ಮಡಿಕೇರಿ ನಗರಸಭೆ ಚುನಾವಣೆ : 17 ನಾಮಪತ್ರಗಳು ಸಲ್ಲಿಕೆ

April 12, 2021

ಮಡಿಕೇರಿ ಏ.12 : ಮಡಿಕೇರಿ ನಗರಸಭೆಯ 23 ವಾರ್ಡ್‍ಗಳಿಗೆ ಏ.27ರಂದು ಚುನಾವಣೆ ನಡೆಯಲಿದ್ದು, ಸೋಮವಾರ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಅರ್ಜಿಗಳನ್ನು ಪಡೆಯಲು ನೂರಾರು ಮಂದಿ ಬೆಳಗೆಯಿಂದಲೇ ನಗರಸಭೆಯ ಕಚೇರಿ ಮುಂದೆ ಜಮಾಯಿಸಿದ್ದುದು ಕಂಡು ಬಂತು. ಏ.15ರಂದು ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿದ್ದು ಪಕ್ಷಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಸಾಲು ಸಾಲು ರಜೆಯ ಮಧ್ಯೆ ನಾಮಪತ್ರ ಸಲ್ಲಿಸಲು ಗಂಟೆಗಳ ಗಣನೆಯೂ ಆರಂಭವಾಗಿದ್ದು, ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ತಮ್ಮ ಹೆಸರು ಘೋಷಣೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ಏ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಪ್ರಮುಖರ ಮೇಲೆ ಒತ್ತಡದ ತಂತ್ರಗಳನ್ನು ಬಳಸುತ್ತಿದ್ದಾರೆ. ಇದೇ ವಿಚಾರ ವಿವಿಧ ಪಕ್ಷಗಳ ಮುಖಂಡರ ಪಾಲಿಗೆ ನುಂಗಲಾರದ ತುತ್ತಾಗಿಯೂ ಪರಿಣಮಿಸಿದ್ದು, ಯಾರಿಗೆ ಟಿಕೆಟ್ ನೀಡಬೇಕೆನ್ನುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿದೆ. ಒಂದು ಮೂಲಗಳ ಪ್ರಕಾರ ಗೊಂದಲ ಇಲ್ಲದ ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆಯಾ ಪಕ್ಷಗಳ ಮುಖಂಡರು ಮೌಖಿಕವಾಗಿ ಪ್ರಚಾರ ಕಾರ್ಯ ನಡೆಸುವಂತೆ ಸೂಚಿಸಿದ್ದು, ಅದರಂತೆ ಸುಡು ಬಿಸಿಲಿನಲ್ಲಿ ಅಭ್ಯರ್ಥಿಗಳು ಮತ ಬೇಟೆಗಾಗಿ ಬೆವರು ಸುರಿಸುತ್ತಿದ್ದಾರೆ.
ನಗರದ 23 ವಾರ್ಡ್‍ಗಳಿಗೆ ಏಪ್ರಿಲ್ 27ರಂದು ಮತದಾನ ನಡೆಯಲಿದ್ದು, ಅಂದು ಬೆಳಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಏಪ್ರಿಲ್ 30ರಂದು ಮತ ಎಣಿಕೆ ಕಾರ್ಯ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಬೆಳಗೆ 8 ಗಂಟೆಯಿಂದ ನಡೆಯಲಿದೆ.
ಎಸ್.ಡಿ.ಪಿ.ಐ ಪಕ್ಷ 8 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಹಾಗೂ ಆಮ್ ಆದ್ಮ ಪಾರ್ಟಿ ಕೂಡ 4 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೆಸರನ್ನು ಘೋಷಿಸಿದೆ.
::: 17 ನಾಮಪತ್ರ ಸಲ್ಲಿಕೆ :::
ಎರಡೂವರೆ ವರ್ಷಗಳ ಸುದೀರ್ಘ ಅವಧಿಯ ಬಳಿಕ ಮಡಿಕೇರಿ ನಗರ ಸಭೆಯ ಆಡಳಿತ ಮಂಡಳಿಗಾಗಿ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಒಟ್ಟು 17 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 7 ಮಂದಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‍ನಿಂದ 6 ಮಂದಿ ಹಾಗೂ ಎಸ್‍ಡಿಪಿಐ ಪಾರ್ಟಿಯಿಂದ 4 ಮಂದಿ ಸೋಮವಾರ ನಾಮಪತ್ರ ಸಲ್ಲಿಸಿದರು. ಏ.16ರಂದು ನಾಮಪತ್ರ ಪರಿಶೀಲನೆ ಹಾಗೂ ಏ.19ರಂದು ನಾಮ ಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಸಂದರ್ಭ ಯಾವ ಅಭ್ಯರ್ಥಿಯ ನಾಮಪತ್ರ ತಿರಸ್ಕøತವಾಗುತ್ತದೆಯೋ, ಯಾರೆಲ್ಲ ನಾಮಪತ್ರ ಹಿಂಪಡೆಯುತ್ತಾರೆಯೋ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

error: Content is protected !!