ಕೊಡಗಿನಲ್ಲಿರುವ ಬಾಲ ಕಾರ್ಮಿಕರ ಬಗ್ಗೆ 1 ತಿಂಗಳಲ್ಲಿ ವರದಿ ಸಲ್ಲಿಸಿ

April 8, 2021

ಮಡಿಕೇರಿ ಏ.8 : ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಪೋಷಕರ ಜೊತೆ ದುಡಿಯುತ್ತಿರುವ ಬಾಲ ಕಾರ್ಮಿಕರ ಬಗ್ಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಅಂತೋಣಿ ಸೆಬಾಸ್ಟಿಯನ್ ಅವರು ಸೂಚಿಸಿದ್ದಾರೆ.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಬಾಲನ್ಯಾಯ, ಪೋಕ್ಸೋ ಹಾಗೂ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ ಸಂಬಂಧ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ಬಾಲ ಕಾರ್ಮಿಕರು ಪೋಷಕರ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಕಂದಾಯ, ಪೊಲೀಸ್, ಸಾರ್ವಜನಿಕ ಶಿಕ್ಷಣ, ಪಂಚಾಯತ್ ರಾಜ್, ಹಾಗೂ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಐಟಿಡಿಪಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ಮಾಹಿತಿ ಒದಗಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯ ಅಧ್ಯಕ್ಷರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 2019-20 ರಲ್ಲಿ ಐವರು, 2020-21 ರಲ್ಲಿ 7 ಮಂದಿ ಬಾಲ ಕಾರ್ಮಿಕರು ಕಂಡುಬಂದಿರುವ ಬಗ್ಗೆ ವರದಿ ಇದೆ. ಆದರೆ ಇದು ಸರಿಯಾದ ಉತ್ತರವೇ ಎಂದು ಅಧ್ಯಕ್ಷರು ಪ್ರಶ್ನಿಸಿದರು.
ಜಿಲ್ಲೆಯ ಲೈನ್‍ಮನೆಗಳಲ್ಲಿ ಎಷ್ಟು ಕುಟುಂಬಗಳು ವಾಸಿಸುತ್ತಿದ್ದಾರೆ. ಲೈನ್ ಮನೆಗಳ ಕುಟುಂಬಗಳ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆಯೇ, ವಸತಿ ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬಗ್ಗೆ ವರದಿ ಸಲ್ಲಿಸುವಂತೆ ಡಾ.ಅಂತೋಣಿ ಸೆಬಾಸ್ಟಿಯನ್ ಅವರು ಸೂಚಿಸಿದರು.
ಬಾಲ್ಯ ವಿವಾಹ ತಡೆಯುವಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ. ಬಾಲ್ಯ ವಿವಾಹ ಕಂಡುಬಂದ ಪ್ರಕರಣಗಳನ್ನು ಇದುವರೆಗೆ ಎಷ್ಟು ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡುವುದರ ಜತೆಗೆ, ಹೆಚ್ಚಿನ ಜಾಗೃತಿ ಮೂಡಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಕಾರ ಪಡೆದು ಮಕ್ಕಳ ಮೇಲಿನ ದೌರ್ಜನ್ಯ ತಡೆಯಬೇಕು. ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಕ್ಸೋ ಪ್ರಕರಣದಿಂದ ಆಗುತ್ತಿರುವ ಶಿಕ್ಷೆಯ ಬಗ್ಗೆ ಮಾಹಿತಿ ನೀಡಬೇಕು. ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿದ್ದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಆದಿವಾಸಿಗಳ ಬದುಕು, ಬವಣೆ, ಅವರ ಜೀವನ ಶೈಲಿ, ಜೀವನ ಮಟ್ಟ ಸುಧಾರಣೆ ಮಾಡುವುದು. ಹೀಗೆ ಎಷ್ಟು ಹಾಡಿಗಳಲ್ಲಿ ಆದಿವಾಸಿಗಳು ವಾಸಿಸುತ್ತಿದ್ದಾರೆ. ಅವರ ಬದುಕು ಸುಧಾರಣೆಗೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ನಿರ್ಗತಿಕ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಬೇಕು. ಮಕ್ಕಳ ರಕ್ಷಣೆ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಅಧ್ಯಕ್ಷರು ನಿರ್ದೇಶನ ನೀಡಿದರು.
