ಅರೆಭಾಷೆ ಸಂಸ್ಕೃತಿ ಬೆಳವಣಿಗೆಗೆ ಮತ್ತಷ್ಟು ಕಾರ್ಯಕ್ರಮ ರೂಪಿಸಿ : ಬೆಪ್ಪುರನ ಮೇದಪ್ಪ ಸಲಹೆ

April 7, 2021


ಮಡಿಕೇರಿ ಏ.7 : ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮಗಳು ನಡೆಯಬೇಕೆಂದು ಮಡಿಕೇರಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬೆಪ್ಪುರನ ಮೇದಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ಏರ್ಪಡಿಸಲಾಗಿದ್ದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ಬುಧವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅರೆಭಾಷೆ ಸಂಸ್ಕೃತಿ, ಜಾನಪದ ಕಲೆಗಳಿಗೆ ಒತ್ತು ನೀಡುತ್ತಿರುವುದು ಮೆಚ್ಚುವಂತದ್ದು, ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಪೂರ್ವಾಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ಕೊಡಗಿನಲ್ಲಿ ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರಗಳು ವಿಶಿಷ್ಟವಾಗಿದ್ದು, ಸಂಪ್ರದಾಯಗಳನ್ನು ಚಿತ್ರಕಲೆಗಳ ಮೂಲಕ ಹೊರತಂದಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿರುವ ಜಾನಪದ ಲೋಕದಲ್ಲಿ ಅರೆಭಾಷೆ ಸಂಸ್ಕೃತಿ, ಕಲೆಗಳ ಚಿತ್ರಗಳನ್ನು ಅಳವಡಿಸುವಂತಾಗಬೇಕು. ಜಾನಪದ ಲೋಕಕ್ಕೆ ಭೇಟಿ ನೀಡುವ ಕಲಾಭಿಮಾನಿಗಳು ಕೊಡಗಿನ ಚಿತ್ರಕಲೆಗಳನ್ನು ವೀಕ್ಷಿಸಲು ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಜಾನಪದ ಲೋಕದ ಅಧ್ಯಕ್ಷರೊಂದಿಗೆ ಚರ್ಚಿಸುವಂತೆ ಕಾವೇರಮ್ಮ ಸೋಮಣ್ಣ ಅವರು ಸಲಹೆ ಮಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಕಳೆದ ಒಂದು ವರ್ಷದಿಂದ ಕೊರೊನಾ ವೈರಸ್ ನಡುವೆಯೂ ಸಹ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಾಟಕ, ರಂಗಭೂಮಿ, ಚಿತ್ರಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಇದ್ದಲ್ಲಿ ಅರೆಭಾಷೆ ಸಾಂಸ್ಕøತಿಕ ವಿನಿಯಮಕ್ಕೆ ಸಹಕಾರಿಯಾಗಲಿದೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಅಭಿಪ್ರಾಯಪಟ್ಟರು.
ಅಕಾಡೆಮಿ ಸದಸ್ಯರಾದ ಸ್ಮಿತಾ ಅಮೃತರಾಜ್ ಅವರು ಮಾತನಾಡಿ ಕಲೆಯನ್ನು ಅರ್ಥಮಾಡಿಕೊಳ್ಳಲು ಭಾಷೆ ಬೇಕಿಲ್ಲ. ಆ ನಿಟ್ಟಿನಲ್ಲಿ ಹೊಸ ಪ್ರಯೋಗವನ್ನು ಅಕಾಡೆಮಿ ವತಿಯಿಂದ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು.
ಮಡಿಕೇರಿ ತಾ.ಪಂ.ಸದಸ್ಯರಾದ ಕೊಡಪಾಲು ಗಣಪತಿ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿಗೆ ಸಂಬಂಧಿಸಿದಂತೆ ಕಲಾವಿದರು ಬಿಡಿಸಿರುವ ಚಿತ್ರಗಳನ್ನು ಗಮನಿಸಿದಾಗ ಇಡೀ ಚಿತ್ರವೇ ಕಣ್ಣು ಮುಂದೆ ನಿಲ್ಲುತ್ತದೆ. ‘ರವಿವರ್ಮ’ ಚಿತ್ರಕಲೆಗಳನ್ನು ನೋಡಿದಂತಾಗುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತೋಂಟಬೈಲು ಪಾರ್ವತಿ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರವು ಒಂದು ಅದ್ಭುತ ಶಿಬಿರವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದರಾದ ಕಾಶಿನಾಥ್ ಇತರರು ಚಿತ್ರಕಲೆ ಬಿಡಿಸುವಲ್ಲಿನ ಸಂದರ್ಭ ಕುರಿತು ಅನುಭವ ಹಂಚಿಕೊಂಡರು. ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ಕೆ.ಸಿ.ದಯಾನಂದ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಕುಡೆಕಲ್ಲು ಸಂತೋಷ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಎಚ್.ಟಿ.ಅನಿಲ್, ಪ್ರಮುಖರಾದ ಕೋಡಿ ಚಂದ್ರಶೇಖರ್ ಇತರರು ಇದ್ದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರು. ಡಾ.ಕೆ.ಸಿ.ದಯಾನಂದ ವಂದಿಸಿದರು.
ಗಮನ ಸೆಳೆದ ಚಿತ್ರಕಲಾ ಪ್ರದರ್ಶನ: ‘ಒಂದು ಚಿತ್ರ ಸಾವಿರ ಪದಗಳಿಗೆ ಸಮ’ ಎಂಬಂತೆ ಒಂದೊಂದು ಚಿತ್ರಕಲೆಗಳನ್ನು ನೋಡುತ್ತಾ ಹೋದರೆ ಪುಟಗಟ್ಟಲೆ ವರ್ಣಿಸಬಹುದಾಗಿದೆ. ಆ ದಿಸೆಯಲ್ಲಿ ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಒಂದು ವಾರಗಳ ಕಾಲ ನಡೆದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಸಮಾರೋಪ ಸಮಾರಂಭದಲ್ಲಿ ಕೊಡಗಿನ ಸಂಸ್ಕೃತಿ ಕಲಾಚಿತ್ರಗಳು ಕಣ್ಮನ ಸೆಳೆಯುವುದು ವಿಶೇಷವೇ ಸರಿ.
ಅಜ್ಜಿ ಮೊಮ್ಮಗುವನ್ನು ಸ್ನಾನ ಮಾಡಿಸುವ ದೃಶ್ಯವಂತು ಪದೇ ಪದೇ ನೋಡಬೇಕೆನಿಸುತ್ತದೆ. ಭಾಗಮಂಡಲ ಭಗಂಡೇಶ್ವರ ದೇವಾಲಯದ ಗೋಪುರ ಹಾಗೂ ತ್ರಿವೇಣಿ ಸಂಗಮ, ಹೊನ್ನಮ್ಮನ ಕೆರೆ ಹಾಗೂ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ರಾಜಾಸೀಟು, ಕೊಡಗಿನ ಐನ್‍ಮನೆ, ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಹೀಗೆ ಹತ್ತು ಹಲವು ಕಲಾಚಿತ್ರಗಳು ಗಮನ ಸೆಳೆಯುತ್ತವೆ. ಚಿತ್ರಕಲೆಗಳು ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ಆಕರ್ಷಣಿಯವಾಗಿವೆ.

error: Content is protected !!