ಮುಗುಟಗೇರಿ ಅಗ್ನಿ ಅನಾಹುತ : ಮತ್ತೊಂದು ಸಾವು : ಮೃತರ ಸಂಖ್ಯೆ 8 ಕ್ಕೆ ಏರಿಕೆ

ಮಡಿಕೇರಿ ಏ.7 : ಮುಗುಟಗೇರಿಯಲ್ಲಿ ಕೊಲೆ ಉದ್ದೇಶಕ್ಕಾಗಿ ನಡೆಸಿದ ಸಾಮೂಹಿಕ ದಹನ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಣಿ ಎರವರ ಪಾಚೆ(65) ಕೂಡ ಬುಧವಾರ ಮುಂಜಾನೆ 3.35ರ ವೇಳೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಆ ಮೂಲಕ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಜೀವ ಕಳೆದು ಕೊಂಡವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕೊಲೆ ಆರೋಪಿ ಬೋಜ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಒಟ್ಟು 9ಕ್ಕೆ ಏರಿಕೆಯಾಗಿದೆ.
ಮೃತಪಟ್ಟ ಮಹಿಳೆ ಪಾಚೆ ತೋಲನ ಪತ್ನಿ ಭಾಗ್ಯಳ ಅಜ್ಜಿಯಾಗಿದ್ದು, ಏ.3ರಂದು ಮುಗುಟಗೇರಿಯ ಮಂಜು ಎಂಬವರ ಲೈನ್ಮನೆಯಲ್ಲಿ ಈಕೆ ಕೂಡ ರಾತ್ರಿಯ ಗಾಢ ನಿದ್ದೆಯಲ್ಲಿದ್ದಳು. ಮೂಲತಃ ಕೆದಮುಳ್ಳೂರು ಸಮೀಪದ ಬ್ಯಾರಿಕಾಡು ಪೈಸಾರಿಯಲ್ಲಿ ವಾಸವಿದ್ದ ಪಾಚೆ ಘಟನೆ ನಡೆದ ಶನಿವಾರದ ದಿನದಂದು ಮುಗುಟಗೇರಿ ಸಮೀಪದ ಲೈನ್ ಮನೆಯಲ್ಲಿ ವಾಸವಿರುವ ಸಂಬಂಧಿಯಾಗಿದ್ದ ಮಂಜುವಿನ ಮನೆಗೆ ಆಗಮಿಸಿದ್ದರು. ಈಕೆಯ ಅಂತ್ಯ ಸಂಸ್ಕಾರ ಬುಧವಾರ ಹುಣಸೂರಿನಲ್ಲಿ ನೆರವೇರಿಸಲಾಗಿದೆ. ಪೆಟ್ರೋಲ್ ಸುರಿದು ಅಮಾಯಕರ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಘಟನೆಯ ನಂತರ ಆರೋಪಿ ಬೋಜ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.