ಭಾನಾಮತಿ, ಮಾಟ-ಮಂತ್ರದ ಬಗ್ಗೆ ಜನಜಾಗೃತಿ ಅಗತ್ಯ : ಶ್ರೀಶೈಲ ಘೂಳಿ ಅಭಿಪ್ರಾಯ

April 1, 2021

ಮಡಿಕೇರಿ ಏ. 1 : ಭಾನಾಮತಿ ಎಂಬುದು ಮನಸ್ಸಿನ ಮತಿ ಭ್ರಮಣೆ. ಭಾನಾಮತಿ ಹೆಸರಿನಲ್ಲಿ ಕೆಲವರು ಮುಗ್ಧ ಜನರನ್ನು ಶೋಷಣೆಗೆ ಒಳಪಡಿಸಿ ಮೋಸ ಮಾಡುತ್ತಿರುವುದರ ವಿರುದ್ಧ ನಾಡಿನಲ್ಲಿ ಇನ್ನಷ್ಟು ಜನಜಾಗೃತಿ ಮೂಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಂಕಲ್ಪ ಮಾಬೇಕಿದೆ ಎಂದು ಜನ ವಿಜ್ಞಾನ ಚಳವಳಿಯ ಹೋರಾಟಗಾರ, ಕಲ್ಬುರ್ಗಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಸಮುದಾಯ ವಿಭಾಗದ ಪ್ರಾಧ್ಯಾಪಕ ಶ್ರೀಶೈಲ ವೀರಭದ್ರಪ್ಪ ಘೂಳಿ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ.), ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪೆÇ್ರೀತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆ ಡಯಟ್ ಹಾಗೂ ಕ.ರಾ.ವಿ.ಪ.ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ಕೂಡಿಗೆಯ ಕಾಬ್ಸೆಟಿ ಕೇಂದ್ರದಲ್ಲಿ ಜೆ.ಆರ್.ಲಕ್ಷ್ಮಣರಾವ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕಾರ್ಯಾಗಾರದಲ್ಲಿ “ಭಾನಾಮತಿ, ಮಾಟ- ಮಂತ್ರ, ಉತ್ತರ ಕರ್ನಾಟಕದ ಹೋರಾಟಗಳು” ಎಂಬ ವಿಷಯದ ಕುರಿತು ವಿಷಯ ಮಂಡಿಸಿ ಮಾತನಾಡಿದರು.
ಭಾನಾಮತಿ ಎಂಬ ಪದವು ಉರ್ದು ಭಾಷೆಯಿಂದ ಪದವಾಗಿದ್ದು, ‘ಬಾನ’ ಎಂದರೆ ನೆಪ ಮತ್ತು ‘ಮತಿ’ ಎಂದರೆ ಬುದ್ಧಿ ಎಂದು ಅರ್ಥ ವಿವರಣೆಯೊಂದಿಗೆ ಭಾನಾಮತಿಯ ವ್ಯಾಖ್ಯಾನ ನೀಡಿದ ಅವರು, ಭಾನಾಮತಿ ಹೆಸರಿನಲ್ಲಿ ಮುಗ್ಧ ಮನಸ್ಸಿನ ಜನರನ್ನು ಬುದ್ಧಿ ಭ್ರಮಣೆಗೊಳಿಸುವ ಮೂಲಕ ಸಮಾಜದಲ್ಲಿ ಮೌಢ್ಯ ಮತ್ತು ಕಂದಾಚಾರ ನಡೆಸುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಇಂತಹ ಜನ ವಿಜ್ಞಾನ ಚಳವಳಿಗಳು ಪೂರಕವಾಗಿದೆ ಎಂದರು.
‘ಭಾನಾಮತಿ’ ಎಂಬುದು ಯಾವುದೇ ಒಂದು ಅಲೌಕಿಕವಾದ ವಿದ್ಯೆ ಅಲ್ಲ. ಇದನ್ನು ನಾವು ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ಭಾನಾಮತಿ ಹೆಸರಿನಲ್ಲಿ ಪವಾಡಪುರಷರೆಂಬ ಹೆಸರಿನಲ್ಲಿ ಮಾಟಗಾರರು ಜನರನ್ನು ಅಂಧ ಶ್ರದ್ಧೆಗೆ ಒಳಪಡಿಸಿ ವಂಚನೆಗೊಳಿಸುವಲ್ಲಿ ಮುಂದಾಗಿರುತ್ತಾರೆ ಎಂದು ಶ್ರೀಶೈಲಾ ಘೂಳಿ ಹೇಳಿದರು.
