ಮೋಸ್ಟ್ ವಾಂಟಡ್ ಬೋಜನ ಪತ್ತೆಗೆ ತನಿಖಾ ತಂಡಗಳ ರಚನೆ

April 5, 2021

ಮಡಿಕೇರಿ ಏ.5 : ಪೊನ್ನಂಪೇಟೆ ತಾಲೂಕಿನ ಮುಗುಟಗೇರಿಯಲ್ಲಿ ಏ.3ರಂದು ಮನೆಯೆ ಹೆಂಚು ತೆಗೆದು ಪೆಟ್ರೋಲ್ ಸುರಿದು 6 ಮಂದಿ ಅಮಾಯಕರ ಹತ್ಯೆಗೆ ಕಾರಣನಾದ ಆರೋಪಿ ಪಣಿಎರವರ ಬೋಜ ಘಟನೆ ನಡೆದ ಬಳಿಕ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ.
ಈತನ ಪತ್ತೆಗಾಗಿ ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಮಧುಕರ್ ಪವಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ನೇತೃತ್ವದಲ್ಲಿ ಸುಮಾರು ತನಿಖಾ ತಂಡಗಳನ್ನು ಈಗಾಗಲೇ ರಚಿಸಿದ್ದಾರೆ. ವಿವಿಧ ತನಿಖಾ ತಂಡಗಳು 6 ಮಂದಿಯನ್ನು ಜೀವಂತವಾಗಿ ದಹಿಸಿ ಕೊಂದ ಕೊಲೆ ಆರೋಪಿಗಾಗಿ ಕಳೆದ 3 ದಿನಗಳಿಂದಲೂ ಶೋಧ ನಡೆಸುತ್ತಿದ್ದರೂ ಕೂಡ ಆರೋಪಿ ಬೋಜ ಪತ್ತೆಯಾಗಿಲ್ಲ. ಹೀಗಾಗಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರು ಆರೋಪಿ ಬೋಜನ ಪತ್ತೆಗಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಮುಗುಟಗೇರಿಯ ಮುದ್ದಿಯಡ ನರೇಶ್ ಅವರ ಲೈನ್ ಮನೆಯಲ್ಲಿ ವಾಸವಿದ್ದ ಆರೋಪಿ ಪಣಿ ಎರವರ ಬೋಜ ಹೈಸೊಡ್ಲೂರು ಗ್ರಾಮದ ಶ್ರೀಮಂಗಲ ಹೋಬಳಿಯ ನಿವಾಸಿಯಾಗಿದ್ದಾನೆ. 55 ವರ್ಷ ವಯೋಮಾನದ ಬೋಜ, 5.5 ಅಡಿ ಎತ್ತರವಿದ್ದು, ಆತನ ಬಾವ ಚಿತ್ರವನ್ನೂ ಕೂಡ ಪ್ರಕಟಣೆಯ ಮೂಲಕ ಹೊರಡಿಸಲಾಗಿದೆ.
ಈ ವ್ಯಕ್ತಿ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈತನ ಬಗ್ಗೆ ಮಾಹಿತಿ ದೊರೆತಲ್ಲಿ ವಿರಾಜಪೇಟೆ ಡಿವೈಎಸ್‍ಪಿ 9480804922, ಗೋಣಿಕೊಪ್ಪ ವೃತ್ತ ನಿರೀಕ್ಷಕರು 9480804935, ಪೊನ್ನಂಪೇಟೆ ಉಪ ನಿರೀಕ್ಷಕರು 9480804959, ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ 9480804957 ಅಥವಾ ಕೊಡಗು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ. 08272-228330 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಮನವಿ ಮಾಡಿದೆ.

error: Content is protected !!