ಕೋವಿಡ್ ಲಸಿಕೆ ಗುಣಮಟ್ಟದ ಬಗ್ಗೆ ಸಂಶಯ ಸರಿಯಲ್ಲ : ಸಂಸದ ಪ್ರತಾಪ್ ಸಿಂಹ

April 5, 2021

ಮಡಿಕೇರಿ ಏ.5 : ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಮತ್ತೆ ಕೊರೊನಾ ಸೋಂಕು ತಗುಲಿದರೆ ಲಸಿಕೆಯ ಗುಣಮಟ್ಟ ಮತ್ತು ಅದರ ಸಾಮಥ್ರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕೋವಿಡ್ ಲಸಿಕೆಯ 2 ಡೋಸ್‍ಗಳನ್ನು ಪಡೆದುಕೊಂಡ ಬಳಿಕವೂ ಅವರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಭಾಗಮಂಡಲದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ರಷ್ಯಾದ ಸ್ಪುಟ್ನಿಕ್, ಜಾನ್ಸ್‍ನ್ & ಜಾನ್ಸ್‍ನ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ಅಥವಾ ಬೇರೆ ಯಾವುದೇ ಲಸಿಕೆ ಉತ್ಪಾದನಾ ಸಂಸ್ಥೆಗಳು ಕೂಡ ಶೇಕಡ 100ರಷ್ಟು ಕೊರೊನಾ ಸೋಂಕನ್ನು ಈ ಲಸಿಕೆಗಳು ತಡೆಯುತ್ತವೆ ಎಂದು ಎಲ್ಲಿಯೂ ಹೇಳಿಲ್ಲ. ಕೇವಲ ಶೇಕಡ 70, 80 ಅಥವಾ 85 ಮಾತ್ರವೇ ತಡೆಯುತ್ತದೆ ಎಂದು ಹೇಳಿವೆ. ಒಂದೆರಡು ಪ್ರಕರಣಗಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಅಥವಾ ಬೇರೆ ಕಂಪೆನಿಗಳ ಲಸಿಕೆ ಪಡೆದವರಿಗೆ ಮತ್ತೆ ಕೋವಿಡ್ ಸೋಂಕು ತಗಲಿದೆ ಎಂದರೆ ಲಸಿಕೆಯ ಗುಣಮಟ್ಟ ಅಥವಾ ಅದರ ಸಾಮಥ್ರ್ಯವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಹೇಳಿದರು.
ಎಂ.ಆರ್. ರವಿ ವಿಚಾರದಲ್ಲೂ ಹಾಗೆಯೇ ಆಗಿರಬಹುದು. ಅವರ ದೇಹದಲ್ಲಿ ಆ್ಯಂಟಿ ಬಾಡಿಸ್ ಬೆಳವಣಿಗೆ ಆಗದಿರಬಹುದು ಅಥವಾ ಅವರ ದೇಹದೊಳಗಿನ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗಿರಬಹುದು. ಅದರಿಂದ ಅವರಿಗೆ ಕೋವಿಡ್ ಬಂದಿರಬಹುದು ಎಂದು ಅಭಿಪ್ರಾಯಪಟ್ಟರು. ಸಾರ್ವಜನಿಕರು ಈ ವಿಚಾರವನ್ನೇ ಮುಂದಿಟ್ಟುಕೊಂಡು ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿಯೊಬ್ಬರು ಕೂಡ ಲಸಿಕೆ ಪಡೆಯಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಏರಿಕೆಯಾಗುತ್ತದೆ. ದೇಶದ ಪ್ರಧಾನಿಗಳು ಕೂಡ ಲಸಿಕೆ ಪಡೆದಿದ್ದಾರೆ. ತಾನು ಕೂಡ ಏ.9ರಂದು ಲಸಿಕೆ ಪಡೆಯುವುದಾಗಿ ಮಾಹಿತಿ ನೀಡಿದರು.

error: Content is protected !!