KSRTC ಖಾಸಗೀಕರಣದ ಹುನ್ನಾರ : ಕೊಡಗು ಸಿಪಿಐಎಂ ಆರೋಪ

April 16, 2021


ಮಡಿಕೇರಿ ಏ.16 : ಮಡಿಕೇರಿ KSRTC ಡಿಪೋದಲ್ಲಿ ಅಧಿಕಾರದಲ್ಲಿರುವವರು ಈಗಾಗಲೇ ಖಾಸಗೀಕರಣ ಪ್ರಕ್ರಿಯೆಯನ್ನು ತಮ್ಮದೇ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಈ ಡಿಪೋದಿಂದ ಗ್ರಾಮೀಣ ಭಾಗಗಳಿಗೆ ಅಗತ್ಯ ಬಸ್ ಸೇವೆಯನ್ನು ಒದಗಿಸದೆ ಖಾಸಗಿಯವರಿಗೆ ಪರೋಕ್ಷ ಬೆಂಬಲ ನೀಡಲಾಗುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ(M) ಕೊಡಗು ಜಿಲ್ಲಾ ಘಟಕ ಆರೋಪಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಈ.ರಾ.ದುರ್ಗಪ್ರಸಾದ್, ಈ ಡಿಪೋದ ಕಾರ್ಯನಿರ್ವಹಣೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.
ಕಳೆದ ಸಾಲಿನ ಆರಂಭದಲ್ಲಿಯೇ ಸಾರಿಗೆ ಇಲಾಖೆಯೊಂದಿಗೆ ಒಪ್ಪಂದವೇರ್ಪಟ್ಟು ಆರನೇ ವೇತನ ಆಯೋಗದಂತೆ ವೇತನವನ್ನು ನವೀಕರಿಸಬೇಕಿತ್ತಾದರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅದನ್ನು ಮಾಡದೆ ವಂಚಿಸಿರುವ ಕಾರಣ ಕೆಎಸ್‍ಆರ್.ಟಿ.ಸಿ. ನೌಕರರು ಹೋರಾಟದ ಹಾದಿ ಹಿಡಿದಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸಾರ್ವಜನಿಕರು ಬೆಂಬಲ ನೀಡುವಂತೆ ಮನವಿ ಮಾಡಿದರಲ್ಲದೆ, ಸಾರಿಗೆ ನೌಕರರ ನ್ಯಾಯಯುತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ಸಾರಿಗೆ ಇಲಾಖೆಯಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸರ್ಕಾರದೊಂದಿಗೆ ಒಪ್ಪಂದವಾಗಬೇಕು, ಈ ಆಧಾರದಲ್ಲಿ 2020ರ ಜನವರಿಯಲ್ಲೆ ಸಾರಿಗೆ ನೌಕರರ ವೇತನಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ಒಪ್ಪಂದಕ್ಕೆ ಮುಖ್ಯ ಮಂತ್ರಿ ಯಡಿಯೂರಪ್ಪವರ ಸರ್ಕಾರ ಸಹಮತ ವ್ಯಕ್ತಪಡಿಸದೆ ಒಪ್ಪಂದವನ್ನು ನವೀಕರಿಸಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್‍ನಲ್ಲಿ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯ ಬಳಿಕ, ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಸಮ್ಮುಖದಲ್ಲಿ ಚರ್ಚೆ ನಡೆದು ಪ್ರಮುಖ ನಿರ್ಣಯಗಳಿಗೆ ಬರಲಾಗಿತ್ತೆಂದು ತಿಳಿಸಿದರು.
