50 ಪುಸ್ತಕಗಳ ಲೋಕಾರ್ಪಣೆಗೆ ಕಾರಣಕರ್ತ ಬೊಳ್ಳಜಿರ ಬಿ.ಅಯ್ಯಪ್ಪ : ಸಮಾಜ ಸೇವೆಯಲ್ಲೇ ಇವರಿಗೆ ತೃಪ್ತಿ

April 17, 2021

ಸಾಮಾಜಿಕ ಕಳಕಳಿಯ ಸಂಘಟನೆಗಳನ್ನು ಅಣಬೆಗಳಂತೆ ಹುಟ್ಟು ಹಾಕುವುದು ಸುಲಭ, ಆದರೆ ಅವುಗಳನ್ನು ಬೆಳೆಸುವುದು ಮತ್ತು ಹಿಡಿದ ಗುರಿ ಸಾಧಿಸಿ ದಡ ಸೇರುವುದು ಬಹಳ ಕಷ್ಟ.
ಸಂಘಟನೆ ಆರಂಭವಾಗುವಾಗ ನೂರಾರು ಮಂದಿ ಜೊತೆಯಲ್ಲಿರುತ್ತಾರೆ, ದಿನ ಕಳೆದಂತೆ ಒಂದೆರಡು ಮಂದಿಯಷ್ಟೇ ಉಳಿದುಕೊಳ್ಳುತ್ತಾರೆ. ಆ ನಂತರ ಆ ಸಂಘಟನೆಯೇ ಅಳಿದು ಹೋಗುತ್ತದೆ. ಆದರೆ ಯಾವುದೇ ಏಳು ಬೀಳುಗಳಿದ್ದರೂ ತಾನೊಬ್ಬನೇ ನಾವಿಕನಾಗಿ ಸಂಘಟನೆಯನ್ನು ಮುನ್ನಡೆಸಿದರೂ ಕಳೆದ 9 ವರ್ಷಗಳಿಂದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕಟ್ಟಿ ಬೆಳೆಸಿದ “ಕೊಡವ ಮಕ್ಕಡ ಕೂಟ” ಇಂದಿಗೂ ತನ್ನ ನಿಸ್ವಾರ್ಥ ಸೇವೆಯ ಮೂಲಕ ಸಾಮಜದ ಗಮನ ಸೆಳೆದಿದೆ.
ಕೊಡವ ಸಂಸ್ಕøತಿ, ಸಾಹಿತ್ಯ, ಕಲೆ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಬೇಕು ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು 2013 ರಲ್ಲಿ “ಕೊಡವ ಮಕ್ಕಡ ಕೂಟ”ವನ್ನು ಸ್ಥಾಪಿಸಿದರು. ಆದರೆ ವರ್ಷಗಳು ಕಳೆದಂತೆ ತಮ್ಮ ಸಂಘಟನೆಯನ್ನು ಕೊಡವ ಪ್ರೀತಿಗೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ಭಾಷೆಯ ಬೆಳವಣಿಗೆಗೂ ಪೂರಕವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಂಡರು.
ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಲೋಕದ ಬಗ್ಗೆ ಹೆಚ್ಚು ಆಸಕ್ತಿ ತೋರಿದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ತಮ್ಮ ಸಂಘಟನೆಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಒಟ್ಟು 50 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಎಲ್ಲಾ ಭಾಷೆಗಳ ಮೇಲೂ ಅಭಿಮಾನ ತೋರಿದ ಕಾರಣದಿಂದ ಕೊಡವ, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಪುಸ್ತಕಗಳು ಲೋಕಾರ್ಪಣೆಗೊಂಡಿವೆ. ಇವರ ಈ ಪ್ರಯತ್ನದ ಫಲವಾಗಿ 30 ಕ್ಕೂ ಹೆಚ್ಚು ಹೊಸ ಬರಹಗಾರರು ಸಾಹಿತ್ಯ ಲೋಕಕ್ಕೆ ಪರಿಚಯವಾಗಿದ್ದಾರೆ.
