ಗಿರಿಜನ ಹಾಡಿ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಸೆರೆ

April 7, 2021

ಮಡಿಕೇರಿ ಏ.7 : ಗಿರಿಜನ ಹಾಡಿಯ ಬಾಲಕಿಯ ಮೇಲೆ ಅದೇ ಹಾಡಿಯ ಜೇನುಕುರುಬ ಸಮುದಾಯದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಆರೋಪಿ ಪೆÇಲೀಸರ ಅತಿಥಿಯಾಗಿದ್ದಾನೆ.
ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗ್ರಾಮವೊಂದರ ಲೋಹಿತ್ (20) ಎಂಬಾತನೇ ಬಂಧಿತ ಆರೋಪಿ.
ಬಾಲಕಿಯ ತಾಯಿ ಹಾಡಿಯ ಕೂಲಿ ಕಾರ್ಮಿಕ ಮಹಿಳೆಯಾಗಿದ್ದು, ತಂದೆ 15 ವರ್ಷಗಳಿಂದ ಇವರೊಂದಿಗಿಲ್ಲ ಎನ್ನಲಾಗಿದೆ. 10ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಬಾಲಕಿ ಮನೆಯಲ್ಲಿಯೇ ಇದ್ದು, ಆಕೆಯನ್ನು ಗಮನಿಸಿದ ಆಶಾ ಕಾರ್ಯಕರ್ತೆಯರು ಸಂಶಯಗೊಂಡು ಆಲೂರು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಪರೀಕ್ಷೆ ಮಾಡಿಸಿದ್ದಾರೆ.
ಆಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಗಳನ್ನು ತಾಯಿ ವಿಚಾರಿಸಿದಾಗ, ಲೋಹಿತ್ ಎಂಬಾತ ಒಂದು ವರ್ಷದಿಂದ ತನ್ನನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಂಬಿಸಿ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಹಲವಾರು ಬಾರಿ ಅತ್ಯಾಚಾರವೆಸಗಿರುವುದಾಗಿ ಆಕೆ ಬಾಯಿಬಿಟ್ಟಿದ್ದಾಳೆ.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಲೋಹಿತ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

error: Content is protected !!