ಬೇತ್ರಿ ಬಳಿ ಜೀಪು, ಖಾಸಗಿ ಬಸ್ ಡಿಕ್ಕಿ : ಮಹಿಳೆ ಸಾವು : ಇಬ್ಬರ ಸ್ಥಿತಿ ಗಂಭೀರ

April 7, 2021

ಮಡಿಕೇರಿ ಏ.7 : ಜೀಪು ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಜೀಪಿನಲ್ಲಿದ್ದ ಮಹಿಳೆಯೋರ್ವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮೂರ್ನಾಡು ಸಮೀಪದ ಎಂ. ಬಾಡಗ ಗ್ರಾಮದಲ್ಲಿ ನಡೆದಿದೆ. ಬಿಳಿಗೇರಿ ನಿವಾಸಿ ಮುಕ್ಕಾಟಿ ಲಕ್ಷ್ಮಿ(70) ಎಂಬವರೇ ಮೃತಪಟ್ಟ ಮಹಿಳೆಯಾಗಿದ್ದು, ಜೀಪು ಚಾಲನೆ ಮಾಡುತ್ತಿದ್ದ ಮೋಹನ್ ಕುಮಾರ್ ಹಾಗೂ ಅವರ ಪತ್ನಿ ಧರಣಿ ಎಂಬವರು ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿವೃತ್ತ ಸೈನಿಕರಾಗಿರುವ ಎಂ.ಪಿ. ಮೋಹನ್ ಕುಮಾರ್(49) ತಮ್ಮ ತಾಯಿ ಲಕ್ಷ್ಮಿ ಮತ್ತು ಪತ್ನಿ ಧರಣಿ(42) ಅವರೊಂದಿಗೆ ಜೀಪಿನಲ್ಲಿ(ಕೆ.ಎ.12-ಪಿ-2798)ನಲ್ಲಿ ಕಾರ್ಯ ನಿಮಿತ್ತ ಮೂರ್ನಾಡು ರಸ್ತೆಯ ಮೂಲಕ ಬೇತ್ರಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮೂರ್ನಾಡು ಎಂ.ಬಾಡಗ ಗ್ರಾಮದ ತಿರುವು ರಸ್ತೆಯಲ್ಲಿ ಎದುರಿನಿಂದ ಬಂದ ಖಾಸಗಿ ಬಸ್(ಕೆ.ಎ.12-ಎ.-5211) ಜೀಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಜೀಪಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಜೀಪಿನಲ್ಲಿದ್ದ ಲಕ್ಷ್ಮಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪು ಚಾಲನೆ ಮಾಡುತ್ತಿದ್ದ ಮೋಹನ್ ಕುಮಾರ್ ಮತ್ತು ಅವರ ಪತ್ನಿ ಧರಣಿ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನ ವಿರುದ್ಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!