400 ಅಡಿ ಎತ್ತರದಿಂದ ಬಳುಕುತ ಭೋರ್ಗರೆಯುತ್ತಿರುವ ಅಂಬೋಲಿ ಜಲಪಾತ

April 3, 2021

ಹಚ್ಚಹಸಿರಿನ ಗಿಡಮರಗಳ ಮಧ್ಯೆ, ಸದ್ದಿಲ್ಲದೆ ಸುಮಾರು 400 ಅಡಿ ಎತ್ತರದಿಂದ ಬೀಳುವ ಸುಂದರವಾದ ಜಲಪಾತ ಅಂಬೋಲಿ. ಝುಳು-ಝುಳು ನಿನಾದದೊಂದಿಗೆ ನೊರೆ ನೊರೆ ಹಾಲಿನಂತೆ ಧರೆಯಿಂದ ತೊರೆಗೆ ಬೀಳುವ ಜಲಪಾತದ ಸೊಬಗನ್ನ ನೋಡುವುದೇ ಒಂದು ಸೊಗಸು. ಮಹಾರಾಷ್ಟ್ರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಜಲಪಾತವನ್ನು ನೋಡಲು ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಜನರು ಭೇಟಿ ನೀಡುತ್ತಾರೆ. ಒಟ್ಟಿನಲ್ಲಿ ಮಳೆ ಮತ್ತು ಹಚ್ಚ ಹಸಿರು ಎರಡನ್ನೂ ಇಷ್ಟಪಡುವವರಿಗೆ ಅಂಬೋಲಿ ಜಲಪಾತ ಅತ್ಯುತ್ತಮ ತಾಣ.

ಜಲಪಾತವು ಅಂಬೋಲಿ ಗಿರಿಧಾಮದ ಬಳಿ ಇರುವುದರಿಂದ ಇದಕ್ಕೆ ಅಂಬೋಲಿ ಜಲಪಾತ ಎಂಬ ಹೆಸರು ಬಂದಿದೆ. ಅಂಬೋಲಿ ಭಾರತದ ಪಶ್ಚಿಮ ಭಾಗದ ಸಹ್ಯಾದ್ರಿ ಬೆಟ್ಟಗಳಲ್ಲಿ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ 690 ಮೀಟರ್ ಎತ್ತರದಲ್ಲಿದೆ. ಇದು ಅಸಾಮಾನ್ಯ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವುದಕ್ಕೆ ವಿಶ್ವದ ಪರಿಸರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅಂಬೋಲಿ ಜಲಪಾತವು ಅಂಬೋಲಿಯಲ್ಲಿ ಕಂಡುಬರುವ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಅಂಬೋಲಿ ಜಲಪಾತದ ಪಕ್ಕದಲ್ಲಿಯೇ ಇತರ ಮಿನಿ ಜಲಪಾತಗಳಿದ್ದು, ಸುತ್ತಮುತ್ತಲಿನ ಹಸಿರು ಸ್ಥಳದ ಸೌಂದರ್ಯ ಮತ್ತು ಆಕರ್ಷಣೆಯನ್ನು ಹೆಚ್ಚಿಸಿದೆ. ದಂಪತಿಗಳು, ಮಕ್ಕಳು, ಸ್ನೇಹಿತರು ಹೀಗೆ ಪ್ರತಿಯೊಬ್ಬರು ಅಂಬೋಲಿಯನ್ನು ವೀಕ್ಷಿಸಲು ತಂಡೋಪತಂಡವಾಗಿ ಬರುತ್ತಾರೆ. ಇದು ಮಹಾರಾಷ್ಟ್ರದ ಕೊನೆಯ ಗಿರಿಧಾಮವಾಗಿದ್ದು, ವರ್ಷಪೂರ್ತಿ ಆಹ್ಲಾದಕರ ಹವಮಾನ ಹೊಂದಿರುತ್ತದೆ. ಗೋವಾ ಮತ್ತು ಬೆಳಗಾವಿಯ ಪ್ರವಾಸಿಗರು ವಾರಾಂತ್ಯದಲ್ಲಿ ಅಂಬೋಲಿಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ.

ಜಲಪಾತದ ವಿಶೇಷವೆಂದರೆ ಕಾಂಕ್ರೀಟ್ ಮೆಟ್ಟಿಲುಗಳು ಪ್ರವಾಸಿಗರನ್ನು ಜಲಪಾತದವರೆಗೆ ಕರೆದೊಯ್ಯುತ್ತದೆ. ನೀವು ಬೇಕಾದರೆ ಮೆಟ್ಟಿಲುಗಳ ಮೇಲೆ ಸುಮ್ಮನೆ ಕುಳಿತುಕೊಳ್ಳಬಹುದು, ವಿಶ್ರಾಂತಿ ಪಡೆಯಬಹುದು, ಇಲ್ಲವೇ ಭವ್ಯವಾದ ಜಲಪಾತವನ್ನು ವೀಕ್ಷಿಸಬಹುದು. ಸಾಮಾನ್ಯವಾಗಿ ಅಂಬೋಲಿಗೆ ಭೇಟಿ ನೀಡಿದಾಗ ಪ್ರವಾಸಿಗರು ಶುದ್ಧ ನೀರಿನಲ್ಲಿ ಸ್ನಾನ ಮಾಡುವುದನ್ನು ಮರೆಯುವುದಿಲ್ಲ. ಈ ಪ್ರದೇಶವು ತುಂಬಾ ಚಿಕ್ಕದಾಗಿರುವ ಕಾರಣ, ಬಹಳ ಬೇಗನೆ ಜನಸಂದಣಿಯಿಂದ ಕೂಡಿರುತ್ತದೆ.

ಅಂಬೋಲಿ ಜಲಪಾತದ ಬಳಿ ಏನೆಲ್ಲಾ ಇದೆ?

ಪ್ರವಾಸಿಗರು ಜಲಪಾತಕ್ಕೆ ಹತ್ತಿರವಿರುವ ಅಂಬೋಲಿ ಫಾರೆಸ್ಟ್ ಪಾರ್ಕ್‌ಗೆ ಭೇಟಿ ನೀಡಬಹುದು. ಅಲ್ಲದೆ, ಮಹಾದೇವ್‌ಗಡ್ ಪಾಯಿಂಟ್ ಮತ್ತು ಕವಲೆಸಾಡ್ ಪಾಯಿಂಟ್‌ನಂತಹ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಬಹುದು.

error: Content is protected !!