ಮಹಿಳಾ ವಿಶೇಷ : ***** ಕ್ರಿಯಾಶೀಲ ಮಹಿಳೆ ಮತ್ತು ಯಶಸ್ಸು*****

March 8, 2021

ಬೆಳಗಾಯಿತೆಂದರೆ ಅದೇ ಗಡಿಬಿಡಿ, ಆತುರದಲ್ಲಿ ತಿಂಡಿ ಅಡುಗೆ ಮುಗಿಸಿ, ಮಕ್ಕಳಿಗೆ ಸ್ನಾನ ಮಾಡಿಸಿ, ತರಾತುರಿಯಲ್ಲಿ ತಯರಾಗಿ, ಅರ್ಧಂಬರ್ಧ ತಿಂಡಿ ತಿಂದು, ಹೆಗಲ ಮೇಲೊಂದು ಬ್ಯಾಗು ಏರಿಸಿಕೊಂಡು ಗಾಡಿಯೇೀರಿ ಹೊರಟರೆ ಮತ್ತೆ ನಿಲ್ಲುವುದು ಕಚೇರಿಯಲ್ಲೆ. ಮತ್ತದೇ ಕಚೇರಿ ವ್ಯವಹಾರ, ನಗುಮೊಗ, ಸಹೋದ್ಯೋಗಿಗಳೊಂದಿಗೆ ಮಾತುಕತೆ, ಸಂಜೆಯಾಯಿತೆಂದರೆ ಕೆಲಸ ಮುಗಿಸಿ ಮನೆಗೆ ಹೊರಡುವ ಧಾವಂತ…. ಮತ್ತೆ ಮನೆ ಸೇರಿ ಮಕ್ಕಳ ಆರೈಕೆ, ಅವರಿಗೆ ತಿಂಡಿ ತಯಾರಿ, ಗಂಡನಿಗೆ ಕಾಫಿ-ಟೀ…..ಹೀಗೆ ತನ್ನ ಬಗ್ಗೆ ಒಂದು ನಿಮಿಷವೂ ಆಲೋಚನೆ ಮಾಡಲಾಗದಷ್ಟು ಬ್ಯುಸಿಯಾಗಿದ್ದರೂ ಯಾರಿಗೂ ನೋವುಂಟು ಮಾಡದ, ಯಾರ ಮೇಲೂ ಸಿಟ್ಟಾಗದ ಸಮಾಧಾನಿ, ಹಸನ್ಮುಖಿ…

    ಇದೇನಿದು? ಯಾರ ಬಗ್ಗೆ ಹೇಳಲಾಗುತ್ತಿದೆ ಎಂಬ ಗೊಂದಲ ಉಂಟಾಗುತ್ತಿದೆಯಲ್ಲವೇ? ಇದು ನಮ್ಮ ಇಂದಿನ ಮಹಿಳೆಯ ದಿನಚರಿ. 

     ಅಂದಿನ ಮಹಿಳೆಯಂತೆ ನಾಲ್ಕು ಗೋಡೆಗಳ ನಡುವೆ, ಗಂಡ, ಮನೆ, ಮಕ್ಕಳು, ಸಂಸಾರ ಎನ್ನುತ್ತಾ ಗಂಡ ಹೇಳಿದ್ದನ್ನು ಕೇಳಿಕೊಂಡು, ಹೊಡೆದರೆ ಹೊಡೆಸಿಕೊಂಡು, ಒದ್ದರೆ ಒದೆಸಿಕೊಂಡು, ತಮ್ಮಲ್ಲಿ ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ನೋವು ನರಳಿಕೆ, ಯಾತನೆಗಳನ್ನು ಅನುಭವಿಸಿ ಜೀವನ ಸಾಗಿಸಬೇಕಾದ ಒಂದು ಪರಿಸ್ಥಿತಿ ಈಗಿಲ್ಲ(ಬಹುತೇಕ ಕಡಿಮೆಯಾಗಿದೆ). ಅದೆಲ್ಲಾ ಒಂದು ಶತಮಾನದ ಹಿಂದಿನ ಮಾತು. 

