ಕೊಡಗನ್ನು ಕರ್ನಾಟಕದಿಂದ ಹೊರಗಿಟ್ಟಿದ್ದಾರೆ : ಜೆಡಿಎಸ್ ಅಸಮಾಧಾನ

March 8, 2021

ಮಡಿಕೇರಿ ಮಾ.8 : ರಾಜ್ಯ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಯಾವುದೇ ಅನುದಾನ ನೀಡದೆ ವಂಚಿಸುವ ಮೂಲಕ ಸರ್ಕಾರ ಕೊಡಗನ್ನು ಕರ್ನಾಟಕದಿಂದ ಹೊರಗಿಟ್ಟಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಟ್ಯಾಂತರ ಜನರಿಗೆ ಕಾವೇರಿ ನೀರು ಒದಗಿಸುತ್ತಿರುವ ಕೊಡಗು ಇಂದು ಬಜೆಟ್ ನಲ್ಲಿ ಏನಾದರು ನೀಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ತಲುಪಿರುವುದು ದುರಂತವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಕಡೆಗಣನೆಗೆ ಜಿಲ್ಲೆಯ ಶಾಸಕರುಗಳೇ ಕಾರಣವೆಂದು ಆರೋಪಿಸಿರುವ ಗಣೇಶ್, ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವಲ್ಲಿ ಶಾಸಕರುಗಳು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಕೊಡಗು ಪುಟ್ಟ ಜಿಲ್ಲೆಯಾದರೂ ಬೆಟ್ಟದಷ್ಟು ಸಮಸ್ಯೆಗಳು ಕಾಡುತ್ತಿದೆ, ಸಾಸಿವೆಯಷ್ಟೂ ಸಹಾಯ ಮಾಡದ ಸರ್ಕಾರದ ನಡೆಯನ್ನು ಶಾಸಕರುಗಳು ಕೂಡ ಖಂಡಿಸಬೇಕಾಗಿದೆ. ಜಿಲ್ಲೆಯನ್ನು ಸಚಿವ ಸ್ಥಾನದಿಂದಲೂ ವಂಚಿಸಲಾಗಿದೆ. ಕೇಂದ್ರ ಸರ್ಕಾರದ ಬಜೆಟ್ ನಲ್ಲೂ ಕಡೆಗಣಿಸಲಾಗಿದೆ, ಇದೀಗ ರಾಜ್ಯ ಬಜೆಟ್ ನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಾತ್ರ ಹಣ ಮೀಸಲಿಡಲಾಗಿದ್ದು, ಇದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಕೇವಲ ಹೊಗಳಿಕೆಗೆ ಮತ್ತು ಅಧಿಕಾರದ ಸಂಖ್ಯಾ ಬಲಕ್ಕಾಗಿ ಮಾತ್ರ ಬಿಜೆಪಿ ಕೊಡಗನ್ನು ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಾಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಇಲ್ಲಿನ ಪ್ರತಿನಿಧಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲವೆಂದು ಗಣೇಶ್ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗಲೂ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗಿನ ಮೇಲೆ ವಿಶೇಷ ಅಭಿಮಾನ ತೋರಿ ಮಳೆಹಾನಿ ಸಂತ್ರಸ್ತರಿಗೆ 800 ಮನೆಗಳನ್ನು ನಿರ್ಮಿಸಿಕೊಟ್ಟರು. ಅಲ್ಲದೆ ಬಾಳುಗೋಡು ಕೊಡವ ಸಮಾಜಕ್ಕೆ 10 ಕೋಟಿಗಳನ್ನು ಮಂಜೂರು ಮಾಡಿದರು. ಈ ಹಿಂದೆ ಕೂಡ ಮುಖ್ಯಮಂತ್ರಿಗಳಾಗಿದ್ದಾಗ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೂ ಅನುಮೋದನೆ ನೀಡಿದರು. ಆದರೆ ಇಂದು ಬಿಜೆಪಿಗೆ ಬಹುಮತವಿದ್ದರೂ ಕರ್ನಾಟಕದ ನಕ್ಷೆಯಲ್ಲಿ ಕೊಡಗು ಇಲ್ಲವೆಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೇರೆ ಜಿಲ್ಲೆಗಳಿಗೆ ಜಾತಿ ಆಧಾರದಲ್ಲಿ ಕೋಟಿ ಕೋಟಿ ಹಣವನ್ನು ಮೀಸಲಿಡುತ್ತಿರುವ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸದೆ ಇರುವುದು ಮತ್ತು ಪ್ರಾಕೃತಿಕ ವಿಕೋಪದಿಂದ ಕೃಷಿ ಫಸಲು ಕಳೆದುಕೊಂಡವರಿಗೆ ಸಹಾಯಹಸ್ತ ಚಾಚದೆ ಇರುವುದು ದುರಂತವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೋಟೋ :: ಗಣೇಶ್

error: Content is protected !!