ಮಡಿಕೇರಿ ಮೀಡಿಯ ಕ್ರಿಕೆಟ್ ಕಪ್ : ಟೀಂ ಸರ್ಜಿಕಲ್’ ತಂಡ ಚಾಂಪಿಯನ್

March 8, 2021

ಮಡಿಕೇರಿ ಮಾ.8 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ವತಿಯಿಂದ ಮಡಿಕೇರಿ ನಗರ ಪತ್ರಕರ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಮಡಿಕೇರಿ ಮೀಡಿಯ ಕ್ರಿಕೆಟ್ ಕಪ್’ನಲ್ಲಿ ‘ಟೀಂ ಸರ್ಜಿಕಲ್’ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಪಂದ್ಯಾಟದಲ್ಲಿ ಅನು ಕಾರ್ಯಪ್ಪ ಮಾಲೀಕತ್ವದ ಟೀಂ ಸರ್ಜಿಕಲ್, ರಾಕೇಶ್ ಮಾಲೀಕತ್ವದ ರಾಯಲ್ ಚಾಲೆಂಜರ್ಸ್ ಮಡಿಕೇರಿ, ಸಂತೋಷ್ ರೈ ಮಾಲೀಕತ್ವದ ರಾಯಲ್ ಸ್ಟ್ರೈಕರ್ಸ್ ತಂಡ ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಸರ್ಜಿಕಲ್ ಮತ್ತು ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಟೀಂ ಸರ್ಜಿಕಲ್ ತಂಡ ನಿಗದಿತ 8 ಓವರ್‍ನಲ್ಲಿ 2 ವಿಕೇಟ್ ಕಳೆದುಕೊಂಡು 125 ರನ್ ಕಲೆ ಹಾಕಿತು. ತಂಡ ಪರ ಕೆ.ಎ.ಆದಿತ್ಯ 34, ಆದರ್ಶ್ ಅದ್ಕಲೇಗಾರ್ 52 ರನ್ ದಾಖಲಿಸಿ ತಂಡದ ಮೊತ್ತವನ್ನು ನೂರರಗಡಿ ದಾಟಿಸುವಲ್ಲಿ ಸಫಲರಾದರು. ಗುರಿಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡ 4 ವಿಕೆಟ್ ಕಳೆದುಕೊಂಡು 115 ರನ್ ದಾಖಲಿಸಿ, 9 ರನ್‍ಗಳಿಂದ ಪರಾಭವಗೊಂಡ ಪರಿಣಾಮ ದ್ವಿತೀಯ ಸ್ಥಾನ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಟಾಸ್ ಸೋತ ರಾಯಲ್ ಸ್ಟ್ರೈಕರ್ಸ್ ತಂಡ ನಿಗದಿತ 8 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 82 ರನ್ ಪೇರಿಸಿತು. ಗುರಿ ಬೆನ್ನತ್ತಿದ ಟೀಂ ಸರ್ಜಿಕಲ್ ತಂಡ 7 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಎರಡನೇ ಪಂದ್ಯದಲ್ಲಿ ಟಾಸ್ ಸೋತ ರಾಯಲ್ ಸ್ಟ್ರೈಕರ್ಸ್ ತಂಡ ನಿಗದಿತ 8 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 84 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡ 5.2 ಓವರ್‍ನಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಮೂರನೇ ಪಂದ್ಯದಲ್ಲಿ ಟಾಸ್ ಟೀಂ ಸರ್ಜಿಕಲ್ ತಂಡ ನಿಗದಿತ 8 ಓವರ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 59 ರನ್ ಕಲೆ ಹಾಕಿತು. ಗುರಿಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡ 4.1 ಓವರ್‍ನಲ್ಲಿ ಗೆಲುವಿನ ದಡ ಸೇರಿತು.


