ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ !

April 6, 2021

ಮಡಿಕೇರಿ ಏ.6 : “ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು” ಹೀಗೆಂದು ತನ್ನ ಮಗಳೊಂದಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದವನು ಮುಗುಟಗೇರಿಯಲ್ಲಿ 7 ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡ ದುಷ್ಕರ್ಮಿ ಪಣಿ ಎರವರ ಬೋಜ.
ಮುಗುಟಗೇರಿಯ ಲೈನ್ ಮನೆಯ ಮೇಲೇರಿ ಮಲಗಿದ್ದವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬಂದವನೇ ನಿಗೂಢ ಜಾಗದಿಂದ ತನ್ನ ಮಗಳಿಗೆ ಕರೆ ಮಾಡಿದ್ದಾನೆ. ಈ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾತು ಮುಂದುವರೆಸಿರುವ ಬೋಜ “ಅವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ, ಅವಳ ಗೋಳು ನೋಡು ಹೋಗು, ಈಗ ನಾನು ಕೂಡ ಸಾಯ್ತೀನಿ ಎಂದು ಕರೆ ಕಟ್ ಮಾಡಿದ್ದಾನೆ.
ತನಿಖೆಯ ವೇಳೆ ಈ ಆಡಿಯೋ ತುಣುಕು ಬಹಿರಂಗಗೊಂಡಿದೆ. ಇದೀಗ ಬೋಜ ಆತ್ಮಹತ್ಯೆಗೆ ಶರಣಾಗಿರುವುದು ಖಾತ್ರಿಯಾಗಿದ್ದು, ಪೊನ್ನಂಪೇಟೆ ಸಮೀಪ ತಾನಿದ್ದ ಲೈನ್ ಮನೆಯ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ.
ಮತ್ತೊಂದೆಡೆ ಮೈಸೂರು ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ತೋಲ ಅವರ ಪತ್ನಿ ಭಾಗ್ಯ (28) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಮೃತ ಪಟ್ಟಿದ್ದರು. ಮುಗುಟಗೇರಿ ಘಟನೆಯಲ್ಲಿ ಮೃತರಾದವರ ಸಂಖ್ಯೆ ಈಗ 7 ಕ್ಕೆ ಏರಿಕೆಯಾಗಿದೆ.
ಬೋಜನ ಸಾವಿನಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ 7 ಅಮಾಯಕರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಬೋಜನ ಮನೋಸ್ಥಿತಿಯ ಬಗ್ಗೆ ಸಮಾಜದಲ್ಲಿ ದಿಕ್ಕಾರದ ಮನೋಭಾವನೆ ಮೂಡಿದೆ.

error: Content is protected !!