ಸಣ್ಣ ಕಥೆ : *****ಚೆಲುವೆಯ ಅಂದದ ಮೊಗಕೆ*****

17/03/2021

     ” ಕೂಲ್ ಡೌನ್ ಮಿಸ್ಟರ್  ವಿವೇಕ್.ಯಾಕ್ಹೀಗೆ  ಟೆನ್ಷನ್ ಮಾಡ್ಕೋತ್ತೀರಾ? . ಕೂಲಾಗಿರಿ.” ಹೊರಗಿನ ವೆರಾಂಡದ ಛೇರವೊಂದರಲ್ಲಿ ಆಕಾಶವೇ ತಲೆಮೇಲೆ ಬಿದ್ದಂತೆ ಎರಡೂ ಕೈಗಳನ್ನು ಜೋಡಿಸಿ  ಮುಷ್ಟಿ ಹಿಡಿದು ಮ್ಲಾನವದನನಾಗಿ ಕುಳಿತ್ತಿದ್ದ  ವಿವೇಕನ ಬೆನ್ನು  ತಟ್ಟಿ  ಅಂದರು ಡಾಕ್ಟರ್ ಸಂಜೀವ್.
” ಅದು ಹಾಗಲ್ಲ , ಮನಸ್ಸಿಗೇಕೋ ಆತಂಕ. ಆಕಸ್ಮಾತ್ ಅವಳಿಗೆ….ಅವಳಿಗೆ…” ಅವನ  ಮಾತನ್ನು ಅರ್ಧದಲ್ಲೇ ತಡೆದರು ಡಾಕ್ಟರ್. ” ಏನ್ರೀ ವಿವೇಕ್.ಎಜುಕೇಟೆಡ್ ಇದ್ದೀರಿ. ವಿವೇಕ್ ಅಂತ ಹೆಸರು  ಇಟ್ಕೊಂಡಿದ್ದೀರಿ ಬೇರೆ..ಸ್ವಲ್ಪ  ಪಾಸಿಟಿವ್ ಆಗಿ  ಥಿಂಕ್ ಮಾಡೋದನ್ನ ಕಲಿರಿ.ನೆಗಟಿವ್ ಥಿಂಕ್  ಯಾಕೆ ನಿಮ್ಮ ತಲೆಗೆ  ಹೊಳೆಯುತ್ತೆ.?  ಡೋಂಟ್ ವರಿ. ಎಲ್ಲಾ ಸರಿಯಾಗುತ್ತೆ.”  ಮತ್ತೊಮ್ಮೆ  ಅವನ ಬೆನ್ನ ತಟ್ಟಿದ ಡಾಕ್ಟರ್  ಸ್ಮಿತಾ  ಇದ್ದ  ವಾರ್ಡನತ್ತ ನಡೆದರು.
      ಡಾಕ್ಟರ್  ಮಾತನ್ನು ತಲೆಗೆ ತೆಗೆದುಕೊಂಡರೂ , ವಿವೇಕನ  ಮನಸ್ಸು  ಮಾತ್ರ  ಬೇಡದ್ದನ್ನೇ ಯೋಚಿಸುತ್ತಿತ್ತು.   ಹಾಗಾಗಿ ಬಿಟ್ರೆ, ಹೀಗಾಗಿ ಬಿಟ್ರೆ ಎಂಬ  ಮನಸ್ಥಿತಿಯಲ್ಲಿ ಕುಳಿತವನ ಮನಸ್ಸು  ಹಳೆನೆನಪುಗಳನ್ನು ಮೆಲುಕು ಹಾಕಲು ಪ್ರಾರಂಭ ಮಾಡಿತ್ತು. 
