ಚುನಾವಣೆ ಬಹಿಷ್ಕಾರಕ್ಕೆ ಮಲ್ಲಿಕಾರ್ಜುನ ನಗರ, ಡಾ.ಅಂಬೇಡ್ಕರ್ ಬಡಾವಣೆ ನಿವಾಸಿಗಳ ನಿರ್ಧಾರ

April 10, 2021

ಮಡಿಕೇರಿ ಏ.10 : ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರ ಹಾಗೂ ಡಾ.ಅಂಬೇಡ್ಕರ್ ಬಡಾವಣೆಯಿರುವ ವಾರ್ಡ್‍ನಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಇದೇ ವರ್ಗದ ಮಂದಿಗೆ ಅವಕಾಶ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ನಗರದ ನಿವಾಸಿ ಹೆಚ್.ಹೆಚ್.ಮಹದೇವ್ 2021 ರ ಜನವರಿ ತಿಂಗಳಿನಲ್ಲಿ ಚುನಾವಣಾ ಆಯೋಗ ಮೀಸಲಾತಿ ಪ್ರಕಟಿಸಿದಾಗ ಈ ವಾರ್ಡ್‍ಗೆ ಪರಿಶಿಷ್ಟ ಜಾತಿ ಮಹಿಳೆ ಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಮಾ.16 ರಂದು ಘೋಷಣೆಯಾದ ಪರಿಷ್ಕøತ ಮೀಸಲು ಪಟ್ಟಿಯಲ್ಲಿ ಹಿಂದುಳಿದ ವರ್ಗ ಎ (ಮಹಿಳೆ) ಗೆ ಸ್ಥಾನ ಕಲ್ಪಿಸಲಾಗಿದೆ. ಇದರಿಂದ ಈ ವಾರ್ಡ್‍ನಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ತುಂಬಲಾರದ ನಷ್ಟವಾಗಿದೆ, ಅಲ್ಲದೆ ರಾಜಕೀಯವಾಗಿದೆ ನಮ್ಮನ್ನು ತುಳಿಯಲಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಚುನಾವಣಾ ಆಯೋಗ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದರು ಇದುವರೆಗೂ ಯಾವುದೇ ಪ್ರತಿಕ್ರಿಯೆ ದೊರೆತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಕ್ಷಣ ಪುನರ್ ಪರಿಶೀಲಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಕ್ಷೇತ್ರವನ್ನಾಗಿ ಪರಿವರ್ತಿಸಬೇಕೆಂದು ಒತ್ತಾಯಿಸಿದರು. ಏ.12 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವುದರೊಂದಿಗೆ ನಿವಾಸಿಗಳ ನೋವನ್ನು ವಿವರಿಸಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಡಾವಣೆಯ ನಿವಾಸಿಗಳಾದ ಹೆಚ್.ಆರ್.ದಮಯಂತಿ, ಹೆಚ್.ರುಕ್ಮಿಣಿ, ಎಸ್.ಕೆ.ಸುಚಿತ್ರ, ಆರ್.ಪೂರ್ಣಿಮ ಹಾಗೂ ಎಂ.ಜೆ.ಲಕ್ಷ್ಮಿ ಉಪಸ್ಥಿತರಿದ್ದರು.

error: Content is protected !!