ಯರವರ ಬೇಡಿಕೆ ಈಡೇರಿಕೆಗೆ ಆಗ್ರಹ : ಮಡಿಕೇರಿಯಲ್ಲಿ ಪ್ರತಿಭಟನೆ

April 8, 2021

ಮಡಿಕೇರಿ ಏ.8 : ಯರವರನ್ನು ಪ್ರಾಚೀನ ಎರವ ಸಮುದಾಯ (ಪ್ರಿಮಿಟಿವ್ ಟ್ರೈಬ್ಸ್) ಎಂದು ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಏ.23 ರಂದು ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಕೊಡಗು ಜಿಲ್ಲಾ ಯರವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್.ಮುತ್ತ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಯರವ ಸಮುದಾಯದ ವಿದ್ಯಾವಂತ ಯುವಕ, ಯುವತಿಯರಿಗೆ ಜಿಲ್ಲಾ ಉದ್ಯೋಗ ಪ್ರಾಧಿಕಾರ ರಚನೆ ಮಾಡಿ ನೇರ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಯರವ ಸಮುದಾಯಕ್ಕೆ ಪ್ರತ್ಯೇಕ ಹಣ ಬಿಡುಗಡೆ ಮಾಡಬೇಕು, ಈಗಾಗಲೇ ನಿಗಮಕ್ಕೆ ಅರ್ಜಿ ಸಲ್ಲಿಸಿರುವ ಯುವಕ, ಯುವತಿಯರಿಗೆ ಶೀಘ್ರ ಸೌಲಭ್ಯ ಒದಗಿಸಬೇಕು. ಭೂರಹಿತ ಕೃಷಿ ಕೂಲಿ ಕಾರ್ಮಿಕರಾಗಿರುವ ಯರವರ ಸಮೀಕ್ಷೆ ನಡೆಸಿ ಪ್ರತಿ ಕುಟುಂಬಕ್ಕೆ 5 ಏಕರೆ ಜಮೀನು ನೀಡಬೇಕು. ವೃದ್ಧಾಪ್ಯ ವೇತನ, ಅಂಗವಿಕಲ ಭತ್ಯೆ, ವಿಧವಾ ಪಿಂಚಣಿಯನ್ನು ವಿಳಂಬ ಮಾಡದೆ ಸಕಾಲದಲ್ಲಿ ಬಿಡುಗಡೆ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು, ಪ್ರಾಕೃತಿಕ ವಿಕೋಪ, ವನ್ಯಜೀವಿಗಳ ದಾಳಿ ಮತ್ತು ಕೋವಿಡ್ ಪರಿಸ್ಥಿತಿಯಿಂದ ಯರವ ಸಮುದಾಯ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಪ್ರತಿ ಕುಟುಂಬಕ್ಕೆ ತಲಾ 5 ಸಾವಿರ ರೂ. ಗಳನ್ನು ನೀಡಬೇಕು, ಆದಿವಾಸಿಗಳು ವ್ಯಾಸಂಗ ಮಾಡುತ್ತಿರುವ ಆಶ್ರಮ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು, ಪೋಸ್ಕೊ ಕಾಯ್ದೆಯಡಿ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ಯರವ ಯುವಕ, ಯುವತಿಯರಿಗೆ ಕಾನೂನು ಚೌಕಟ್ಟಿನಡಿ ಮಾನವೀಯ ನೆಲೆಗಟ್ಟಿನಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು, ಸ್ವಂತ ನಿವೇಶನ ಮತ್ತು ವಾಸ ಮಾಡಲು ಮನೆಗಳಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿರುವ ಯರವ ಸಮುದಾಯಕ್ಕೆ ವಸತಿ ಯೋಜನೆಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು, ಯರವರ ಸಂಸ್ಕೃತಿ, ಕಲೆ, ಸಾಹಿತ್ಯದ ಅಧ್ಯಯನಕ್ಕಾಗಿ ಕೊಡಗಿನಲ್ಲಿ ಯರವ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು, ಜಿಲ್ಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಆಟೋ ರಿಕ್ಷಾಗಳನ್ನು ನಿರುದ್ಯೋಗಿ ಯುವಕರಿಗೆ ನೀಡಲಾಗಿದ್ದು, ಇವುಗಳ ಪರ್ಮಿಟ್‍ನ್ನು ಆಯಾ ಪೊಲೀಸ್ ಠಾಣೆ ಮಿತಿಯಿಂದ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಬೇಕು, ಆ ಮೂಲಕ ಕಾರ್ಮಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು, ನೂತನ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಪದವಿ ಕಾಲೇಜು ಮತ್ತು ವಸತಿ ನಿಲಯವನ್ನು ಆರಂಭಿಸಬೇಕು, ಕಳೆದ ಹಲವಾರು ವರ್ಷಗಳಿಂದ ಕಾಫಿ ತೋಟದ ಲೈನ್ ಮನೆಗಳಲ್ಲಿ ನೆಲೆಸಿರುವ ಯರವ ಮತ್ತು ಪಣಿಯ ಸಮುದಾಯವನ್ನು ಸಮೀಕ್ಷೆಗೆ ಒಳಪಡಿಸಿ ಪುನರ್ವಸತಿ ಕಲ್ಪಿಬೇಕು ಮತ್ತು ಲೈನ್ ಮನೆಗಳಲ್ಲಿ ನೆಲೆಸಿರುವ ಯರವರ ಪೂರ್ಣ ವಿವರವನ್ನು ಆಯಾಭಾಗದ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಮುತ್ತ ತಿಳಿಸಿದ್ದಾರೆ.
ಏ.23 ರಂದು ಬೆಳಗ್ಗೆ 10 ಗಂಟೆಗೆ ನಗರದ ಗದ್ದಿಗೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

error: Content is protected !!