 ಭಾರತದಲ್ಲಿ ಮಹಿಳೆಗೆ ಪುರಾತನ ಕಾಲದಿಂದಲೂ ವಿಶೇಷ ಗೌರವ, ಸ್ಥಾನಮಾನವಿದೆ. ಈ ದೇಶದಲ್ಲಿ ಹಲವು ಮಹಾನ್ ಸಾಧಕರು ಜನಿಸಿದ್ದಾರೆ, 

     ಅವರಲ್ಲಿ ಸಾಕಷ್ಟು ಮಹಿಳೆಯರ ಪಟ್ಟಿಯೂ ಇದೆ. ಹಾಗೆಯೇ, ಕಾಲ ಬದಲಾದಂತೆ ಕಾಲಕ್ಕೆ ಹೊಂದಿಕೊಂಡ ಮಹಿಳೆ ತನ್ನ ಅಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ಒಪ್ಪಿಕೊಂಡಿದ್ದಾಳೆ. ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತಗೊಳಿಸಿದ್ದ ಮಹಿಳೆ ಆಧುನಿಕ ಸಮಾಜದಲ್ಲಿಂದು ಪುರುಷ ಸಮಾನಳಾಗಿ ದುಡಿಯುತ್ತಿದ್ದಾಳೆ. ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಲವರಿಗೆ ಮಾದರಿ ಎನಿಸಿದ್ದಾಳೆ.

     ದಿನಬೆಳಗಾಯಿತೆಂದರೆ ಮನೆ, ಗಂಡ-ಮಕ್ಕಳು, ಕೆಲಸ, ಹಬ್ಬ ಹರಿದಿನಗಳು ಬಂತೆಂದರೆ ಪೂಜೆ-ಪುನಸ್ಕಾರ, ರಜಾ ದಿನಗಳು ಬಂತೆಂದರೆ ಮಕ್ಕಳಿಗಾಗಿ ಸಿಹಿತಿಂಡಿ ತಯಾರಿ, ಪ್ರವಾಸ, ಈ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ಸಮಾಜ ಸೇವೆಗೆ ತನ್ನನ್ನು ತೊಡಗಿಸುಕೊಳ್ಳುತ್ತಾ ಎಲ್ಲವನ್ನೂ ಬಹಳ ಜಾಣ್ಮೆಯಿಂದ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾಳೆ. ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ…ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ. 

     ಕೇವಲ ಮನೆಕೆಲಸಕ್ಕೆ, ಸಂಸಾರ ನೌಕೆ ಸಾಗಿಸುವ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ, ಇಂದು ಪುರುಷರಿಗೆ ಸರಿಸಾಟಿಯಾಗಿ ಸ್ವಸಾಮಥ್ರ್ಯದಿಂದಲೇ ಲಿಂಗಸಮಾನತೆ ಸಾಧಿಸುವತ್ತ ದೃಢ ಹೆಜ್ಜೆಯಿಟ್ಟಿದ್ದಾಳೆ. ಹಿಂದೆಲ್ಲಾ ಗಂಡು ಹೇಳಿದ ಮಾತುಗಳಿಗೆ ತಲೆಯಾಡಿಸಿ ಅದು ಸರಿಯಿರಲಿ, ತಪ್ಪಿರಲಿ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಹೆಣ್ಣು ಇಂದು ಅದನ್ನು ಪ್ರಶ್ನಿಸುವಂತಹ ಹಂತಕ್ಕೆ ತಲುಪಿದ್ದಾಳೆ. ಇದಕ್ಕೆ ಮುಖ್ಯ ಕಾರಣ, ಇಂದು ಮಹಿಳೆ ಸುಶಿಕ್ಷಕಿತಳಾಗಿದ್ದಾಳೆ. ಕೇವಲ ಮನೆಯ ಆಗುಹೋಗಿಗಳಷ್ಟೇ ಅಲ್ಲ, ಹೊರ ಜಗತ್ತಿನ ಅರಿವು, ಸಂದರ್ಭವನ್ನು ನಿಭಾಯಿಸುವ ಶಕ್ತಿ, ವಹಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ, ಜಾಣ್ಮೆ ಅವಳಲ್ಲಿದೆ. ಈ ಅಂಶಗಳು ಆಕೆಯ ರಕ್ತದಲ್ಲೇ ಕರಗತವಾಗಿವೆಯಾದರೂ ಅದನ್ನು ಮುಕ್ತವಾಗಿ ಬಹಿರಂಗಪಡಿಸಲು ಈ ಸಮಾಜ ಆಕೆಗೆ ಹಿಂದೆದೂ ಅವಕಾಶವನ್ನೇ ನೀಡಿರಲಿಲ್ಲವೇನೋ? ಅದಕ್ಕಾಗಿಯೇ ಇಂದು ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೇ ಹೆಚ್ಚಿನ ಆದ್ಯತೆ!

