ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣ

April 10, 2021

ಮಡಿಕೇರಿ ಏ.10 : ರಾಜ್ಯ ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿತಾಣಗಳನ್ನು ಪ್ರವಾಸಿಗರಿಗೆ ಮುಕ್ತ ಮಾಡಿದ್ದರೂ ಕೂಡ ನಿರೀಕ್ಷಿತ ಪ್ರವಾಸಿಗರು ಜಿಲ್ಲೆಯ ಆಗಮಿಸದಿರುವುದು ಕಂಡು ಬಂತು. ಮಡಿಕೇರಿಯ ರಾಜಾಸೀಟು, ಅಬ್ಬಿಫಾಲ್ಸ್, ಮಾಂದಲ್ ಪಟ್ಟಿಯಲ್ಲಿ ಕೇವಲ ಬೆರಳೆಣಿಕೆಯ ಪ್ರವಾಸಿಗರು ಮಾತ್ರವೇ ಕಂಡು ಬಂದರು. ಅಬ್ಬಿಫಾಲ್ಸ್‍ನಲ್ಲಿ ನೀರಿನ ಪ್ರಮಾಣವೂ ಗಣನೀಯವಾಗಿ ಕುಸಿತವಾಗಿದ್ದು, ಅಬ್ಬಿಯ ಸೌಂಧರ್ಯ ಸೊರಗಿದ್ದು, ಮಳೆಯಾಗದಿದ್ದಲ್ಲಿ ಮತ್ತಷ್ಟು ನೀರಿನ ಪ್ರಮಾಣ ಕುಸಿತವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತ ಕಡೆ ಪ್ರವಾಸಿಗರು ಬರುತ್ತಿಲ್ಲ ಎಂದು ಅಬ್ಬಿಫಾಲ್ಸ್ ಬಳಿ ಪ್ರವಾಸಿ ಅಂಗಡಿಗಳನ್ನು ಇಟ್ಟು ಕೊಂಡಿರುವ ವರ್ತಕರು ಅನಿಸಿಕೆ ವ್ಯಕ್ತಪಡಿಸಿದರು.
ಮಡಿಕೇರಿ ರಾಜಾಸೀಟಿನಲ್ಲಿ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿದ ಪ್ರವಾಸಿಗರಿಗೆ ನಗರ ಸಭೆ ಸಿಬ್ಬಂದಿ ನೂರು ರೂ.ಗಳ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಉತ್ತರ ಭಾರತದ ಕೆಲವು ಪ್ರವಾಸಿಗರು ‘ಫೋಟೋ ತೆಗೆಯುವ ಸಂದರ್ಭ ಮಾಸ್ಕ್ ಹಾಕಿಕೊಳ್ಳಲು ಸಾಧ್ಯವೆ’ ಎಂದು ನಗರ ಸಭೆ ಸಿಬ್ಬಂದಿಗಳನ್ನು ಪ್ರಶ್ನಿಸಿದರು. ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರಸಭೆ ಸಿಬ್ಬಂದಿಗಳು ಪ್ರವಾಸಿಗರಿಗೆ ತಿಳಿ ಹೇಳಿದರು. ಬಳಿಕ ತಮ್ಮ ಬಳಿ ಇದ್ದ ಮಾಸ್ಕ್ ಧರಿಸಿ ಉದ್ಯಾನದಿಂದ ಹಿಂತೆರಳಿದ ದೃಶ್ಯಗಳೂ ಕಂಡು ಬಂದವು.
ಇದೀಗ ಸಾಲು ಸಾಲು ರಜೆ, ನೈಟ್ ಕಫ್ರ್ಯೂ ಮತ್ತಿತ್ತರ ಕಾರಣಗಳಿಂದ ಜಿಲ್ಲೆಯ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯೂ ಇದೆ. ಮಾತ್ರವಲ್ಲದೇ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಕಡಿಮೆ ಇದ್ದು, ಕೋವಿಡ್ ಸ್ಥಿತಿ ನಿಯಂತ್ರಣದಲ್ಲಿದೆ.

error: Content is protected !!