 ‘ ನನಗೀಗಲೇ ಮದುವೆ ಬೇಡ  ಅನ್ನುತ್ತಿದ್ದ 28 ರ ಹರೆಯದ ಹುಡುಗ ವಿವೇಕ್   ಎಷ್ಟೋ ಹುಡುಗಿಯರ ಫೋಟೋ ನೋಡಿಯೂ , ನೋಡದೆಯೂ ತಿರಸ್ಕರಿಸಿ ಬಿಟ್ಟಿದ್ದ. ಆದ್ರೆ ಸ್ಮಿತಳ ಫೋಟೋ ಯಾವಾಗ  ನೋಡಿದನೋ ಅವನೆಲ್ಲೋ ಕಳೆದು ಹೋದ ಭಾವನೆ ಅವನಿಗೆ  ಆಗಿತ್ತು. ಉದ್ದ ಮುಖದ ಆ ಚೆಲುವೆಯ  ಮೊದಲ ಆಕರ್ಷಣೆಯೇ ಅವಳ ಆ ಮುದ್ದಾದ ಕಣ್ಣಗಳು.  ನೀಳರೆಪ್ಪಗಳ ಅಡಿಯಲ್ಲಿ ತನ್ನನ್ನೇ ನೇರವಾಗಿ  ದಿಟ್ಟಿಸುತ್ತಿದ್ದ  ಫೋಟೋದಲ್ಲಿನ  ಆ ಚಂದದ  ಕಣ್ಣುಗಳನ್ನು ನೋಡಿ ಅವನ ಮನ ಇವಳೇ ನನ್ನ  ಹೆಂಡತಿ  ಎಂಬುದನ್ನು ತೀರ್ಮಾನ ಮಾಡಿ ಬಿಟ್ಟಿತ್ತು.
ಮಗ ಒಪ್ಪಿದ್ದೇ ಹೆಚ್ಚು ಅಂದುಕೊಂಡವರು, ಮುಂದಿನ  ಕಾರ್ಯಗಳನ್ನು ಬೇಗ  ಬೇಗನೇ ಮುಗಿಸಿದ್ದರು.ಸ್ಮಿತಾ ಅವನ  ಮನ, ಮನೆ ಬೆಳಗುವ ಹೆಣ್ಣಾಗಿಯೇ ಕಾಲಿಟ್ಟಳು.ವಿವೇಕ್ ಅವಳ ಕಣ್ಣುಗಳನ್ನು ನೋಡುತ್ತಾ,  ಚೆಲುವೆಯ ಅಂದದ  ಮೊಗಕೆ ಕಣ್ಣೇ ಭೂಷಣ ಎಂದು ಹಾಡುತ್ತಿದ್ದರೆ , ಸ್ಮಿತಾಳ ಕೆನ್ನೆಗಳು ರಂಗೇರಿ ,ಕಣ್ಣುಗಳು  ಮತ್ತಷ್ಟು  ಅಗಲವಾಗಿ ತೆರೆದು ಕೊಳ್ಳುತ್ತಿದ್ದದ್ದು ವಿವೇಕನಿಗೆ ಹಾಡಲು ಮತ್ತಷ್ಟು  ಹುರುಪು  ನೀಡುತ್ತಿತ್ತು.
ಹೀಗೆ  ಸುಖವಾಗಿ ಓಡುತ್ತಿದ್ದ  ದಿನಗಳಲ್ಲಿ ಒಂದು  ಪುಟ್ಟ  ಆಕ್ಸಿಡೆಂಟ್ ನಿಂದಾಗಿ  ಸ್ಮಿತಳ ಕಣ್ಣುಗಳಿಗೆ  ಬಹಳಷ್ಟು  ಪೆಟ್ಟಾಗಿ ಅವಳು ತನ್ನ  ಕಣ್ಣಿನ  ದೃಷ್ಟಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು.ಮುದ್ದು ಮನದನ್ನೆಯ ಕಣ್ಣುಗಳಲ್ಲಿ ತುಂಬಿದ ಅಂಧಕಾರ ವಿವೇಕನ ಮನಸ್ಸಿಗೆ  ಬಹಳಷ್ಟು  ನೋವು ನೀಡಿತ್ತು.  ಆಪರೇಷನ್  ಮಾಡಿದ್ರೆ ಸರಿ ಹೋಗಬಹುದೆಂದು ಡಾಕ್ಟರ್  ಹೇಳಿದ್ರೂ , ವಿವೇಕ್ ಮನದಲ್ಲಿ ಏನೋ ಅನುಮಾನ.  ಇಂದೀಗ ಅವಳ ಕಣ್ಣಿನ ಪಟ್ಟಿ ಬಿಚ್ಚುವ ದಿನ.ಡಾಕ್ಟರ್ ಸಾಕಷ್ಟು  ಧೈರ್ಯ  ತುಂಬಿದ್ದರೂ, ವಿವೇಕನಿಗೆ ಏನೇನೂ  ಧೈರ್ಯ ಇರಲಿಲ್ಲ.  ಮೊದಲಿನ ಆ ಕಣ್ಣಗಳನ್ನು ನೋಡುವೆನೇ..? ..!!