ಒಂದು ಪುಸ್ತಕವನ್ನು ಬರೆಯುವ ಕೆಲಸ ಸುಲಭವಾಗಿರಬಹುದು, ಆದರೆ ಆ ಪುಸ್ತಕ ಲೋಕಾರ್ಪಣೆಯಾಗಬೇಕಾದರೆ ತಾಯಿಯ ಗರ್ಭದಿಂದ ಶಿಶುವೊಂದು ಹೊರ ಬರುವಷ್ಟೇ ಕಷ್ಟ ಎನ್ನುವ ಮಾತನ್ನು ಹಿರಿಯರು ಹೇಳುತ್ತಾರೆ. ಎಷ್ಟೇ ಕಷ್ಟಗಳು ಎದುರಾದರೂ, ಆರ್ಥಿಕ ಹಿನ್ನಡೆ ಕಾಡಿದರೂ ನಿಗಧಿಯಾದ ದಿನಾಂಕದಂದು ಪುಸ್ತಕವನ್ನು ಲೋಕಾರ್ಪಣೆ ಮಾಡುವ ಮೂಲಕ ಬರಹಗಾರರಲ್ಲಿ ಹೊಸ ಸ್ಫೂರ್ತಿಯನ್ನು ತುಂಬುವ ಕಾರ್ಯ ಮಾಡಿದವರು ಬೊಳ್ಳಜಿರ ಬಿ.ಅಯ್ಯಪ್ಪ.
ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಕೊಡವ ಭಾಷೆಯಲ್ಲಿ ಬರೆದ “ಪವಳ ಸಾಲ್” ಕೊಡವ ಮಕ್ಕಡ ಕೂಟದಿಂದ ಪ್ರಕಟಗೊಂಡ ಮೊದಲ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರಕಟಿಸಲು ಅಯ್ಯಪ್ಪ ಅವರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ನಂತರದ ದಿನಗಳಲ್ಲಿ ದಾನಿಗಳ ಸಹಕಾರದಿಂದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆಯಾದರು ಹಲವು ಬಾರಿ ತಮ್ಮ ಹಣವನ್ನೇ ಕಳೆದುಕೊಂಡಿದ್ದಾರೆ.
ಪುಸ್ತಕ ಪ್ರಕಟಣೆಯಲ್ಲಿ ಇವರಿಗಿರುವಷ್ಟು ಆಸಕ್ತಿ ಕೊಡಗು ಜಿಲ್ಲೆಯಲ್ಲಿ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಒಂದು ಪುಸ್ತಕವನ್ನು ಹೊರ ತರಬೇಕಾದರೆ ರಾತ್ರಿ, ಹಗಲೆನ್ನದೆ ಅದರ ಹಿಂದೆಯೇ ಬಿದ್ದು, ಪ್ರಕಟವಾಗುವಲ್ಲಿಯವರೆಗೆ ವಿಶ್ರಾಂತಿ ಇಲ್ಲದೆ ತೊಡಿಸಿಕೊಳ್ಳುವ ಗುಣ ಅಯ್ಯಪ್ಪ ಅವರದ್ದು. ಇವರ ಈ ಶ್ರದ್ಧೆಯಿಂದಲೇ ಕಳೆದ 4 ವರ್ಷಗಳಲ್ಲಿ 50 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲು ಸಾಧ್ಯವಾಗಿದೆ.
::: ಪ್ರಕಟಗೊಂಡ ಪುಸ್ತಕಗಳು :::
ಕೊಡಗ್‍ರ ಸಿಪಾಯಿ, ಪವಳ ಸಾಲ್, ಆಟ್ ಪಾಟ್ ಪಡಿಪು, ಚಾಯಿ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡವಾಮೆಕ್ ಬಂದಲಕೆ, ಬಲ್ಲಾದ ಪಳಮೆ, ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ. ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ (ಎರಡನೇ ಮುದ್ರಣ), ಆಟ್ ಪಾಟ್ ಪಡಿಪು ಪುಸ್ತಕ (ಮೂರನೆ ಮುದ್ರಣ), ಕುಂಞÂ ಪುಟ್ಟ್‍ನಲ್ಲಿ, ದೀವಾನ್ ಚೆಪ್ಪುಡಿರ ಪೆÇನ್ನಪ್ಪ, ವಾಲ್ಮೀಕಿ ರಾಮಾಯಣ, ಕೊಡವ ಕ್ರೀಡಾ ಕಲಿಗಳು, ಕೊಡವ ಭಾಗವತ, ಆಟ್ ಪಾಟ್ ಪಡಿಪು ಪುಸ್ತಕ (ನಾಲ್ಕನೇ ಮುದ್ರಣ), ಅಪ್ಪಚ್ಚ ಕವಿರ ನೆಪ್ಪು, 1785 Coorg (Tippu’s Dairy),   Kodagu Principality V/s British Emipire, ಕೊಡಗ್‍ರ ಸಂಗೀತ ಸಾಹಿತ್ಯ ಕಲಾವಿದಂಗ, ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು,
The Major who kept his Cool, ಚಿಗುರೆಲೆಗಳು, ಪುಣ್ಯಕ್ಷೇತ್ರ ಪರಿಚಯ, ಹಣ್ಣೆಲೆ ಚಿಗುರೆಲೆ, ಆಟ್ ಪಾಟ್ ಪಡಿಪು ಪುಸ್ತಕ (ಐದನೇ ಮುದ್ರಣ), ಪೊಂಜಂಗ್, ಮಹಾವೀರ ಅಚ್ಚುನಾಯಕ, ವಿಧಿರ ಕಳಿಲ್, ಕರಗಿದ ಬದುಕು, ಆರೋಗ್ಯ ಮತ್ತು ಸಾಮಾನ್ಯ ರೋಗಗಳಿಗೆ ಗೃಹ ಚಿಕಿತ್ಸೆಗಳು, ಪುಣ್ಯ ಮಂದಿರ್ (ಹಿಂದಿ),Musical Stars of Coorg, ವೀರ ಚಕ್ರ, ಮೋಹ ಪಾಶ, ಬದ್‍ಕ್ ಪಿಂಚ ದೇಚವ್ವ, ಪಾಂಚಜನ್ಯ, The Gandhi of Kodagu,ಆಂಜ ಮುತ್ತ್, ಅಪ್ಪಣ್ಣ ದಂಪತಿಯ ಕಂಡ ಅಮೇರಿಕಾ, ಅಪ್ಪಣ್ಣ ದಂಪತಿಯ ಕಂಡ ಯುರೋಪ್, ಚಂಗೀರ, ಒತ್ತ ಜೋಡಿ, ಕಲ್ಪನೆಯ ಕನ್ನಡಿ, ನಾಡ ಪೆದ ಆಶಾ, ಬೈಸಿಕಲ್, ನೆನೆನೆನೆದೆ, ಜೋಕ್ ಫಾಲ್ಸ್.
ಬೊಳ್ಳಜಿರ ಅಯ್ಯಪ್ಪ ಸಂಪಾದಕತ್ವದಲ್ಲಿ ಚಂಗೀರ ಮತ್ತು ಒತ್ತ ಜೋಡಿ ಪುಸ್ತಕ ಹೊರ ಬಂದಿದ್ದು, ಆಟ್-ಪಾಟ್ ಪಡಿಪು ಎನ್ನುವ ಜನಪದ ಸಂಗ್ರ್ರಹ ಪುಸ್ತಕವನ್ನು ಕೂಡ ಪ್ರಕಟಿಸಿದ್ದಾರೆ.
::: ಸಂಘ ಸಂಸ್ಥೆಗಳಲ್ಲಿ ಭಾಗಿ :::
2013ನೇ ಇಸವಿಯಿಂದ ಕೊಡವ ಮಕ್ಕಡ ಕೂಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಕೊಡವ ಸಮಾಜ ಒಕ್ಕೂಟದ ನಿರ್ದೇಶಕ, ಮಡಿಕೇರಿ ಕೊಡವ ಸಮಾಜದ ಮೂರನೇ ಅವಧಿಗೆ ನಿರ್ದೇಶಕ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಕೊಡವ ಕೇರಿಯ ನಿರ್ದೇಶಕ, ಫೀ.ಮಾ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ಮಾಜಿ ನಿರ್ದೇಶಕ, ‘ಕಾವೇರಿ ಟೈಮ್ಸ್’ ಕನ್ನಡ ದಿನಪತ್ರಿಕೆಯ ಪ್ರಕಾಶಕರಾಗಿದ್ದಾರೆ.
