ರಸ್ತೆ ತಡೆ ಪ್ರತಿಭಟನೆ : ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಸ್ಫೋಟ

ಮಡಿಕೇರಿ ಮಾ.8 : ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಹುಲಿ ದಾಳಿ ಮಾಡಿ ಬಾಲಕನೋರ್ವ ಬಲಿಯಾಗಿರುವ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಕಾನೆಯನ್ನು ಹೊತ್ತು ತಂದ ಅರಣ್ಯ ಇಲಾಖೆಯ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಹುಲಿಯನ್ನು ಹಿಡಿಯಲು ನಮಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಕಳೆದ ಎರಡು ವಾರಗಳಲ್ಲಿ ಅಮಾಯಕ ಮೂರು ಜೀವಗಳು, ಹತ್ತಾರು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಆದರೂ ಸರ್ಕಾರ ಮತ್ತು ಅರಣ್ಯ ಸಚಿವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ವಿಫಲವಾಗಿದೆ, ಕೇವಲ ಸಾಕಾನೆಗಳ ಮೆರವಣಿಗೆ ಮಾಡುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಹುಲಿ ಹಿಡಿಯಲು ಅವಕಾಶ ನೀಡಿದರೆ ಕೇವಲ ಮೂರು ದಿನಗಳಲ್ಲಿ ಹುಲಿಯನ್ನು ಬಂಧಿಸಿ ಅರಣ್ಯ ಇಲಾಖೆಗೆ ಒಪ್ಪಿಸುವುದಾಗಿ ಸವಾಲು ಹಾಕಿದರು.
ಅರಣ್ಯ ಸಚಿವರು ಸ್ಥಳಕ್ಕೆ ಬಾರದೆ ರಸ್ತೆ ತಡೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿದವು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕೊಡಗು ವೃತ್ತದ ಅರಣ್ಯ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.



