ಪುರಾತನ ಕಾಲದಿಂದಲೂ ಉದ್ಭವ ಲಿಂಗವನ್ನು ಪೂಜಿಸಲ್ಪಡುತ್ತಿರುವ ಶಿಶಿಲೇಶ್ವರ

March 23, 2021

ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಕರಾವಳಿ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ನಡುವೆ ಪಸರಿಸಿದ ತುಳುನಾಡು ಸಾವಿರಾರು ದೈವ ದೇವತೆಗಳ ಪುಣ್ಯದ ನೆಲೆವೀಡು.ಇಲ್ಲಿ ಪೂಜಿಸಲ್ಪಡುವ ನೂರಾರು ದೈವ ದೇವಸ್ಥಾನ ಗಳಲ್ಲಿ ಬಹು ಪುರಾತನ ದಿಂದಲೂ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನವೂ ಒಂದು.ಊರಿನ ಹೆಸರಿನೊಂದಿಗೆ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ ಮೇಲಿರುವ ಶಿಲಾಮಯ ಶಿಶಿಲೇಶ್ವರ ದೇವಾಲಯ ಪಕ್ಕದಲ್ಲಿ ನದಿಯಿಂದಾಶ್ರಯಿಸಿದ ಮನಮೋಹಕ ಮತ್ಸ್ಯತೀರ್ಥ. ಇದು ಇಲ್ಲಿಯ ದೃಶ್ಯ ವೈಶಿಷ್ಟ್ಯ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕಾಗಿ 45ಕಿ.ಮೀ. ಮತ್ತು ಉಪ್ಪಿನಂಗಡಿಯಿಂದ ನೆಲ್ಯಾಡಿ-ಕೊಕ್ಕಡ ಮಾರ್ಗವಾಗಿ ಅಷ್ಟೇ ದೂರದಲ್ಲಿದೆ ಶಿಶಿಲ. ಉತ್ತರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗಡಿ ಮತ್ತು ಸರ್ವೆಕಲ್ಲೆಂದೇ ಕರೆಯಲ್ಪಡುವ ತಲೆಯೆತ್ತಿನಿಂತಿರುವ ಅಮೇದಿ ಕಲ್ಲು, ಪೂರ್ವದಲ್ಲಿ ಎತ್ತಿನ ಬುಜಕಲ್ಲು ಮತ್ತು ಉದಯ ಪರ್ವತ ಶ್ರೇಣಿ, ಪಶ್ಚಿಮಕ್ಕೆ ಶಿಂಗಾಣಿ. ಕಲ್ಬಾರ್ ಬೆಟ್ಟಗಳು, ದಕ್ಷಿಣಕ್ಕೆ ಕುಮಾರ ಪರ್ವತ, ಕೋಟೆಬಾಗಿಲು ಗುಡ್ಡಗಳ ಸಾಲು. ಒಟ್ಟಾರೆಯಾಗಿ ಪ್ರಕೃತಿಯೇ ಮೈವೆತ್ತಿ ನಿಂತಂತಹ ಪ್ರದೇಶ ಶಿಶಿಲ.

ಇತಿಹಾಸ :
ಇತಿಹಾಸ ಕಾಲದಲ್ಲಿ ಶಿಶಿಲವೊಂದು ಪ್ರಮುಖ ವ್ಯಾಪಾರ ಕೆಂದ್ರವಾಗಿತ್ತೆಂಬುದಕ್ಕೆ ಇಲ್ಲಿ ಬಲವಾದ ಸಾಕ್ಷಿಗಳಿವೆ. ಬಯಲು ಸೀಮೆ ಮತ್ತು ತುಳುನಾಡನ್ನು ಸಂಪರ್ಕಿಸುವ ದಾರಿಯೊಂದು ಇಲ್ಲಿದೆ.ಈ ದಾರಿಯನ್ನು ಅಚ್ಚುಕಟ್ಟಾಗಿ ಕಲ್ಲುಗಳಿಂದ ಅಲ್ಲಲ್ಲಿ ಕಟ್ಟಿರುವುದು ಕಾಣಬಹುದು. ಇದನ್ನು ಪೇರಾಟದ ಸಾದಿ ಎನ್ನುತ್ತಿದ್ದರು. ತುಳುನಾಡಿನಿಂದ ಬಯಲು ಸೀಮೆಗೆ, ಅಂತೆಯೇ ಬುಲು ಸೀಮೆಯಿಂದ ತುಳುನಾಡಿಗೆ ಕುದುರೆ ಅಥವಾ ಎತ್ತುಗಳ ಮೇಲೆ ಸಾಮಾನು, ಜೀವನಾವಶ್ಯಕ ವಸ್ತುಗಳನ್ನು ಸಾಗಿಸಿತ್ತಿದ್ದರು ಎಂಬುದಕ್ಕೆ ಅಲ್ಲಲ್ಲಿ ಕಾಣುವ ಕೋಟೆಗಳು, ವಿಶ್ರಾಂತಿಯ ಸ್ಥಳಗಳು , ಸಾಮಾನುಗಳನ್ನು ಏರಿಸಿ ಇಳಿಸುವ ಬಯಲುಗಳು, ಅದಲ್ಲೆ ಹೊಂದಿಕೊಂಡಿರುವ ಸ್ಥಳನಾಮಗಳು ಸಾಕ್ಷಿಯನ್ನು ಹೇಳುತ್ತಿವೆ. ಈ ದಾರಿಯ ಮುಂದೆ ಸಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಎಂಬಲ್ಲಿ ಭೈರವೇಶ್ವರ ದೇವಾಲಯದ ಸಮೀಪದಿಂದ ಹೋಗುತ್ತಿತ್ತು. ಈಗಲೂ ಶಿಶಿಲದ ಸಮೀಪದ ಕಾಡುಗಳ, ನದಿದಂಡೆಗಳ, ವಿಶಾಲ ಬಯಲುಗಳಲ್ಲಿರುವ ದೊಡ್ಡ ದೊಡ್ಡ ಪಂಚಾಂಗಗಳು, ಗದ್ದೆಗಳ ಕುರುಹುಗಳು, ತೆಂಗಿನಮರ ಗಾತ್ರದ ವೀಳ್ಯದೆಲೆ ಬಳ್ಳಿಗಳು,ಕಡೆಯವ ಕಲ್ಲುಗಳು, ನೀರಾವರಿಗಾಗಿ ನಾಲೆಗಳಿರುವ ಕೆರೆಗಳುಅಚ್ಚರಿ ಹುಟ್ಟಿಸುತ್ತಿವೆ. ಇಲ್ಲಿಯ ಸುತ್ತಮುತ್ತಲಿನ ಶಿಬರಾಜೆ , ಶಿಬಾಜೆ ,ಶಿರಡಿ, ಶಿರಬಾಗಿಲು ಮುಂತಾದ ಊರುಗಳಿಗೆ ಶಿಶಿಲವೇ ಕೇಂದ್ರವಾಗಿದ್ದಿರಬಹುದೆಂದೂ ಈ ಪ್ರದೇಶದಲ್ಲಿ ಹಿಂದೆ ಹೇರಳ ಜನಸಂಖ್ಯೆ ಇದ್ದಿರಬಹುದೆಂದು ಸಂಶಯ ಹುಟ್ಟಿಸುತ್ತವೆ.

error: Content is protected !!