 ಆದರೆ `ಆಧುನಿಕ ಮಹಿಳೆ’ ಎಂಬ ಹೆಗ್ಗಳಿಕೆಯೇನೋ ಇಂದಿನ ಮಹಿಳೆಗೆ ದೊರೆತಿದೆ. ಆದರೆ, ಅದರ ಹಿಂದೆ ಆಕೆ ಅದೆಷ್ಟು ನೋವನುಭವಿಸುತ್ತಾಳೆ ಎಂಬುದು ಹಲವರ ಅರಿವಿಗಿಲ್ಲ. ದುಡಿಯುವ, ತಿಂಗಳಾರಂಭದಲ್ಲಿ ಸಂಬಳ ಎಣಿಸುವ, ಗಂಡಸರಂತೆ ಆಫೀಸಿಗೆ ಹೋಗುವ ಸ್ವಾತಂತ್ರವಿದ್ದರೂ ಮನೆಯ ಕೆಲಸದ ಜತೆಗೆ ದುಡಿಮೆಯ ಕೆಲಸದ ಹೊರೆಯೂ ಆಕೆಯನ್ನು ಬಳಲಿ ಬೆಂಡಾಗಿಸುತ್ತಿದೆ. ಈ ಹಿಂದೆ ಮನೆಯ ಜವಾಬ್ದಾರಿಯನ್ನಷ್ಟೇ ಹೊರುತ್ತಿದ್ದ ಆಕೆಯ ಕಾರ್ಯ ದ್ವಿಗುಣಗೊಂಡಿದೆ. ಇವೆಲ್ಲದರೊಂದಿಗೆ ಹೋಗುವಾಗ, ಬರುವಾಗ ದಾರಿಯಲ್ಲಿನ ಕಿರುಕುಳ, ಗಂಡನ ಅನುಮಾನ, ಅತ್ತೆಯ ಕೊಂಕು ನುಡಿಗಳು, ಕಚೇರಿಗಳಲ್ಲಿ ಮೇಲಾಧಿಕಾರಿಗಳು, ಸಹೋದ್ಯೋಗಿಗಳ ಕಿರುಕುಳವೂ ಆಕೆಯನ್ನು ಬಾಧಿಸುತ್ತಿದೆ. ಒಬ್ಬ ಮಹಿಳಾ ಪ್ರತಿಭೆ ಚಿಗುರೊಡೆಯುತ್ತಿದೆ ಎಂದು ಕಾಣುತ್ತಿದಂತೆಯೇ ಅದನ್ನು ಹೊಸಕಿಹಾಕುವುದು ಹೇಗೆಂದು ಆಲೋಚಿಸುವ ಪಾತಕಿಗಳ ನಡುವೆ ಹೆಣ್ಣು ‘ಆಧುನಿಕ ಮಹಿಳೆ, ಸ್ವತಂತ್ರ ಮಹಿಳೆ’ ಎಂಬ ಹೆಗ್ಗಳಿಕೆಗಷ್ಟೇ ಸೀಮಿತವಾಗಿದ್ದಾಳೆಯೇ ಹೊರತು ನೈಜಸ್ಥಿತಿಯಲ್ಲಿ ಆಕೆಯಿನ್ನೂ ಶೋಷಿತಳೇ.

   ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಮಹಿಳೆ ಮುಂದೆ ಬಂದಿದ್ದರೂ ಸಮಾಜ ಆಕೆಯನ್ನು ಅಸಮರ್ಥೆ’, ‘ಪರಾವಲಂಬಿ’ ಎಂದೇ ಹೇಳುತ್ತದೆ. ಸ್ವಲ್ಪ ಹೆಚ್ಚಾಗಿ ಮಾತನಾಡಿದರೆ ‘ಬಜಾರಿ’ ಎಂತಲೂ, ಅಂಜಿ ಅಳುಕು ನಡೆದರೆ ‘ಅಳುಮುಂಜಿ’ ಎಂತಲೂ, ಪರಿಚಯಸ್ಥ ಪುರುಷನೊಂದಿಗೆ ಮಾತನಾಡಿದರೆ ‘ಅಕ್ರಮ ಸಂಬಂಧ’ ಕಲ್ಪಿಸಿ ಮಾತನಾಡುವ ನೀಚ ಮನೋಭಾವ ಹೊಂದಿರುವ ಬಹುತೇಕರು ಒಂದು ಹೆಣ್ಣಿನ ವ್ಯಕ್ತಿತ್ವವನ್ನು ಹೇಗೆಲ್ಲಾ ಹೀಗಳೆಯಬಹುದೋ ಅಷ್ಟೆಲ್ಲಾ ಪ್ರಯತ್ನಗಳ ಮೂಲಕ ಆಕೆಯನ್ನು ಅಣಕಿಸುವುದು ನಿರಂತರವಾಗಿದೆ. 

   ಅದನ್ನೆಲ್ಲಾ ಆಕೆ ಪ್ರತಿರೋಧಿಸಿದಳೋ, ಅವಳ ಮೇಲೆ ಲೈಂಗಿಕ ದೌರ್ಜನ್ಯವೋ, ಕೆಲಸದಿಂದ ವಜಾಗೊಳಿಸುವುದೋ ಅಥವಾ ಆಕೆಯ ವ್ಯಕ್ತಿತ್ವದ ತೇಜೋವಧೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಈ ಸೋಕಾಲ್ಡ್ ಎಜುಕೇಟೆಡ್ ಸಮಾಜ ನಿರ್ವಹಿಸುತ್ತದೆ. ಈ ಹಂತದಲ್ಲಿ ಇಂತಹ ನೀಚರ ಕೈಗೆ ಸಿಕ್ಕು ಬಲಿಯಾದ ಅದೆಷ್ಟೋ ಮಹಿಳೆಯರ ನಿದರ್ಶನಗಳಿವೆ. 

ಈ ಎಲ್ಲದರ ಮಧ್ಯೆಯೂ ತನಗೆ ಒದಗಿರುವಷ್ಟು ಸ್ವಾತಂತ್ರ್ಯದಲ್ಲಿ ತನಗೆ ದೊರೆತಿರುವ ಅವಕಾಶವನ್ನು ಸದುಪಯೊಗಪಡಿಸಿಕೊಂಡು, ಸುತ್ತಲಿನ ವಾತಾವರಣವನ್ನು ಕಷ್ಟವೋ ಸುಖವೋ ಒಗ್ಗಿಸಿಕೊಂಡು ಅದೆಷ್ಟೋ ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತ ಮಹಿಳೆಯರು ಅನುಸರಿಸಬೇಕಿದೆ. ಹಾಗಿದ್ದಾಗ ಮಾತ್ರ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಶಕ್ತಿ, ಬಲ ಬರುತ್ತದೆ. 

