಾಗ ಯಾರೋ ಹಿಡಿದೆಳೆದಂತೆ ದಡ್ ಎಂದು ಹಿಂದಕ್ಕೆ ಬಿದ್ದ ಸಾಮ್ರಾಟ್. ಛೆ ಏನಾಯ್ತೆಂದು ಕಣ್ಣು ತೆರೆದು ನೋಡಿದರೆ 27 , 28 ರ ಸ್ಪುರದ್ರೂಪಿ ಯುವಕ ಆತಂಕದ ಮುಖದೊಂದಿಗೆ ಅವನನ್ನು ನೋಡ್ತಾ ನಿಂತಿದ್ದ. ಓ ಗ್ರಹಚಾರ ಕೆಡ್ತು ಆ ಹುಡುಗಿಯ ಅಣ್ಣ ಇರ್ಬೇಕು ಎಂದೆಲ್ಲಾ ಸಾಮ್ರಾಟ್ ಯೋಚಿಸುವಷ್ಟರಲ್ಲಿ ಹೆಚ್ಚು ಕಡಿಮೆ ದರ ದರ ಎಳೆಯುವಂತೆ ಎಳೆದುಕೊಂಡು ಪಾರ್ಕಿನತ್ತ ಬಂದಾಗ ಶಕ್ತಿವಂತನಾದ ಸಾಮ್ರಾಟ್ ಗೂ ತಾನು ತಪ್ಪು ಮಾಡಿದಂತೆನಿಸಿ ಕೈಕಾಲು ಬಚ್ಚಿದಂತೆ ಆ ಹುಡುಗಿ ಏನಾದಳು ಎಂದೂ ನೋಡದೆ ಅವನೆಳೆದಲ್ಲಿಗೆ ಎಳೆಸಿಕೊಂಡು ಬಂದಿದ್ದ.
        ಪಾರ್ಕಿನ ಗೇಟ್ ಹತ್ತಿರ ಇರುವ ಕಲ್ಲುಬೆಂಚಿನ ಮೇಲೆ ಕೂರಿಸಿ ಆ ಯುವಕ ಬುದ್ಧಿಯಿದೆಯಾ ನಿಂಗೆ ಇಷ್ಟು ಹೊತ್ತಿಗೆ ಅಲ್ಲಿಗೆ ಹೋಗಿದ್ದಿಯಲ್ಲಾ ಅಂದಾಗ ಅಯೋಮಯವಾಗಿ ಹಾಗಾದ್ರೆ ಇವನು ಆ ಹುಡುಗಿಯ ಅಣ್ಣ ಅಲ್ವಾ ಅಂತ ತೊದಲುತ್ತಾ ಆ ಹುಡುಗೀ…
          ಸಾಮ್ರಾಟ್ ಮಾತು ಮುಗಿಯುವ ಮೊದಲೇ ಆ ಯುವಕ ಗಹಗಹಿಸಿ ನಗುತ್ತಾ ಯಾರು ಆ ಸುಂದರಿಯಾ ಜುಮುಕಿ ಬೀಳಿಸಿಕೊಂಡು ಹುಡುಕಾಡ್ತಾ ಇದ್ಲಾ ? ಅಮ್ಮ ಕೊಡಿಸಿದ ಜುಮುಕಿ ಅಂತ ಅಳ್ತಿದ್ಲಾ ನಿನ್ನ ಕೈಹಿಡ್ಕೊಂಡು ಕರ್ಕೊಂಡು ಹೋದ್ಲಾ ಅಂತ ಅವಳ ಜಾತಕವನ್ನೆಲ್ಲಾ ಬಿಚ್ಚಿಟ್ಟಾಗ ಕಣ್ಣು ಮಿಟುಕಿಸದೆ ಆ ಹುಡುಗನನ್ನೆ ನೋಡಿದ ಸಾಮ್ರಾಟ್.
           ಪಾಪ ಆ ಹುಡುಗಿ ಹೋದ ವರ್ಷ  ಪ್ರೀತಿಸಿದ ಹುಡುಗ ಮದುವೆಯಾಗ್ತೇನಂತ ನಂಬಿಸಿ ಅವಳನ್ನ ಕೆಡಿಸಿ ಕೊನೆಗೆ ಈ ಜಾಗದಲ್ಲಿ ಬೆಟ್ಟದಿಂದ ನೂಕಿ ಕೊಲೆಮಾಡಿದ್ದ. ಅಂದಿನಿಂದ ಇಲ್ಲೆ ಅವಳ ವಾಸ ತನ್ನನ್ನು ಬಲಿಕೊಟ್ಟಂತ ಯುವಕರ ಮೇಲೆ ಸೇಡು. ಅಮಾಯಕ ಯುವಕರನ್ನ ಕರೆದುಕೊಂಡು ಹೋಗಿ ಆ ಬೆಟ್ಟದಿಂದ ನೂಕಿ ಸಾಯಿಸುವುದೆ ಅವಳ ಗುರಿ. ಅದಕ್ಕೆ ಅಂತಹ ಬಲಿಯನ್ನ ತಪ್ಪಿಸಲೆಂದೆ ನಾನಿಲ್ಲಿ ಕಾಯ್ತಾ ಇರ್ತೇನೆ.
               ಆ ಮುಗ್ದ ಹುಡುಗಿಯ ಚೆಲುವು ಕಣ್ಣಿಗೆ ಕಟ್ಟಿದಂತಾಗಿ ಸಾಮ್ರಾಟ್ ನ ಕಣ್ಣು ತುಂಬಿಕೊಂಡು ಮಂಜು ಮಂಜಾಗಿ ಕಾಣುತ್ತಿದ್ದ ಯುವಕನನ್ನೇ ನೋಡುತ್ತಾ ಇದೆಲ್ಲಾ ನಿನಗೆ ಹೇಗೆ ಗೊತ್ತಾಯ್ತು?
       ಆ ಹುಡುಗ ಜೋರಾಗಿ ನಗುತ್ತಾ ಅವಳ ಮೊದಲ ಬಲಿಯೇ ನಾನು ಎಂದ.
              ಆಯ್ಯೋ…. ಸಾಮ್ರಾಟ್ ಹೆಚ್ಚು ಕಡಿಮೆ ಬೊಬ್ಬೆ ಹೊಡೆದಂತೆ ಅಳುತ್ತಾ ತಿರುಗಿ ನೋಡಿದರೆ ಆ ಯುವಕ ಕಾಣೆಯಾಗಿದ್ದ. ಒಂದರ್ಧಗಂಟೆ ಸಂಕಟದಿಂದ ಅಳುತ್ತಾ ಏಳಲಾರದ ನಿಶ್ಯಕ್ತಿಯಿಂದ ಕುಳಿತೇ ಇದ್ದ ಸಾಮ್ರಾಟ್ ಹೆದರಿಕೆಯಿಂದಲ್ಲಾ ತಪ್ಪೇ ಮಾಡದ ಆ ಎರಡು ಮುಗ್ಧ ಜೀವಗಳ ಬಲಿಗಾಗಿ.
                           ::::  ದಯಾ ಸುಬ್ಬಯ್ಯ, ಬೆಂಗಳೂರು ::::