ಅಂದಿನ ತೀರ್ಮಾನದಂತೆ ನಿಗಮದ ನೌಕರರಿಗೆ ಆರೋಗ್ಯಭಾಗ್ಯ ವಿಮಾ ಯೋಜನೆ, ಕೋವಿಡ್ ಸೋಂಕು ತಗಲಿದ ನಿಗಮದ ನೌಕರರು ಮರಣಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರಕಾರಿ ನೌಕರರಿಗೆ ನೀಡಿದಂತೆ 30 ಲಕ್ಷ ಪರಿಹಾರ, ನೌಕರರ ತರಬೇತಿಯ ಅವಧಿಯನ್ನು ಎರಡು ವರ್ಷದಿಂದ ಒಂದು ವರ್ಷಕ್ಕೆ ಇಳಿಸುವುದು, ನಿಗಮದಲ್ಲಿ ಹೆಚ್.ಆರ್.ಎಮ್.ಎಸ್.(ಮಾನವ ಸಂಪನ್ಮೂಲ) ವ್ಯವಸ್ಥೆಯನ್ನು ಜಾರಿಗೊಳಿಸುವುದು, ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡುವುದು, ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸುವ ತೀರ್ಮಾನ ಕೈಗೊಳ್ಳಲಾಗಿತ್ತೆಂದು ಮಾಹಿತಿ ನೀಡಿದರು.
ಅಲ್ಲದೆ, ಎನ್.ಐ.ಎನ್.ಸಿ. ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು, ವೇತನ ವಿಷಯಕ್ಕೆ ಸಂಬಂಧüಸಿದಂತೆ ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ್ದರು. ಈ ಬಗ್ಗೆ ಸರಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುವುದೆಂದು ಹೇಳಿ, ಈ ತೀರ್ಮಾನಗ¼ನ್ನು ಒಳಗೊಂಡ ನಡಾವಳಿಕೆ ಪತ್ರಕ್ಕೆ ಲಕ್ಷ್ಮಣ ಸವದಿ ಸಹಿ ಹಾಕಿದ್ದರು. ಆದರೆ ಸರ್ಕಾರವೇ ಒಪ್ಪಿರುವ ಅಂಶಗಳನ್ನು ಅನುಷ್ಠಾನಕ್ಕೆ ತರದಿರುವುದು ಖಂಡನೀಯ ಎಂದರು.
ನಾಲ್ಕು ತಿಂಗಳುಗಳು ಕಳೆದರೂ ಸರಕಾರ ತಾನುಕೊಟ್ಟ ಭರವಸೆಗಳನ್ನು ಈಡೇರಿಸದೆ, ಕೋವಿಡ್ ನೆಪ ಹೇಳಿಕೊಂಡು ನೌಕರರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.
ನೌಕರರು ಬೇಡಿಕೆಗಳನ್ನು ಮಂಡಿಸಿದರೆ, ರೈತರು ಸಾಲ ಮನ್ನಾ, ನ್ಯಾಯ ಬೆಲೆ ಕೇಳಿದರೆ ಆರ್ಥಿಕ ಸಂಕಷ್ಟದ ನೆಪ ಹೇಳುವ ಬಿಜೆಪಿ ನೇತೃತ್ವದ ಸರ್ಕಾರ, ಅಂಬಾನಿ, ಅದಾನಿಯಂತಹ ಆಗರ್ಭ ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡಿ, ಅವರ ಸಾಲವನ್ನು ಮನ್ನಾ ಮಾಡುವ ಮೂಲಕ ಜನದ್ರೋಹಿ ನೀತಿಯನ್ನು ಪ್ರತಿಬಿಂಬಿಸುತ್ತಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸದೇ ವಂಚಿಸಿರುವುದರಿಂದ ಕೆಎಸ್‍ಆರ್‍ಟಿಸಿ ನೌಕರರು ಮುಷ್ಕರದ ಹಾದಿ ಹಿಡಿದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ಜಿಲ್ಲಾ ಸಂಘಟನಾ ಸಮಿತಿ ಸದಸ್ಯರುಗಳಾದ ವೈ.ಕೆ. ಗಣೇಶ್, ಹೆಚ್.ಆರ್. ಶಿವಪ್ಪ ಉಪಸ್ಥಿತರಿದ್ದರು.


error: Content is protected !!