ಸಮಿತಿ ಸದಸ್ಯರಾದ ಶಂಕರಪ್ಪ ಅವರು ಮಾತನಾಡಿ ಬಾಲ್ಯ ವಿವಾಹ ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಜತೆ ಕಂದಾಯ, ಪೊಲೀಸ್, ಸಾರ್ವಜನಿಕ ಶಿಕ್ಷಣ, ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಐಟಿಡಿಪಿ, ಹಿಂದುಳಿದ ವರ್ಗ ಹೀಗೆ ಹಲವು ಇಲಾಖೆಗಳ ಜವಾಬ್ದಾರಿ ಇದೆ. ಆ ನಿಟ್ಟಿನಲ್ಲಿ ತಮ್ಮಗಳ ಕರ್ತವ್ಯವನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಇದುವರೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಶಂಕರಪ್ಪ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಹಲವು ಇಲಾಖೆಗಳು ಶ್ರಮಿಸಬೇಕು ಎಂದರು.
ಸಮಿತಿ ಸದಸ್ಯರಾದ ಪರಶುರಾಮ ಅವರು ಮಾತನಾಡಿ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಬೇಕು. ಬಾಲ ಕಾರ್ಮಿಕರನ್ನು ಶಾಲೆಗೆ ಸೇರ್ಪಡೆ ಮಾಡಬೇಕು ಎಂದರು.
ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ಮಾಹಿತಿ ಒದಗಿಸಬೇಕು. ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಬೇಕು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮಾಜದ ಮಕ್ಕಳೇ ಬಾಲ್ಯ ವಿವಾಹಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸಮಾಜ ಕಲ್ಯಾಣ, ಐಟಿಡಿಪಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಅವರು ಹೇಳಿದರು.
ಆದಿವಾಸಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು. ವಿದ್ಯಾಭ್ಯಾಸ ಪಡೆಯುವಂತಾಗಲು ಸಲಹೆ ಮಾಡುವಂತೆ ಪರಶುರಾಮ ಅವರು ಹೇಳಿದರು.
ಪಂಚಾಯತ್ ರಾಜ್ ಇಲಾಖೆ ಮೂಲಕ ಗ್ರಾಮಗಳಲ್ಲಿ ಓದು ಬೆಳಕು ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಸಭೆ ನಡೆಸಬೇಕು. ದೂರು ಪೆಟ್ಟಿಗೆ ಇಡಬೇಕು. ಈ ಕಾರ್ಯವನ್ನು ತಾ.ಪಂ.ಇಒಗಳು ಗ್ರಾ.ಪಂ.ಪಿಡಿಒಗಳಿಗೆ ತಿಳಿಸಬೇಕು. ಮಕ್ಕಳ ಆರೋಗ್ಯ, ಮಕ್ಕಳ ವಿಕಾಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಪರಶುರಾಮ ಅವರು ನಿರ್ದೇಶನ ನೀಡಿದರು.
ಮಕ್ಕಳನ್ನು ಘನತೆ, ಗೌರವದಿಂದ ಕಾಣಬೇಕು. ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಬೇಕು. ಮಕ್ಕಳ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸದಸ್ಯರಾದ ಪರಶುರಾಮ ಅವರು ಹೇಳಿದರು.
ಶಂಕರಪ್ಪ ಅವರು ಮಾತನಾಡಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಬೇಕು. ಬಾಲಕರ ಮತ್ತು ಬಾಲಕಿಯರ ಮಂದಿರದಲ್ಲಿ ಸಮರ್ಪಕ ನಿರ್ವಹಣೆ ಮಾಡಬೇಕು. ಉತ್ತಮ ಗುಣಮಟ್ಟದ ಆಹಾರ ಪೂರೈಸುವಂತೆ ಅವರು ತಿಳಿಸಿದರು.
