“ಚಿತ್ತಾರ ವಾರ್ತೆ” ವಾರಪತ್ರಿಕೆ ಲೋಕಾರ್ಪಣೆ

April 13, 2021

ಮಡಿಕೇರಿ ಏ.13 : ಯಾವುದೇ ಮಾಧ್ಯಮವಾದರೂ ನಕಾರಾತ್ಮಕ ಸುದ್ದಿಗಳಿಗೆ ಆಸ್ಪದ ನೀಡದೆ, ವಸ್ತುನಿಷ್ಟ ವರದಿಗಳನ್ನು ನೀಡಿದಾಗ ಮಾತ್ರ ಜನರಲ್ಲಿ ವಿಶ್ವಾಸಾರ್ಹತೆ ಉಳಿಯುತ್ತದೆ ಎಂದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹೇಳಿದರು.
ಮಡಿಕೇರಿಯ ರಾಜ್‍ದರ್ಶನ್ ಹೊಟೇಲ್ ಸಭಾಂಗಣದಲ್ಲಿ, ಚಿತ್ತಾರ ವಾಹಿನಿ ನೇತೃತ್ವದಲ್ಲಿ ಹೊರತಂದ ಚಿತ್ತಾರ ವಾರ್ತೆ ವಾರಪತ್ರಿಕೆ ಅನಾವರಣ ಸಮಾರಂಭವನ್ನು ಉದ್ಘಾಟಿಸಿ, ನ್ಯಾಯಾಧೀಶರು ಮಾತನಾಡಿದರು.
ಇಂದು ಜನ ಸಾಮಾನ್ಯರಿಗೆ ಶೀಘ್ರ ಮತ್ತುಖರ್ಚಿಲ್ಲದೆ ಕಾನೂನಿನ ಸೌಲಭ್ಯ ಸಿಗುವಂತಾಗಲು ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವದಲ್ಲಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು, ಚಿತ್ತಾರ ವಾಹಿನಿಯು ಜನರ ಅನೇಕ ಸಮಸ್ಯೆಗಳನ್ನು ಸ್ವತ: ಪರಿಹರಿಸಲು ಶ್ರಮಿಸಿದ್ದಲ್ಲದೆ, ಕೆಲವು ಪ್ರಕರಣಗಳಲ್ಲಿ ತಮ್ಮ ನೆರವು ಪಡೆಯುವ ಮೂಲಕ ಸಹಾಯಹಸ್ತ ಚಾಚಿದೆ ಎಂದರು.
ದೃಢ ಸಂಕಲ್ಪ ಬೇಕು; ಚಿತ್ತಾರ ವಾರಪತ್ರಿಕೆಯನ್ನುಅನಾವರಣ ಮಾಡಿದ ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ, ಕಮಲವು ಕೆಸರಿನಲ್ಲೇ ಹುಟ್ಟಿಜನಾಕರ್ಷಣೆ ಪಡೆಯುವಂತೆ, ಯಾವುದೇಕ್ಷೇತ್ರದಲ್ಲೂಛಲದಿಂದ ಮುಂದೆ ನುಗ್ಗಿ ನಡೆದರೆ ಮತ್ತು ಮರಳಿ ಯತ್ನ ಮಾಡಿದರೆ ಸಾಧನೆ ಸಾಧ್ಯಎಂದರು. ನಿರಾಶಾವಾದಿಯಾದರೆ ಬೆಳವಣಿಗೆ ಸಾಧ್ಯವಿಲ್ಲ. ಮಾಧ್ಯಮಗಳು ವೈಯುಕ್ತಿಕತೇಜೋವಧೆ ಮಾಡುವುದು ಸರಿಯಲ್ಲ ಎಂದ ರಾಜೇಂದ್ರ, ರಚನಾತ್ಮಕ ಟೀಕೆಗಳು ಮಾಧ್ಯಮದ ಗೌರವ ಹೆಚ್ಚಿಸುತ್ತವೆ ಎಂದು ಹೇಳಿದರು.
ಇಂದು ಕೋವಿಡ್ ಮಾರ್ಗಸೂಚಿಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗುತ್ತಿರುವುದು ದುರದೃಷ್ಟಕರ. ಇನ್ನೊಬ್ಬರಿಗೆ ಬೋಧನೆ ಮಾಡುವ ರಾಜಕೀಯ ವ್ಯಕ್ತಿಗಳಿಗೆ ನಿಯಮ ಅನ್ವಯವಾಗುತ್ತಿಲ್ಲ. ಇಂತಹ ವ್ಯವಸ್ಥೆಯಿಂದಾಗಿ ಕೊರೋನಾ ಬಗ್ಗೆ ಜನಸಾಮಾನ್ಯರಲ್ಲಿ ಅನುಮಾನಗಳು ಮೂಡುವುದು ಸಹಜ. ಇಂತಹ ವಿದ್ಯಮಾನಗಳ ಬಗ್ಗೆ ವಿಶ್ಲೇಷಣೆ ಮಾಡುವ ಅವಕಾಶ ವಾರಪತ್ರಿಕೆಗಳಿಗೆ ಇದೆಎಂದುರಾಜೇಂದ್ರ ಹೇಳಿದರು.
ಚಿತ್ತಾರ ವಾಹಿನಿಯ ಚುನಾವಣಾ ನೇರ ಪ್ರಸಾರ, ದಸರಾ ಚಿತ್ತಾರದಂಥ ಸ್ತುತ್ಯರ್ಹ ಕಾರ್ಯಕ್ರಮಗಳನ್ನು ಚಿತ್ತಾರ ಪ್ರಸಾರ ಮಾಡಿದೆ ಎಂದು ರಾಜೇಂದ್ರ ಹೇಳಿದರು.
