ಸಾರಿಗೆ ನೌಕರರ ಮುಷ್ಕರ : ಕುಶಾಲನಗರದಲ್ಲಿ ಬಸ್‍ಗಳನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು

April 12, 2021

ಮಡಿಕೇರಿ ಏ.12 : ಸಾರಿಗೆ ನೌಕರರ ಮುಷ್ಕರ ಏಳನೇ ದಿನವನ್ನು ಪ್ರವೇಶಿಸುತ್ತಿರುವ ಹಂತದಲ್ಲಿ ಹೋರಾಟ ಮತ್ತೊಂದು ಮಗ್ಗುಲಿಗೆ ಹೊರಳುತ್ತಿದ್ದು, ಬೆರಳೆಣಿಕೆಯ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ಸರ್ಕಾರಿ ಬಸ್‍ಗಳನ್ನು ಮುಷ್ಕರ ನಿರತ ಸಾರಿಗೆ ನೌಕರರು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರ ಹಾಕುತ್ತಿರುವ ಪ್ರಕರಣ ನಡೆಯುತ್ತಿದೆ.
ಆರನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳ್ಳುವುದರೊಂದಿಗೆ, ಸರ್ಕಾರ ಇದೀಗ ಒಂದಷ್ಟು ಒತ್ತಡ ತಂತ್ರಗಳಿಗೂ ಮುಂದಾಗಿದೆ. ಇದರಿಂದ ಕೆಲವು ಸರ್ಕಾರಿ ಬಸ್‍ಗಳು ಪುತ್ತೂರು ವಿಭಾಗದಿಂದ ಮಡಿಕೇರಿ, ಕುಶಾಲನನಗರ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿವೆ.
ಈ ರೀತಿ ಮೈಸೂರು ಕಡೆಗೆ ತೆರಳಿ ಹಿಂದಿರುಗುತ್ತಿದ್ದ ಸರ್ಕಾರಿ ಬಸ್‍ವೊಂದನ್ನು ಇಲ್ಲಿನ ಪಾಲಿಟೆಕ್ನಿಕ್ ಕಾಲೇಜು ಬಳಿಯ ಮಾದಾಪಟ್ಟಣದಲ್ಲಿ ಮುಷ್ಕರ ನಿರತ ಕೆಲ ಸಾರಿಗೆ ಸಿಬ್ಬಂದಿಗಳು ಅಡ್ಡ ಗಟ್ಟಿ, ಬಸ್‍ನ ಚಾಲಕನನ್ನು ಕೆಳಕ್ಕಿಳಿಸಿ ಆತನಿಗೆ ಹೂವಿನ ಹಾರ ಹಾಕಿ, ನಮ್ಮ ಅನ್ನಕ್ಕೆ ಕಲ್ಲು ಹಾಕುತ್ತಿದ್ದೀಯ ಎಂದು ಆಕ್ರೊಶ ವ್ಯಕ್ತಪಡಿಸಿದ, ಅದಕ್ಕೆ ಪ್ರತಿಯಾಗಿ ಅಸಹಾಯಕ ಚಾಲಕ, ತಾನು ಒತ್ತಾಯ ಪೂರ್ವಕವಾಗಿ ಬಸ್ ಚಾಲನೆ ಮಾಡುತ್ತಿರುವುದಾಗಿ ತಿಳಿಸಿದ ಘಟನೆ ನಡೆಯಿತು. ಚಾಲಕ ಮತ್ತು ಮುಷ್ಕರ ನಿರತರ ನಡುವಿನ ಈ ಹಗ್ಗ ಜಗ್ಗಾಟದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಬಳಿಕ ಪೊಲೀಸ್ ಬಂದೋಬಸ್ತ್‍ನಡಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಡೆಯಿತು.
::: ನೀವು ಕ್ಯೂನಲ್ಲಿ ಬನ್ನಿ? :::
ಸಾರಿಗೆ ನೌಕರರ ಮುಷ್ಕದಿಂದ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿರುವುದಕ್ಕೆ ಪರ್ಯಾಯವಾಗಿ ಖಾಸಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ನಡುವೆ ಸಂಚರಿಸುತ್ತಿರುವ ಸರ್ಕಾರಿ ಬಸ್‍ಗಳನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳವರು ಕ್ಯೂನಲ್ಲಿ ಬರುವಂತೆ ಒತ್ತಾಯಿಸಿ ಗೊಂದಲ ನಿರ್ಮಾಣವಾದ ಘಟನೆ ಬೆಳಗ್ಗಿನ ಅವಧಿಯಲ್ಲಿ ನಡೆದಿದೆ.
ಮೈಸೂರು ಕಡೆಗೆ ಸರ್ಕಾರಿ ಬಸ್ ಇದೆ ಎನ್ನುವ ವಿಷಯವರಿತ ಖಾಸಗಿ ಬಸ್‍ನಲ್ಲಿದ್ದ ಪ್ರಯಾಣಿಕರು, ಅಲ್ಲಿಂದ ಇಳಿದು ಸರ್ಕಾರಿ ಬಸ್ ಹತ್ತುತ್ತಿದ್ದುದು ಈ ಗೊಂದಲ, ಗಲಾಟೆಗೆ ಆಸ್ಪದ ಮಾಡಿಕೊಟ್ಟಿತ್ತು. ಬಳಿಕ ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಸಮಸ್ಯೆಯನ್ನು ತಿಳಿಗೊಳಿಸಲಾಯಿತು.

error: Content is protected !!