ಕರಟ ವಾದನ ಕಲಾವಿದ ಬೆಸೂರು ಶಾಂತೇಶ್ ಗೆ ಒಲಿದ ಪ್ರತಿಷ್ಠಿತ ಜಾನಪದ ಲೋಕ ಪ್ರಶಸ್ತಿ

March 8, 2021

ಮಡಿಕೇರಿ, ಮಾ.8: ಕರ್ನಾಟಕ ಜಾನಪದ ಪರಿಷತ್ತಿನಿಂದ ಕೊಡಮಾಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ಜಾನಪದ ಲೋಕ ಪ್ರಶಸ್ತಿಗೆ ಕೊಡಗಿನ ಕರಟವಾದನ ಕಲಾವಿದ ಬೆಸೂರು ಶಾಂತೇಶ್ ಅವರು ಭಾಜನರಾಗಿದ್ದಾರೆ.
ಅಪರೂಪದ ಕರಟವಾದನ ಕಲೆಯನ್ನು ತಮ್ಮಲ್ಲಿ ಅಂತರ್ಗತವಾಗಿ ಕಾಪಿಟ್ಟುಕೊಂಡು ಬಂದಿರುವ ಶಾಂತೇಶ್ ಅವರು ಜಾನಪದ ಕಲೆಯ ಉಳಿವಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಕೊಡಗು ಜಿಲ್ಲಾ ಜಾನಪದ ಪರಿಷತ್‍ನಿಂದ ಇವರ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದು, ಜಾನಪದ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಜಾನಪದ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ತಾ. 12 ರಿಂದ 14ರವರೆಗೆ ಬೆಂಗಳೂರು ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ಪ್ರವಾಸಿ ಜಾನಪದ ಲೋಕೋತ್ಸವ ನಡೆಯಲಿದ್ದು, ಮಹಾಮೇಳದ 2ನೇ ದಿನವಾದ ತಾ. 13ರಂದು ಸಂಜೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಹೊಂದಿದೆ ಎಂದು ಜಾನಪದ ಪರಿಷತ್‍ನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಅವರು ಮಾಹಿತಿ ನೀಡಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾಗಿರುವ ಬೆಸೂರು ಶಾಂತೇಶ್ ಅವರು ಅಪರೂಪದ ಕಲೆಯನ್ನು ತಮ್ಮೊಳಗೆ ಇಟ್ಟುಕೊಂಡಿದ್ದು, ಜಿಲ್ಲೆ, ರಾಜ್ಯಮಟ್ಟದ ಜಾನಪದ ಉತ್ಸವಗಳಲ್ಲಿ ಭಾಗವಹಿಸಿ ತಮ್ಮ ಕರಟವಾದನ ಕಲೆಯನ್ನು ಪ್ರದರ್ಶಿಸಿದ್ದಾರೆ. ತಮ್ಮೊಂದಿಗೆ ಈ ಕಲೆ ನಶಿಸಬಾರದು ಎಂಬ ಮಹದಾಸೆಯಿಂದ ತಮ್ಮ ಪುತ್ರನಿಗೂ ಈ ಕಲೆಯ ಪರಿಚಯ ಮಾಡಿಸಿ, ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ಕಾರ್ಯ ಮಾಡುತ್ತಿದ್ದಾರೆ.
ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ನಿವಾಸಿ, ಶಾಂತೇಶ್ ಅವರು ದೇಶದ ಯಾವದೇ ಮೂಲೆಯಲ್ಲೂ ಕಾಣಸಿಗದ ಅಪರೂಪದ ಕರಟವಾದನ ಕಲಾವಿದ. ತೆಂಗಿನ ಚಿಪ್ಪಿನ ಕರಟ, ಗಂಧ, ಬೈನೆ ಅಥವಾ ಬೀಟೆ ಮರದಿಂದ ಮಾಡುವ ದುಡಿಯಿಂದ ಹೊರಹೊಮ್ಮುವ ಶಬ್ದ- ತಬಲದ ನಾದ, ತಾಳವಾದ್ಯ ಹೊಂದಿದೆ. ಮೂಲತಃ ಸೋಮವಾರಪೇಟೆಯ ರೇಂಜರ್ ಬ್ಲಾಕ್ ನಿವಾಸಿ, ಪೆÇೀಸ್ಟ್ ಮೆನ್ ಆಗಿದ್ದ ಬಿ.ಜಿ. ದೇವಿದಾಸ್ ಅವರು ಈ ಕರಟವಾದನದ ನಿರ್ಮಾತೃ.
1979-80ರಲ್ಲಿ ಬೆಸೂರು ನಂಜಣ್ಣ ಅವರು ನಿರ್ವಹಿಸುತ್ತಿದ್ದ ಜಾನಪದ ರಾಗರಂಜಿನಿ ಎಂಬ ಕಲಾತಂಡದಲ್ಲಿದ್ದ ದೇವಿದಾಸ್ ಅವರಿಂದ ಬೆಸೂರು ನಂಜಣ್ಣ ಅವರು ಈ ಕಲೆಯನ್ನು ಕರಗತ ಮಾಡಿಕೊಂಡರು. ಇದೇ ತಂಡದಲ್ಲಿದ್ದ ನಂಜಣ್ಣ ಅವರ ಪುತ್ರ ಶಾಂತೇಶ್ ಅವರಿಗೂ ಸಹ ಈ ಕಲೆಯ ವ್ಯಾಮೋಹ ಹೆಚ್ಚಿತು. ಇವರಿಗೆ 11 ವರ್ಷ ಪ್ರಾಯವಿದ್ದಾಗ ಕರಟವಾದನವನ್ನು ಅಭ್ಯಾಸ ಮಾಡಲು ಆಸಕ್ತಿ ಬೆಳೆಯಿತು.
ದೇವಿದಾಸ್ ಹಾಗೂ ಬೆಸೂರು ನಂಜಣ್ಣ ಅವರ ಕಾಲಾನಂತರ ಈ ಕಲೆ ಅಳಿದುಹೋಗಬಾರದು ಎಂಬ ಉದ್ದೇಶದಿಂದ ಶಾಂತೇಶ್ ಅವರು ತಮ್ಮ ತಂದೆಯಿಂದ ಕರಟ ವಾದನ ಕಲಿತರು. ನಂತರದ ದಿನಗಳಲ್ಲಿ ಕಲೆಯನ್ನು ಕರಗತಮಾಡಿಕೊಂಡು ಇದೀಗ ರಾಜ್ಯಮಟ್ಟದ ಜಾನಪದ ಉತ್ಸವಗಳಲ್ಲಿ ಪ್ರದರ್ಶನ ನೀಡುವ ಮೂಲಕ ಅಪರೂಪದ ಕಲೆಯನ್ನು ಪರಿಚಯಿಸುತ್ತಿದ್ದಾರೆ.
ಈ ಹಿಂದೆ ಜಿಲ್ಲೆಯ ಬಾಚರಣಿಯಂಡ ಅಪ್ಪಣ್ಣ, ಕಾಶಿ ಅಚ್ಚಯ್ಯ, ಬೈತಡ್ಕ ಜಾನಕಿ,ಜೇನುಕುರುಬರ ರಾಮು, ಜೇನುಕುರುಬರ ಮರಿ ಅವರುಗಳಿಗೆ ಪ್ರಶಸ್ತಿ ಲಭಿಸಿದ್ದು, 2021ನೇ ಸಾಲಿನ ಪ್ರಶಸ್ತಿಗೆ ಬೆಸೂರು ಶಾಂತೇಶ್ ಭಾಜನರಾಗಿದ್ದಾರೆ.

error: Content is protected !!