ಮಡಿಕೇರಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

April 7, 2021

ಮಡಿಕೇರಿ ಏ.7 : ನಗರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿ, ರೋಷನಾರ ಪಂಪ್‍ಹೌಸ್‍ನಲ್ಲಿ 13.50 ಲಕ್ಷ ರೂ. ವೆಚ್ಚದಲ್ಲಿ ಪ್ರೆಶರ್ ಫಿಲ್ಟರ್ ಮತ್ತು ಕ್ರೋರಿನೇಶನ್ ಪ್ಲಾಂಟ್ ಅಳವಡಿಸಿ ಕುಡಿಯುವ ನೀರು ಕಲ್ಪಿಸುವ ಕಾಮಗಾರಿಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಡಿಕೇರಿ ನಗರದಲ್ಲಿ ರಸ್ತೆ, ಕುಡಿಯುವ ನೀರು, ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮಡಿಕೇರಿ ನಗರದಲ್ಲಿ ಯುಜಿಡಿ ಕಾಮಗಾರಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆದಿದೆ. ಮಡಿಕೇರಿ ನಗರವನ್ನು ಸುಂದರ, ಸ್ವಚ್ಛ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು.
ಉದ್ಯಾನವನ ಕಾಮಗಾರಿಗೆ ಚಾಲನೆ ನೀಡುವುದಕ್ಕೂ ಮೊದಲು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಿ ವೀಕ್ಷಿಸಿದರು. ಕುಡಿದು ಬಿಸಾಡಿರುವ ಬಾಟಲಿಗಳು, ಕಸ ಕಡ್ಡಿಗಳನ್ನು ನೋಡಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ವಾರಕ್ಕೊಮ್ಮೆಯಾದರೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಾಟಲಿ ಹಾಗೂ ಕಸಕಡ್ಡಿಗಳನ್ನು ಕೂಡಲೇ ತೆಗೆಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನಿರ್ದೇಶನ ನೀಡಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ ಕಳೆದ ಒಂದು ವರ್ಷದಿಂದ ಕೋವಿಡ್-19 ನಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಆದ್ದರಿಂದ ಸಮಯ ಸಂದರ್ಭವನ್ನು ಕೆಎಸ್‍ಆರ್‍ಟಿಸಿ ನೌಕರರು ಅರ್ಥ ಮಾಡಿಕೊಂಡು ಸಾರಿಗೆ ಸಂಚಾರವನ್ನು ಮುಂದುವರಿಸಬೇಕು ಎಂದು ಅವರು ಕೋರಿದರು.
ಕೊರೊನಾ ವೈರಸ್‍ನಿಂದಾಗಿ ಇಡೀ ವಿಶ್ವದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು. ಕೆಎಸ್‍ಆರ್‍ಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾದ ನಂತರ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು ಎಂದು ಅಪ್ಪಚ್ಚುರಂಜನ್ ಅವರು ಮನವಿ ಮಾಡಿದರು.
ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅರಣ್ಯ ನಾಶವೇ ಭೂಕುಸಿತಕ್ಕೆ ಕಾರಣವೆಂದು ಜೀವ ವೈವಿದ್ಯ ಮಂಡಳಿಯ ತಜ್ಞರು ಸರ್ಕಾರಕ್ಕೆ ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ತಜ್ಞರ ವರದಿ ಸಮರ್ಪಕವಾಗಿಲ್ಲ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಮೊದಲಿಗಿಂತ ಈಗ ಹೆಚ್ಚಿನ ಮರಗಿಡಗಳು ಇರುವುದನ್ನು ಕಾಣಬಹುದಾಗಿದೆ. ಕಾಫಿ ಬೆಳೆಗೆ ಮರಗಿಡವೇ ಆಧಾರವಾಗಿದೆ. ಆದ್ದರಿಂದ ಕೃಷಿಕರು ಹೆಚ್ಚು ಮರಗಿಡಗಳನ್ನು ಬೆಳೆಸಿದ್ದು, ರೈತರಿಗೆ ಇನ್ಸೆಂಟಿವ್ ನೀಡಬೇಕು ಎಂದು ಶಾಸಕರು ಸಲಹೆ ಮಾಡಿದರು.
ಜೀವ ವೈವಿದ್ಯ ಮಂಡಳಿ ತಜ್ಞರು ಈಗಲೂ ಸಹ ಭೂಕುಸಿತಕ್ಕೆ ಕಾರಣವೇನು ಎಂಬ ಬಗ್ಗೆ ಆಯಾಯ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಏಕಾಏಕಿ ಸರ್ಕಾರಕ್ಕೆ ವರದಿ ನೀಡುವುದು ಸರಿಯೇ ಎಂದು ಶಾಸಕರು ಪ್ರಶ್ನಿಸಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ನಗರಸಭೆ ಪೌರಾಯುಕ್ತರಾದ ರಾಮದಾಸ್, ಪ್ರಮುಖರಾದ ಪಿ.ಡಿ.ಪೊನ್ನಪ್ಪ, ಟಿ.ಎಸ್.ಪ್ರಕಾಶ್, ಕೆ.ಎಸ್.ರಮೇಶ್, ಉನ್ನೀಕೃಷ್ಣ, ಬಿ.ಕೆ.ಜಗದೀಶ್, ಸವಿತಾ ರಾಕೇಶ್, ಮನು ಮಂಜುನಾಥ್, ಸತೀಶ್ ಕುಮಾರ್, ಅಪ್ಪಣ್ಣ, ಉಮೇಶ್ ಸುಬ್ರಮಣಿ ಇತರರು ಇದ್ದರು.

error: Content is protected !!