ಪಾಠ ಕಲಿಸಬೇಕಿದೆ: ಅನೇಕ ಸ್ಥಿತ್ಯಂತರಗಳ ಮಧ್ಯೆಯೂ ಚಿತ್ತಾರ ವಾಹಿನಿ ಛಲದಿಂದ ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು, ವಕೀಲ ಪಿ. ಕೃಷ್ಣಮೂರ್ತಿ ಹೇಳಿದರು. ಚಿತ್ತಾರ ವಾರಪತ್ರಿಕೆ ಅದ್ಭುತವಾಗಿ ಮೂಡಿಬಂದಿದ್ದು, ಪತ್ರಿಕೆಯಲ್ಲಿ ವಸ್ತುನಿಷ್ಠ, ನಿಷ್ಠುರ ವರದಿಗಳು ಬರುವಂತಾಗಲಿ. ಬೇರೂರಿರುವ ಭ್ರಷ್ಟಚಾರವನ್ನು ಬಯಲಿಗೆಳೆಯುವ ಮತ್ತು ಜರನನ್ನು ಕಡೆಗಣಿಸಿ ತಮ್ಮದೇ ಮೂಗಿನ ನೇರಕ್ಕೆ ನಡೆಯುತ್ತಿರುವ ರಾಜಕಾರಣಿಗಳಿಗೆ ಪಾಠ ಕಲಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ ಎಂದು ಅವರು ಹೇಳಿದರು.
ಇಂದು ಜನರು ಭಾವನಾತ್ಮಕ, ಧಾರ್ಮಿಕ, ಅಶ್ಲೀಲ ವಿಚಾರಗಳಿಗೆ ಆಕರ್ಷಿತರಾಗುತ್ತಿದ್ದಾರೆ ಎಂದು, ಕೊಡಗು ಪ್ರೆಸ್‍ಕ್ಲಬ್‍ಅಧ್ಯಕ್ಷ ಅಜ್ಜಮಾಡ ರಮೇಶ್‍ಕುಟ್ಟಪ್ಪ ಹೇಳಿದರು.
ಜಾಹೀರಾತಿನ ಬೆಂಬಲವಿಲ್ಲದೆ ಮಾಧ್ಯಮಗಳು ಮುಂದುವರಿಯುವುದು ಅಸಾಧ್ಯ ಎಂದ ಅವರು, ಯಶಸ್ಸಿಗೆ ಇಂಥದ್ದೇ ಮಾನದಂಡ ಅಥವಾ ಸಿದ್ಧ ಸೂತ್ರ ಇರುವುದಿಲ್ಲ ಎಂದು ಅಭಿಪ್ರಾಯಿಸಿದರು.
ಹಿರಿಯ ಪತ್ರಿಕೋದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 19 ವಾರಪತ್ರಿಕೆಗಳು ಬಂದು ಹೋಗಿವೆ ಎಂದು ಸ್ಮರಿಸುತ್ತಾ, ಇಂದು ತಂತ್ರಜ್ಞಾನವು ಮಾಧ್ಯಮಗಳ ಕಾರ್ಯಭಾರವನ್ನುಕಡಿಮೆ ಮಾಡಿವೆ ಎಂದು ಹೇಳಿದರು. ಸಮಾಜಕ್ಕೆ ಏನು ಕೊಡಬೇಕೋ ಆ ಕೆಲಸ ಮಾಧ್ಯಮಗಳಿಂದ ಆಗಬೇಕು. ಸೋಲನ್ನು ನಾವೇ ಬರಮಾಡಿಕೊಳ್ಳುತ್ತೇವೆಯೇ ಹೊರತು, ಸೋಲು ಅದಾಗಿ ಬರುವುದಿಲ್ಲ. ಇನ್ನೊಬ್ಬರ ತೇಜೋವಧೆ, ವೈಯುಕ್ತಿಕ ವಿಚಾರಗಳನ್ನು ಹೊರತುಪಡಿಸಿ ದೂರದೃಷ್ಟಿಯ ಕೆಲಸ ಮಾಡಿದರೆ ಖಂಡಿತಾ ಪತ್ರಿಕೆಗೆ ಭವಿಷ್ಯವಿದೆ ಎಂದು, ರಮೇಶ್ ಹೇಳಿದರು.
ಚಿತ್ತಾರ ವಾರ್ತೆ ಪ್ರಧಾನ ಸಂಪಾದಕಿ ಬಿ.ಆರ್. ಸವಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ಆನಂದ್ ಕೊಡಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತಿ ಆನಂದ್ ಮತ್ತು ಇಂಚರ ಪ್ರಾರ್ಥಿಸಿದರು. ಚಿತ್ತಾರ ಸಂಕಲನಕಾರ ರಿಜ್ವಾನ್ ಹುಸೇನ್ ಸ್ವಾಗತಿಸಿದರೆ, ನಿರೂಪಕಿ ಗ್ರೀಷ್ಮಾ ವಂದಿಸಿದರು. ಕಾರ್ಯಕ್ರಮವನ್ನು ನಿರೂಪಕಿ ಪವಿತ್ರ ಭರತ್ ನಿರೂಪಣೆ ಮಾಡಿದರು.

error: Content is protected !!