ಖಿನ್ನತೆಗೆ ಒಳಗಾದ ಮುಗ್ಧ ಜನರ ಮೈ ಮೇಲೆ ದೇವರು ಮತ್ತು ದೆವ್ವ ಬರುವುದು, ಮನೆ ಮೇಲೆ ಕಲ್ಲು ಹೊಡೆಯುವುದು, ಮನೆಯಲ್ಲಿ ಇದ್ದಕ್ಕಿದಂತೆ ಬೆಂಕಿ ಹತ್ತಿಕೊಳ್ಳುವುದು, ಬಟ್ಟೆ ಸುಡುವುದು ಇತ್ಯಾದಿ ಪ್ರಸಂಗಗಳನ್ನು ಸೃಷ್ಠಿಸುವ ಮೂಲಕ ಜನರನ್ನು ವಂಚನೆಗೊಳಿಸುತ್ತಿರವ ಪ್ರಕರಣಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ವಿಜ್ಞಾನ ಪರಿಷತ್ ಮತ್ತು ಇತರೆ ಜನಪರ ಸಂಘಟನೆಗಳು ಜತೆಗೂಡಿ ಭಾನಾಮತಿ ವಿರುದ್ಧ ಜನ ಜಾಗೃತಿ ಮೂಡಿಸುವ ಮೂಲಕ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಲ್ಲಾ ಕೊಡಗು ಜನಾಂದೋಲನ ವೇದಿಕೆಯ ಸಂಚಾಲಕ, ಜಿ.ಪಂ.ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಮೌಢ್ಯಾಚರಣೆ, ಕಂದಾಚಾರವನ್ನು ಬುಡಸಮೇತ ತೆಗೆದು ಹಾಕಲು ಇಂತಹ ಜನಜಾಗೃತಿ ಕಾರ್ಯಾಗಾರಗಳು ಸಹಕಾರಿಯಾಗಿವೆ. ವಿಜ್ಞಾನ ಪರಿಷತ್ ರಾಜ್ಯದಲ್ಲಿ ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ವಿಜ್ಞಾನ ಪರಿಷತ್ತು ಜತೆ ಇತರೆ ಪ್ರಗತಿಪರ ಸಂಘಟನೆಗಳು ಜತೆಗೂಡಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಲು ಜನಾಂದೋಲನ ನಡೆಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ರಾ.ವಿ.ಪ.ಕಾರ್ಯಕಾರಿ ಸಮಿತಿ ಸದಸ್ಯ ಮಂಡ್ಯದ ರಾಮಚಂದ್ರ ಮಾತನಾಡಿ, ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಸಲುವಾಗಿ ವಿಜ್ಞಾನ ಪರಿಷತ್ತಿನ ವತಿಯಿಂದ ಇಂತಹ ಕಾರ್ಯಾಗಾರ ಸಂಘಟಿಸಲಾಗಿದೆ ಎಂದರು.
ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಸಿ.ಎಂ.ಮಹಾಲಿಂಗಯ್ಯ, ಕ.ರಾ.ವಿ.ಪ. ರಾಜ್ಯ ಸಮಿತಿಯ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರೀಸ್ವಾಮಿ ಮಾತನಾಡಿದರು.
ವಿಜ್ಞಾನ ಕಾರ್ಯಕ್ರಮ ಸಂಘಟಕರೂ ಆದ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ಪರಿಷತ್ತಿನ ಸದಸ್ಯರಾದ ವೆಂಕಟನಾಯಕ್, ಎಸ್.ನಾಗರಾಜ್, ಡಯಟ್ ಸಂಸ್ಥೆಯ ಉಪನ್ಯಾಸಕ ಯು.ಸಿದ್ದೇಶಿ, ಶಿಕ್ಷಕಿ ಎನ್.ಕೆ.ಮಾಲಾದೇವಿ ಹಾಜರಿದ್ದರು.
ಹಾಸನ ಜಿಲ್ಲಾ ತಂಡದ ವಿಜ್ಞಾನ ಕಾರ್ಯಕರ್ತರು ವಿಜ್ಞಾನ ಗೀತೆ ಹಾಡಿದರು.

error: Content is protected !!