ಕಾಂಗ್ರೆಸ್ ಸಭೆ : ನಗರಸಭೆ ಅಧಿಕಾರಕ್ಕಾಗಿ ಪಣತೊಡಿ : ಕೆ.ಕೆ.ಮಂಜುನಾಥ್ ಕುಮಾರ್ ಕರೆ

ಮಡಿಕೇರಿ ಏ.8 : ಪ್ರತಿಯೊಬ್ಬರು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುವ ಮೂಲಕ ಅಧಿಕಾರಕ್ಕಾಗಿ ಪಣ ತೊಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಪಕ್ಷದ ಪ್ರಮುಖರಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಮಡಿಕೇರಿ ನಗರಸಭಾ ಚುನಾವಣೆಯ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಭ್ಯರ್ಥಿಗಳ ಆಯ್ಕೆ ಕೆಪಿಸಿಸಿ ರಚಿಸಿರುವ ಸಮಿತಿ ಮೂಲಕ ನಡೆಯಲಿದೆ. ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಬಹುಮತ ಪಡೆಯಬೇಕೆಂದು ಸಲಹೆ ನೀಡಿದರು. ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಪ್ಯಾನಲಿಸ್ಟ್ ಟಿ.ಪಿ.ರಮೇಶ್ ಅವರು ಮಾತನಾಡಿ, ಅಭ್ಯರ್ಥಿಗಳು ಅಭಿವೃದ್ಧಿ ಕಾರ್ಯಗಳ ಭರವಸೆಯ ಮೂಲಕ ಮತದಾರರ ವಿಶ್ವಾಸ ಗಳಿಸಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್.ಎಂ.ನಂದಕುಮಾರ್, ವಕ್ತಾರ ಟಾಟೂ ಮೊಣ್ಣಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಪಕ್ಷದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಶ್ರೀಧರ ನಾಯರ್ ಮತ್ತಿತರ ಪ್ರಮುಖರು ಹಾಗೂ ಸ್ಪರ್ಧಾಕಾಂಕ್ಷಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.