4 ಅರ್ಧ ಶತಕ : ಫೈನಲ್ ಪಂದ್ಯಾಟದಲ್ಲಿ ಟೀಂ ಸರ್ಜಿಕಲ್ ತಂಡದ ಪರ ಆದರ್ಶ್ ಅದ್ಕಲೇಗಾರ್ 15 ಎಸೆತದಲ್ಲಿ 52ರನ್ ಕಲೆ ಹಾಕಿದರೆ, ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡದ ಪರ ಪ್ರೇಮ್ ಕುಮಾರ್ 34 ಎಸೆತದಲ್ಲಿ 70 ರನ್ ಕಲೆ ಹಾಕಿದರು. ಲೀಗ್ ಪಂದ್ಯಾಟದಲ್ಲಿ ಟೀಂ ಸರ್ಜಿಕಲ್ ತಂಡದ ಕೆ.ಎ.ಆದಿತ್ಯ ರಾಯಲ್ ಸ್ಟ್ರೈಕರ್ಸ್ ತಂಡದ ವಿರುದ್ಧ 21 ಎಸೆತದಲ್ಲಿ 63 ರನ್ ದಾಖಲಿಸಿದರೆ, ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡದ ಲೋಕೇಶ್ ಕಾಟಕೇರಿ ರಾಯಲ್ ಸ್ಟ್ರೈಕರ್ಸ್ ತಂಡದ ವಿರುದ್ಧ 18 ಎಸೆತದಲ್ಲಿ 52 ರನ್ ದಾಖಲಿಸಿದರು.


ವೈಯುಕ್ತಿಕ ಪ್ರಶಸ್ತಿ : ಬೆಸ್ಟ್ ವುಮೆನ್ ಪ್ಲೇಯರ್ ಮತ್ತು ಪೈನಲ್ ಪಂದ್ಯಾಟದ ಬೆಸ್ಟ್ ಬೌಲರ್ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಚಿತ್ರ ನಾಣಯ್ಯ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಆದರ್ಶ್ ಅದ್ಕಲೇಗಾರ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ಕೆ.ಎ.ಆದಿತ್ಯ, ಬೆಸ್ಟ್ ಬೌಲರ್ ಪ್ರಶಸ್ತಿ- ಟೀಂ ಸರ್ಜಿಕಲ್ ತಂಡದ ದಿವಾಕರ್(ಜಾಕಿ), ಹಿರಿಯ ಆಟಗಾರ ಪ್ರಶಸ್ತಿ-ಟೀಂ ಸರ್ಜಿಕಲ್ ತಂಡದ ಬಿ.ಸಿ.ದಿನೇಶ್, ಬೆಸ್ಟ್ ಬ್ಯಾಟ್ಸ್‍ಮ್ಯಾನ್ ಪ್ರಶಸ್ತಿ-ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡದ ಪ್ರೇಮ್ ಕುಮಾರ್, ಬೆಸ್ಟ್ ಕ್ಯಾಚರ್ ಪ್ರಶಸ್ತಿ-ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡದ ವಿಶ್ಮಪೆಮ್ಮಯ್ಯ ಪಡೆದುಕೊಂಡರು.

ಪ್ರಶಸ್ತಿ ಪ್ರಧಾನ ಸಮಾರಂಭ : ಕ್ರೀಡಾಕೂಟ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ.ಜಗದೀಶ್, ತೀರ್ಪುಗಾರ ಕಾವೇರಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನುಕಾರ್ಯಪ್ಪ, ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್.ಕುಟ್ಟಪ್ಪ, ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿಶೆಟ್ಟಿ ಇದ್ದರು. ನಂತರ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಟೀಂ ಸರ್ಜಿಕಲ್ ತಂಡಕ್ಕೆ 15,000 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಮಡಿಕೇರಿ ತಂಡಕ್ಕೆ 10,000 ನಗದು ಮತ್ತು ಟ್ರೋಫಿಯನ್ನು ಗಣ್ಯರು ವಿತರಿಸಿದರು.

error: Content is protected !!