“ಮಿಸ್ಟರ್ ವಿವೇಕ್”  ‘ಕಣ್ಣಿನ ಪಟ್ಟಿ ತೆಗೆಯುವಾಗ  ನೀವು  ಎದುರುಗಿರಿ’  ಡಾಕ್ಟರ್  ಎಷ್ಟು  ಹೇಳಿದರೂ ಕೇಳದೇ    ಹೊರಗೆ  ಕುಳಿತ್ತಿದ್ದ ವಿವೇಕನಿಗೆ  ಪಕ್ಕದಲ್ಲಿ ಯಾರದೋ ಧ್ವನಿ ಕೇಳಿದಾಗ  ತನ್ನ  ನೆನಪಿನಿಂದ ಹೊರಬಂದ.ಎದುರಿನಲ್ಲಿ ಡಾಕ್ಟರ್ ಸಂಜೀವ್ .ಅವರ  ಮೊಗ ಗಂಭೀರವಾಗಿತ್ತು. ” ಡಾಕ್ಟರ್ ” ವಿವೇಕ್  ತಕ್ಷಣ  ಎದ್ದಿದ್ದ.” ಐ ಯಾಮ್ ವೆರಿ ಸಾರಿ ವಿವೇಕ್… ” ಡಾಕ್ಟರ್  ಸಂಜೀವ್ ಮತ್ತೇನೂ ಹೇಳದೇ ಮುಂದೆ ನಡೆದಾಗ  ವಿವೇಕ್ ಗೆ ಅರ್ಥ ಆಗಿತ್ತು..
” ದಯವಿಟ್ಟು  ನಿಮ್ಮ  ಹೆಂಡತಿಯನ್ನ ಸಮಾಧಾನ  ಮಾಡಿ  ಸರ್. ಅವ್ರನ್ನು ಸಮಾಧಾನ ಮಾಡೋಕೆ ನಮ್ಮಿಂದ  ಆಗ್ತಾ ಇಲ್ಲ. ” ನರ್ಸ್  ಬಂದು ಹೇಳಿದಾಗ ವಿವೇಕನಿಗೆ ವಾರ್ಡಿನೊಳಗೆ ಹೋಗದೇ ವಿಧಿ ಇರಲಿಲ್ಲ.       ತನ್ನ  ದುಃಖವನ್ನು ಅಡಗಿಸಿಟ್ಟು, ವಾರ್ಡಿನೊಳಗೆ ಕಾಲಿಟ್ಟವನು, ಬಾಗಿಲಿಗೆ  ಬೆನ್ನು  ಹಾಕಿ ತಲೆತಗ್ಗಿಸಿ  ಕುಳಿತ್ತಿದ್ದ ಸ್ಮಿತಾಳನ್ನು  ಸಮಾಧಾನ ಪಡಿಸುವ ಸಲುವಾಗಿ  ಅವಳ ಪಕ್ಕ  ಕುಳಿತು , ಅವಳ ಕೈಯನ್ನು  ತನ್ನ  ಅಂಗೈಲಿ ಮುಚ್ಚಿಡುತ್ತಾ,” ನೀನೇನು ವರಿ ಮಾಡ್ಕೋ ಬೇಡ  ಸ್ಮಿತಾ..ಈ ಆಪರೇಷನ್  ಸಕ್ಸಸ್ ಆಗದೇ ಹೋದರೇನಂತೆ. ಮತ್ತೊಂದು  ಆಪರೇಷನ್  ಮಾಡ್ತಾರಂತೆ. ಸರಿಯಾಗುತ್ತೆ.  ನೀನೇನು ಯೋಚ್ನೆ ಮಾಡ್ಬೇಡ…” ತನ್ನ  ಧ್ವನಿಯಲ್ಲಿನ ಕಂಪನವನ್ನು  ಆದಷ್ಟು  ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರೂ , ಅದವನಿಗೆ  ಸಾಧ್ಯವಾಗದೇ ಹೋಗಿತ್ತು..ಅವನ ಕಣ್ಣೀರು  ಸ್ಮಿತಾಳ ಕೈಗಳ ಮೇಲೆ  ಬಿದ್ದಾಕ್ಷಣ , ” ‘ ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ,  ಯಾಕ್ರೀ ಹಾಡು ಮರ್ತು  ಹೋಯ್ತಾ? ” ತಕ್ಷಣ ಅವನೆಡೆಗೆ ತಿರುಗಿ   ತನ್ನ ಅರಳುಗಣ್ಣಗಳನ್ನು ಅರಳಿಸಿ ಕಿಲಕಿಲ ನಕ್ಕಿದ್ದಳು ಸ್ಮಿತಾ.