    ಇಷ್ಟೆಲ್ಲಾ ಬದಲಾವಣೆಗಳ ನಡುವೆ ಕುಟುಂಬ, ಮಕ್ಕಳು, ಕೆಲಸ, ಸಮಾಜ ಎಲ್ಲವನ್ನೂ ಸರಿಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದರೂ, ಇಂದಿಗೂ ನಮ್ಮ ದೇಶದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಲೇ ಇದ್ದಾಳೆ. ಆಕೆಯನ್ನು ಖಿನ್ನತೆಗೆ ದೂಡುತ್ತಿದೆ.

    ಮಹಿಳೆ ಎಷ್ಟೇ ಸಾಧನೆ ಮಾಡಿದರೂ ಈ ಪುರುಷ ಪ್ರಧಾನ ಸಮಾಜ ಆಕೆಯನ್ನು ಇಂದಿಗೂ ತುಳಿಯುತ್ತಲೇ ಇದೆ. ಜಾತಿ, ಲಿಂಗ, ವಯಸ್ಸು, ಧರ್ಮಗಳ ತಾರತಮ್ಯ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಸಾಂವಿಧಾನಿಕವಾಗಿ ಮಹಿಳೆಗೆ ಸಮಾಜ ಸ್ಥಾನಮಾನ ಇದೆ ಎಂದು ಹೇಳಿದ್ದರೂ ಇದು ತೋರಿಕೆ ಮಾತ್ರ, ನೈಜ ಚಿತ್ರಣ ಬೇರೆಯೇ ಇದೆ. ಕೇವಲ ಮಾತಿನ ಮೂಲಕವೇ ಲಿಂಗ ತಾರತಮ್ಯವನ್ನು ಸಮಾಜ ಎತ್ತಿಹಿಡಿಯುತ್ತಿದೆ. “ನೀನು ಹೆಣ್ಣು, ನಿನ್ನಿಂದ ಇದು ಸಾಧ್ಯವಿಲ್ಲ, ನಿನ್ನ ಅಣ್ಣ ಮಾಡಲಿ, ಅವನು ಹುಡುಗ’, “ನನ್ನ ಪತ್ನಿ ಏನ್ನನ್ನೂ ಮಾಡುವುದಿಲ್ಲ, ಅವಳು ಗೃಹಿಣಿ ಅಷ್ಟೇ,” ಇಂದಿನ ಸಮಾಜ ಮಹಿಳೆಯನ್ನು ಹೇಗೆ ನೋಡುತ್ತಿದೆ ಎಂದು ತಿಳಿಯಲು ಇಂತಹ ಮಾತುಗಳೇ ಉತ್ತಮ ನಿದರ್ಶನ.

   ಬನ್ನಿ, ಎಲ್ಲರೂ ಒಗ್ಗೂಡೋಣ, ನಾವು ಪುರುಷರಿಗೆ ಸಮಾನರಲ್ಲ, ಅವರಿಗಿಂತಲೂ ಹೆಚ್ಚು ಸಮರ್ಥರು ಎಂದು ಸಾಬೀತುಪಡಿಸೋಣ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೃಢ ನಿರ್ಧಾರ ಕೈಗೊಳ್ಳೋಣ. ಇದಕ್ಕೆ ಮಹಿಳೆಯರು ತಮ್ಮಲ್ಲಿರುವ ಆಂತರಿಕ ಶಕ್ತಿಯನ್ನು ಬಡಿದೆಬ್ಬಿಸಿ, ಕಾರ್ಯಶೀಲರಾಗಬೇಕಿದೆ ಅಷ್ಟೇ…!

ಬಡಕಡ ರಜಿತ ಕಾರ್ಯಪ್ಪ,

ಸಾಹಿತಿಗಳು, ಪತ್ರಕರ್ತರು ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರು,

ವಿರಾಜಪೇಟೆ

error: Content is protected !!