ಪ್ರಾಕೃತಿಕ ವಿಕೋಪ : ಮುನ್ನೆಚ್ಚರಿಕೆ ವಹಿಸಿದಲ್ಲಿ ಅನಾಹುತ ತಪ್ಪಿಸಲು ಸಾಧ್ಯ : ಡಾ.ಜೆ.ಆರ್.ಪರಮೇಶ ಅಭಿಪ್ರಾಯ

April 17, 2021

ಮಡಿಕೇರಿ ಏ.16 : ನೈಸರ್ಗಿಕವಾಗಿ ಸಂಭವಿಸುವ ಪ್ರಕೃತಿ ವಿಕೋಪವನ್ನು ಎದುರಿಸುವಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಕುರಿತು ನಗರದ ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಗಾರಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರ ಬೋಧಕರಾದ ಡಾ.ಜೆ.ಆರ್.ಪರಮೇಶ ಅವರು ಪ್ರಕೃತಿ ವಿಕೋಪವನ್ನು ಹೇಗೆ ಎದುರಿಸಬೇಕು. ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ನೈಸರ್ಗಿಕವಾಗಿ ಹಲವು ರೀತಿಯ ವಿಕೋಪಗಳು ಸಂಭವಿಸುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ನೀರು ಮತ್ತು ಹವಾಮಾನದಿಂದ ಉಂಟಾಗುವ ವೈಪರೀತ್ಯಗಳು, ಭೂಮಿಯ ಮೇಲ್ಮೈ ಮತ್ತು ಒಳಭಾಗ, ಕ್ವಾರಿ, ರಸ್ತೆ ಅಪಘಾತ, ಕಾಲ್ತುಳಿತ ಸಾರ್ಟ್ ಸಕ್ರ್ಯೂಟ್‍ನಿಂದ ಸಂಭವಿಸುವ ಅವಘಡಗಳು, ಹಾಗೆಯೇ ಜೈವಿಕ ವಿಕೋಪಗಳಾದ ಕೋವಿಡ್-19, ಕಾಲರಾ, ಡೆಂಗ್ಯೂ ಹೀಗೆ ವಿವಿಧ ರೀತಿಯಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಬಹುದಾಗಿದ್ದು, ಇವುಗಳನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಡಾ.ಪರಮೇಶ್ ಅವರು ಹೇಳಿದರು.
ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಜಿಲ್ಲೆಯಲ್ಲಿ ವಲ್ನರಬಲ್ ಪ್ರದೇಶವನ್ನು ಗುರುಸಬೇಕಿದೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಪಶುಪಾಲನ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಬಿಸಿಎಂ ಇಲಾಖೆ ಅಧಿಕಾರಿ ಲಿಂಗರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್ ಅವರು ಪ್ರಕೃತಿ ವಿಕೋಪ ಎದುರಿಸುವಲ್ಲಿ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶಿವರಾಮ್ ಇತರರು ಇದ್ದರು.

error: Content is protected !!