ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರು ಸವಾಲು ಎದುರಿಸಿ, ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ : ನ್ಯಾಯಾಧೀಶ ಭೀಮರಾವ್ ಲಗಮಪ್ಪ ಕರೆ

March 8, 2021


ಮಡಿಕೇರಿ ಮಾ.8 : ಮಹಿಳೆಯರು ತಾಯಿಯಾಗಿ, ಅಕ್ಕ-ತಂಗಿಯಾಗಿ, ಕುಟುಂಬ ಕಣ್ಣು ಆಗಿ ಇದ್ದಾರೆ. ಸಮಾಜ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಆದ್ದರಿಂದ ಮಹಿಳೆಯರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿನರಾಳಕರ ಭೀಮರಾವ್ ಲಗಮಪ್ಪ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿಗಿಂತ ಆಧುನಿಕ ಯುಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಲಭಿಸುತ್ತಿದ್ದು, ಈ ಅವಕಾಶಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೇಳಿದರು.
ಮಹಿಳೆಯರನ್ನು ಆಸಕ್ತರು/ಅಸಮರ್ಥರು ಎಂಬ ಭಾವನೆಯಿಂದ ಕಾಣಬಾರದು. ಪುರುಷ ಮತ್ತು ಮಹಿಳೆಯರನ್ನು ಸಮಾನವಾಗಿ ಕಾಣಬೇಕು. ಯಾವುದೇ ಕೆಲಸವನ್ನು ಆತ್ಮಸ್ಥೈರ್ಯದಿಂದ ನಿರ್ವಹಿಸಬೇಕು ಎಂದು ಜಿನರಾಳಕರ ಭೀಮರಾವ್ ಲಗಮಪ್ಪ ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಮಾತನಾಡಿ ಮಹಿಳೆಯರು ಶಕ್ತಿ ಮತ್ತು ಯುಕ್ತಿವಂತರು ಎಂಬುದನ್ನು ಯಾರು ಮರೆಯಬಾರದು. ಮಹಿಳೆಯರು ದೈಹಿಕವಾಗಿ ಶಕ್ತಿವಂತರಾಗಿದ್ದು, ಮಗುವಿಗೆ ಜನ್ಮ ನೀಡುವವರೇ ಮಹಿಳೆಯರು ಎಂಬುದನ್ನು ಅರಿತುಕೊಳ್ಳಬೇಕು. ದೈಹಿಕವಾಗಿ ಸದೃಢರು ಹಾಗೂ ಸಹನೆಯಿಂದ ಬದುಕುವವರು ಮಹಿಳೆಯರು ಎಂದು ಅವರು ಪ್ರತಿಪಾದಿಸಿದರು.
ಪ್ರತಿ ಕ್ಷೇತ್ರದಲ್ಲಿ ಮಹಿಳೆಯರೇ ಮಹಿಳೆಯರನ್ನು ಶೋಷಣೆ ಮಾಡುತ್ತಾರೆ. ಅತ್ತೆ, ಸೊಸೆ, ಅಕ್ಕ ತಂಗಿಯರು, ನಾದಿನಿಯರು, ಅತ್ತಿಗೆಯರು, ಹೀಗೆ ಕುಟುಂಬದ ಮಹಿಳೆಯರೇ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮಾಡುತ್ತಾರೆ. ಆದರೆ ಇದನ್ನು ಮೆಟ್ಟಿ ನಿಲ್ಲಬೇಕು. ಹೀಗೆ ಪ್ರತಿ ಹಂತದಲ್ಲಿ ಮಹಿಳೆಯರು ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಕಿವಿಮಾತು ಹೇಳಿದರು.
ಮಹಿಳೆಯರು ಸವಾಲುಗಳನ್ನು ಎದುರಿಸಿ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಕೀಳರಿಮೆ ಬಿಡಬೇಕು. ಟೀಕೆಗಳು ಬರುತ್ತವೆ. ಅದನ್ನು ಎದುರಿಸಬೇಕು. ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಲು ಶ್ರಮಿಸಬೇಕು. ಆ ನಿಟ್ಟಿನಲ್ಲಿ ಗುರುತಿಸಿಕೊಳ್ಳಬೇಕು ಎಂದು ನೂರುನ್ನೀಸ ಅವರು ಸಲಹೆ ಮಾಡಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್.ಕವನ್ ಅವರು ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಗೃಹಿಣಿ ಕಾರ್ಯವು ಸಹ ಕೆಲಸವಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.
ಮಹಿಳೆಯರು ಮನೆಯಲ್ಲಿ ಅಡುಗೆ ಮಾಡುವುದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವುದು. ಹೀಗೆ ಪ್ರತೀ ನಿತ್ಯ ಕುಟುಂಬದ ಕೆಲಸ ನಿರ್ವಹಿಸಿಕೊಂಡು ಹೋಗುತ್ತಾರೆ. ಆದರೆ ಇವರು ಮನೆಯಲ್ಲಿಯೇ ಇದ್ದಾರೆ ಎಂದು ಕೀಳಾಗಿ ಕಾಣುತ್ತಾರೆ. ಇದು ಸರಿಯಲ್ಲ ಎಂದು ಕವನ್ ಅವರುನುಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ್ ಕುಮಾರ್ ಅವರು ಮಾತನಾಡಿ ಸರ್ಕಾರದ ಕಾರ್ಯಕ್ರಮಗಳು ಮಹಿಳೆಯರಿಗೆ ಮತ್ತಷ್ಟು ತಲುಪಬೇಕು. ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣಬೇಕು ಎಂದರು.
ಹುಟ್ಟಿನಿಂದ ಸಾಯುವ ತನಕ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ತುತ್ತಾಗುತ್ತಾರೆ. ಇದು ಸಮಾಜದ ಅಭಿವೃದ್ಧಿಗೆ ಪೂರಕವಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಸ್ಥಾನಮಾನ ಸಿಗಬೇಕು ಎಂದರು.

ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಸ್ಮಿತಾ ಅವರು ಮಾತನಾಡಿ ಮಹಿಳೆಯರು ಆತ್ಮಸ್ಥೈರ್ಯದಿಂದ ಬದುಕಬೇಕು. ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಅವಕಾಶವಿದ್ದು, ಆ ನಿಟ್ಟಿನಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಆರ್ಥಿಕವಾಗಿ, ಸ್ವಾವಲಂಭಿಯಾಗಿ ಬದುಕಬೇಕು ಎಂದರು.
ಸರ್ಕಾರಿ ಅಭಿಯೋಜಕರಾದ ಕೆ.ಜಿ.ಅಶ್ವಿನಿ ಅವರು ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಅನುಕಂಪಕ್ಕಿಂತ ಪ್ರೋತ್ಸಾಹ ನೀಡಬೇಕು. ಕುಟುಂಬ ಮತ್ತು ಸಮಾಜ ಚೆನ್ನಾಗಿರಲು ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ಸಮಾನವಾಗಿ ಮಹಿಳೆಯರನ್ನು ಕಾಣಬೇಕು ಎಂದರು.
ಸರ್ಕಾರಿ ಅಭಿಯೋಜಕರಾದ ಜಯಶ್ರೀ ಶೆಣೈ ಅವರು ಮಾತನಾಡಿ ಪುರುಷ ಪ್ರಧಾನ ರಾಷ್ಟ್ರದಲ್ಲಿ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದು ಸಮಾನ ಅವಕಾಶ ಪಡೆಯಲು ಮುಂದಾಗಬೇಕು ಎಂದರು.
ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ಬಿ.ಕೆ.ರೋಹಿಣಿ, ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಎಸ್.ಚಂದ್ರಶೇಖರ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಕೆ.ಮನು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ವಕೀಲರು, ಸಿಬ್ಬಂದಿಗಳು ಇತರರು ಇದ್ದರು. ವಕೀಲರಾದ ಕೆ.ಮೀನಾ ಕುಮಾರಿ ಸ್ವಾಗತಿಸಿದರು. ಜಿ.ಸಿ.ಮೀನಾ ನಿರೂಪಿಸಿದರು. ವಸಂತಿ ಪ್ರಾರ್ಥಿಸಿದರು. ಲಕ್ಷ್ಮಿ ವಂದಿಸಿದರು.

error: Content is protected !!