ಮತ್ತೊಬ್ಬ ಸಮಿತಿ ಸದಸ್ಯರಾದ ರಾಘವೇಂದ್ರ ಅವರು ಶಿಕ್ಷಣ ಹಕ್ಕು ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಅವರು ತಿಳಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಮಕ್ಕಳ ಹಕ್ಕುಗಳ ಸಭೆ ಏರ್ಪಡಿಸಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ನಿಗಾ ವಹಿಸುವಂತೆ ಅವರು ತಿಳಿಸಿದರು.
ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಪ್ರಮಾಣ ವಚನ ಬೋಧಿಸಬೇಕು. ಬಾಲ್ಯ ವಿವಾಹ ಸಂಬಂಧ ಮದುವೆ ಮಾಡಲು ಮುಂದಾಗುವ ಪೋಷಕರ ವಿರುದ್ಧ ಎಪ್‍ಐಆರ್ ದಾಖಲಿಸುವಂತೆ ಅವರು ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ಜಿಲ್ಲೆಯಲ್ಲಿ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರ, ಕಾವೇರಿ ನಿರ್ಗತಿಕ ಮಕ್ಕಳ ಕುಟೀರ, ಕ್ಯಾತರಿನ್ ಚಿತ್ರದಿನಿ ನಿರ್ಗತಿಕ ಮಕ್ಕಳ ಕುಟೀರ, ಸ್ವಸ್ಥ ವಿಶೇಷ ಮಕ್ಕಳ ಪುನರ್ ವಸತಿ ಕೇಂದ್ರ, ಕಾವೇರಿ ಜನ್ಮ ಭೂಮಿ ಮಕ್ಕಳ ಪಾಲನಾ ಸಂಸ್ಥೆ, ಹೀಗೆ ಒಟ್ಟು 15 ಮಕ್ಕಳ ಪಾಲನಾ ಸಂಸ್ಥೆಗಳು ಜಿಲ್ಲೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಮಕ್ಕಳ ಪಾಲನೆ, ಪೋಷಣೆ ಮತ್ತು ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣದ ಅಗತ್ಯತೆಯನ್ನು ಪೂರೈಸುವಲ್ಲಿ ಮಗುವಿನ ಜೀವನ ಮಟ್ಟ ಉತ್ತಮಗೊಳಿಸಲು ಆರ್ಥಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಸುವ ದೃಷ್ಟಿಯಿಂದ ಪಾಲನೆ ಮತ್ತು ಪೋಷಣೆಗಾಗಿ ಸಹಕಾರ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕೋವಿಡ್ ಸಮಯದಲ್ಲಿ ರಜೆ ಮೇಲೆ ಮನೆಗೆ ತೆರಳಿದ ಮಕ್ಕಳಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತ ಮಕ್ಕಳಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ಅರುಂಧತಿ ಅವರು ಮಾಹಿತಿ ನೀಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 17 ಹಾಡಿಗಳಲ್ಲಿ ಆದಿವಾಸಿಗಳು ವಾಸ ಮಾಡುತ್ತಿದ್ದು, ಅರಣ್ಯ ಹಕ್ಕು ಕಲ್ಪಿಸಲು ಪ್ರಯತ್ನಿಸಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ 167 ಕ್ಕೂ ಹೆಚ್ಚು ಹಾಡಿಗಳಿದ್ದು, ಸುಮಾರು 4,700 ಕುಟುಂಬಗಳು ಲೈನ್‍ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸುಮಾರು 8,910 ಮನೆಗಳನ್ನು ನಿರ್ಮಿಸಿಕೊಡಬೇಕಿದೆ ಎಂದು ಅವರು ವಿವರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಶಿಕ್ಷಣ ಹಕ್ಕು ಕಾಯ್ದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಕಾರ್ಮಿಕ ಅಧಿಕಾರಿ ಯತ್ನಟ್ಟಿ, ವಿಶೇಷ ಮಕ್ಕಳ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮತಿ, ಚೈಲ್ಡ್‍ಲೈನ್ ಸಹಾಯವಾಣಿಯ ನವೀನ್, ಪ್ರತಿನಿಧಿಗಳಾದ ರಾಯ್ ಡೇವಿಡ್ ಇತರರು ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಸಮಿತಿ ಸದಸ್ಯರಾದ ಉಷಾ ಅಯ್ಯಣ್ಣ ನಾನಾ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!