ವಿವೇಕ ಅವಳತ್ತವೇ ನೋಡಿದ್ದ..ಸ್ಮಿತಾ ಅದೇ ಚಂದದ  ಕಣ್ಣುಗಳಿಂದ ಅವನನ್ನೇ ನೋಡುತ್ತಾ ನಗುತ್ತಿದ್ದಳು.” ಅಂದ್ರೆ ಸ್ಮಿತಾ ನಿನ್ನ….ನಿನ್ನ..” ” ಹೌದು  ಮಿಸ್ಟರ್ ವಿವೇಕ್. ಸ್ಮಿತಾ ಕಣ್ಣು ಆಪರೇಷನ್  ಸಕ್ಸಸ್. ಕಣ್ಣು ತೆರೆದಾಕ್ಷಣ ನಿಮ್ಮನ್ನ  ನೋಡ್ಬೇಕು ಅಂತ  ಸ್ಮಿತಾ, ಒಳಗೆ  ಬರೋಲ್ಲ ಅಂತ  ನೀವು.  ನಾವೇನು ಮಾಡ್ಬೇಕು ಹೇಳಿ. ? ಅದಕ್ಕೆ ಒಂದು ಪುಟ್ಟ  ನಾಟಕ ಮಾಡಿದ್ವಿ..” ಬಾಗಿಲ ಬಳಿ  ಬಂದು  ನಿಂತಿದ್ದ  ಡಾಕ್ಟರ್ ನಗುತ್ತಾ  ಅಂದಾಗ ವಿವೇಕ್ ಅತ್ತ ತಿರುಗಿದ್ದ.”ಹೌದು  ರ್ರೀ  ನಾನೇ ಹೇಳಿದ್ದು ಡಾಕ್ಟರ್ಗೆ..” ಸ್ಮಿತಾಳು ಈ ನಾಟಕದಲ್ಲಿ  ತನ್ನ  ಪಾತ್ರವೂ ಇದೆ  ಅನ್ನೋದನ್ನ ಹೇಳಿದಾಕ್ಷಣ ವಿವೇಕನ ಮುಖದ ತುಂಬಾ ನಗು ಹರಡಿತ್ತು.ಅವಳ ಕಣ್ಣುಗಳನ್ನೇ ನೋಡುತ್ತಿದ್ದ  ಅವನ ಮನ  ಮೆಲ್ಲನೆ ” ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ ”  ಗುನುಗುನುಗಿಸೋಕೆ ಪ್ರಾರಂಭ  ಮಾಡಿತ್ತು.

ಭಾರತೀ ಪ್ರಸಾದ್ ಕೊಡ್ವಕರೆW/O ಕೇಶವ ಪ್ರಸಾದ್ ಕೊಡ್ವಕರೆನೀರ್ಚಾಲು ಅಂಚೆಕುಂಬಳೆ (ವಯ)ಕಾಸರಗೋಡು.  ೬೭೧೩೨೧ಕೇರಳ