ಚೀನಾ ದೌರ್ಜನ್ಯದ ವಿರುದ್ಧ ಜಾಗತಿಕ ಸಮುದಾಯಕ್ಕೆ ಬಹಿರಂಗ ಪತ್ರ ಬರೆದ ಹೋರಾಟಗಾರ್ತಿಯರು

March 8, 2021

ಬೀಜಿಂಗ್‌:ಚೀನಾ ಸರಕಾರದ ಅಧಿಕಾರಿಗಳು ಅಲ್ಪಸಂಖ್ಯಾತ ಉಯಿಘರ್‌ ಹಾಗೂ ಟರ್ಕಿಕ್‌ ಮುಸ್ಲಿಂ ಮಹಿಳೆರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಸಿಡಿದೆದ್ದಿರುವ ಉಯಿಘರ್‌ ಸಮುದಾಯದ ಮಹಿಳಾ ಹೋರಾಟಗಾರ್ತಿಯರು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಜಾಗತಿಕ ಸಮುದಾಯಕ್ಕೆ ಬಹಿರಂಗ ಪತ್ರ ಬರೆದು ಶೋಷಣೆ ಬಗ್ಗೆ ಹೇಳಿಕೊಂಡಿದ್ದಾರೆ.

ಈ ದೌರ್ಜನ್ಯದ ವಿರುದ್ಧ ಎಲ್ಲಾ ಜಾಗತಿಕ ಮಹಿಳಾ ಸಂಘಟನೆಗಳು ಧ್ವನಿಯೆತ್ತಬೇಕೆಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನವಾದ ಭಾನುವಾರ ಜಗತ್ತಿನಾದ್ಯಂತ ಮಹಿಳಾ ಹಕ್ಕುಗಳ ಹೋರಾಟಗಾರರು ಕರೆ ಕೊಟ್ಟಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಘರ್ ಮುಸ್ಲಿಮರ ದಮನ ಕಾರ್ಯಾಚರಣೆಯನ್ನು ಚೀನಾ ಆಡಳಿತವು ನಿರಂತರವಾಗಿ ನಡೆಸುತ್ತಿದ್ದು, ಅಲ್ಲಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆಯೆಂದು ಬ್ರಿಟಿಶ್ ಮಾಧ್ಯಮವೊಂದು ವಿವಿಧ ಮಹಿಳಾ ಹಾಗೂ ಮಾನವಹಕ್ಕು ಹೋರಾಟಗಾರರ ಸಂದರ್ಶನಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

‘ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ, ಚಿತ್ರಹಿಂಸೆ, ಬಲವಂತದ ಸಂತಾನಶಕ್ತಿ ಹರಣ, ಗರ್ಭಪಾತದಂತಹ ಕ್ರೌರ್ಯಗಳನ್ನು ಚೀನಾ ಅಧಿಕಾರಿಗಳು ನಿತ್ಯ ಎಸಗುತ್ತಿದ್ದಾರೆ. ಮಕ್ಕಳಿಂದ ತಾಯಂದಿರನ್ನು ಬೇರ್ಪಡಿಸಲಾಗುತ್ತಿದೆ. ಬಳಿಕ ಅನಾಥರೆಂದು ಘೋಷಿಸಿ ಮಕ್ಕಳನ್ನು ಅನಾಥಾಲಯಗಳಿಗೆ ದೂಡಲಾಗುತ್ತಿದೆ. ಬಹುತೇಕ ಉಯಿಘರ್‌ ಮಹಿಳೆಯರ ಪತಿ, ಪೋಷಕರು ಚೀನಾ ಅಧಿಕಾರಿಗಳ ಕುತಂತ್ರಕ್ಕೆ ತುತ್ತಾಗಿ ಜೈಲಿಗೆ ದೂಡಲ್ಪಟ್ಟಿದ್ದಾರೆ. ಒಂಟಿ ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ ಎಸಗಲಾಗುತ್ತಿದೆ,” ಎಂದು ಹೋರಾಟಗಾರ್ತಿಯರು ಜಾಗತಿಕ ಸಮುದಾಯಕ್ಕೆ ಬರೆದಿರುವ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

error: Content is protected !!