ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಬೆಳಗಾವಿಯ’ಕಮಲ ಬಸದಿ’

March 26, 2021

ಬೆಳಗಾವಿಯ ಐತಿಹಾಸಿಕ ಕೋಟೆ(ಕಿಲ್ಲಾ)ಯಲ್ಲಿರುವ ಈ ಸ್ಮಾರಕ ಹಿ೦ದಿನ ಕಾಲದ ಇತರ ಪ್ರಸಿದ್ಧ ಸ್ಮಾರಕಗಳಿಗೆ ಹೋಲಿಸಿದರೆ ಚಿಕ್ಕದು.

ಇಪ್ಪತ್ತೆರಡನೇಯ ಜೈನ ತೀರ್ಥ೦ಕರನಾದ ಶ್ರೀ ನೇಮಿನಾಥನ ದೇವಾಲಯವಾದ ಈ ಬಸದಿಗೆ ‘ಕಮಲ ಬಸದಿ’ ಎ೦ಬ ಹೆಸರು ಬ೦ದಿದ್ದು ದೇವಸ್ಥಾನದ ರ೦ಗಮ೦ಟಪದ ಮೇಲ್ಛಾವಣಿಯಲ್ಲಿ ಕೆತ್ತಲ್ಪಟ್ಟ ಸು೦ದರ ಕಮಲದ ಹೂವಿನಿಂದ.

ಚಾಲುಕ್ಯ ಶೈಲಿಯ ಈ ಬಸದಿಯನ್ನು ರಟ್ಟ ರಾಜವಂಶದ ನಾಲ್ಕನೆಯ ಕಾರ್ತವೀರ್ಯನ ಕಾಲದಲ್ಲಿ ಆತನ ಮಂತ್ರಿಯಾದ ಬಿಚಿರಾಜನು ಕಟ್ಟಿಸಿದನು. ರಟ್ಟರು ರಾಷ್ಟ್ರಕೂಟರ ಅಚ್ಚ ಕನ್ನಡ ಸಾಮಂತ ರಾಜರು. ಮೊದಲು ಸುಗಂಧವರ್ತಿ (ಈಗಿನ ಸವದತ್ತಿ) ಮತ್ತು ನಂತರ ವೇಣುಗ್ರಾಮ(ಬೆಳಗಾವಿ)ದಿಂದ ರಾಜ್ಯವಾಳಿದರು. ಅವರ ಕಾಲದಲ್ಲಿ ಪಾರಸಗಡ ಮತ್ತು ಬೆಳಗಾವಿಯ ಕೋಟೆಗಳು ಕಟ್ಟಲ್ಪಟ್ಟವು. ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅದೆಷ್ಟು ನುಣುಪಾಗಿವೆಯೆಂದರೆ, ಅವುಗಳಲ್ಲಿ ನಮ್ಮ ಪ್ರತಿಬಿಂಬ ಕಾಣಬಹುದು.

ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರ
ಬಸದಿಯ ಪ್ರಾಕಾರದಿಂದ ಗರ್ಭಗುಡಿಯವರೆಗೆ ಒಟ್ಟು ನಾಲ್ಕು ಬಾಗಿಲುಗಳಿದ್ದು, ಪ್ರತಿ ಬಾಗಿಲಿನಲ್ಲಿ ಸೂಕ್ಷ್ಮವಾದ ಕೆತ್ತನೆಯ ಕೆಲಸವಿದ್ದು, ಒಳಗಿನ ಕಂಬಗಳಲ್ಲಿ ಕೂಡಾ ಸುಂದರವಾಗಿ ಕಲ್ಲಿನಲ್ಲಿ ಮೂಡಿಸಿದ ಚಿತ್ತಾರಗಳಿವೆ. ಸುಂದರ ವಿನ್ಯಾಸಗಳಲ್ಲದೇ ಅನೇಕ ಪೌರಾಣಿಕ ಪ್ರಸಂಗಗಳ ಕೆತ್ತನೆಯನ್ನು ಕಾಣಬಹುದು. ಗರ್ಭ ಗುಡಿಯಲ್ಲಿರುವ ಭಗವಾನ್ ನೇಮಿನಾಥನ ದಿವ್ಯವಾದ ಕಪ್ಪು ಶಿಲೆಯ ಮೂರ್ತಿ ಗುಡಿಗಿಂತಲೂ ಹಳೆಯದು. ಈ ಮೂರ್ತಿ ಸುಮಾರು ಎರಡು ನೂರು ವರ್ಷಗಳ ಹಿಂದೆ ಕಾಡಿನಲ್ಲಿ ದೊರೆಯಿತು.

ಪ್ರಭಾವಳಿಯು ಅತ್ಯಂತ ವಿಶಿಷ್ಟ
ಭಗವಾನ್ ನೇಮಿನಾಥನ ವಿಗ್ರಹದ ಹಿಂದೆ ಇರುವ ಪ್ರಭಾವಳಿಯು ಅತ್ಯಂತ ವಿಶಿಷ್ಟವಾದದ್ದು. ಕಲ್ಪ ವೃಕ್ಷ, ಕಾಮಧೇನು ಮತ್ತು ಅನೇಕ ಜೀವ ಜಂತುಗಳ ಸೂಕ್ಷ್ಮ ಕೆತ್ತನೆ ಈ ಪ್ರಭಾವಳಿಯನ್ನು ಅಲಂಕೃತಗೊಳಿಸಿ ಗರ್ಭ ಗುಡಿಯ ದಿವ್ಯತೆಗೆ ಮೆರುಗು ತಂದಿವೆ. ನೇಮಿನಾಥನ ವಿಗ್ರಹದ ಜೊತೆಗೆ ಕಪ್ಪುಶಿಲೆಯ ನವಗೃಹವಿದೆ. ಭಗವಾನ್ ಸುಮತಿನಾಥ, ಭಗವಾನ್ ಪಾರ್ಶನಾಥ ಮತ್ತು ಭಗವಾನ್ ಆದಿನಾಥರ ಸುಂದರ ವಿಗ್ರಹಗಳನ್ನು ಕೂಡ ಕಾಣಬಹುದು.

error: Content is protected !!