::: 2 ಲಕ್ಷ ರೂ. ನೀಡಿದರು :::
ಕಲರ್ಸ್ ಕನ್ನಡ ಚಾನೆಲ್‍ನಲ್ಲಿ ನಟ ಪುನೀತ್ ರಾಜ್‍ಕುಮಾರ್ ನಡೆಸಿಕೊಡುವ ಫ್ಯಾಮಿಲಿ ಪವರ್ ರಿಯಾಲಿಟಿ ಶೋದಲ್ಲಿ ತನ್ನ ಕುಟುಂಬದೊಂದಿಗೆ ಪಾಲ್ಗೊಂಡು ಎರಡು ಲಕ್ಷ ರೂ. ಗೆದ್ದಿರುವುದಲ್ಲದೆ, ಆ ಹಣವನ್ನು ಸೇನೆಯಲ್ಲಿ ಮೃತಪಟ್ಟ ದಾವಣಗೆರೆಯ ಯೋಧ ಜಾವೀದ್ ಕುಟುಂಬಕ್ಕೆ ದಾನವಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹಲವು ಸಾಮಾಜಿಕ ಕಳಕಳಿಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅಯ್ಯಪ್ಪ ಅವರು, ಮಡಿಕೇರಿ ನಗರದ ವಿವಿಧ ರಸ್ತೆಗಳಿಗೆ ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ದಾನಿ ಕೊರವಂಡ ನಂಜಪ್ಪ, ಕೊಡಗಿನ ಗಾಂಧಿ ಸ್ವಾತಂತ್ರ್ಯ್ರ ಹೋರಾಟಗಾರ ಪಂದ್ಯಂಡ ಬೆಳ್ಯಪ್ಪ ಅವರ ಹೆಸರನ್ನು ಇಡುವಲ್ಲಿ ಯಶಸ್ವಿಯಾಗಿದ್ದಾರೆ.
::: ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ :::
ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೇವಯ್ಯ ಅವರ ಪ್ರತಿಮೆ ಸ್ಥಾಪನೆಗೂ ಇವರೇ ಕಾರಣಕರ್ತರಾಗಿದ್ದಾರೆ. ದೇವಯ್ಯ ಅವರ ಸ್ಮರಣೆ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತಿದ್ದು, ಇದಕ್ಕೂ ಅಯ್ಯಪ್ಪ ಅವರೇ ನಾಂದಿ ಹಾಡಿದರು.
ಪ್ರತಿಮೆ ಸ್ಥಾಪನೆಯ ನೇತೃತ್ವ ವಹಿಸಿದ್ದ ಬೊಳ್ಳಜಿರ ಅಯ್ಯಪ್ಪ ಅವರನ್ನು ಕೊಯಿಮೆ ಕಾರ್ಯಕ್ರಮದಲ್ಲಿ ಅಜ್ಜಮಾಡ ಕುಟುಂಬಸ್ಥರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.
:: ಸಂಸ್ಕೃತಿ ಜಾಗೃತಿ :::
ಕೊಡವ ಬೈ ರೇಸ್ ಆಧಾರದಂತೆ ಕೊಡವರ ಹಕ್ಕಾದ ಕೋವಿ ಹಕ್ಕು ವಿನಾಯಿತಿ ದೊರೆಯಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಗುತ್ತಿದ್ದ ಅಡ್ಡಿಯನ್ನು ಬಗೆಹರಿಸುವಲ್ಲಿಯೂ “ಕೊಡವ ಮಕ್ಕಡ ಕೂಟ” ಪ್ರಮುಖ ಪಾತ್ರ ವಹಿಸಿದೆ.
ಸ್ವಚ್ಛತಾ ಆಂದೋಲನ, ಪರಿಸರ ಪ್ರೇಮದಂತಹ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಅಯ್ಯಪ್ಪ ಅವರು, ಹವ್ಯಾಸಿ ಬರಹಗಾರರಾಗಿ ಸಾಮಾಜಿಕ ಜಾಗೃತಿಯ ಬರಹಗಳ ಮೂಲಕ ಗಮನ ಸೆಳೆದಿದ್ದಾರೆ. ಕೊಡವ ಆಟ್-ಪಾಟ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಸಾಂಸ್ಕøತಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕುಂಞÂಯಡ ಕೊಡವ ಜಾನಪದ ಸಾಂಸ್ಕøತಿಕ ನಮ್ಮೆಯನ್ನು 2015ರಲ್ಲಿ ಪೊನ್ನಂಪೇಟೆಯಲ್ಲಿ, 2016ರಲ್ಲಿ ನಾಪೋಕ್ಲುವಿನಲ್ಲಿ ಹಾಗೂ 2017ರಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಸ್ಪಂದನೆ ದೊರೆತ್ತಿದೆ.
ವಿಚಾರ ಗೋಷ್ಠಿ, ಆಟ್-ಪಾಟ್-ಪಡಿಪು ಕಾರ್ಯಕ್ರಮ, ಕೊಡವ ಗ್ರಂಥ ‘ಪಟ್ಟೋಲೆ ಪಳಮೆ’ ಪುಸ್ತಕವನ್ನು ಉಡುಗೊರೆ ರೂಪದಲ್ಲಿ ನೀಡಿ ಸಾಹಿತ್ಯದ ಕ್ಷೇತ್ರದ ಮೇಲೆ ಅಭಿಮಾನ ಮೂಡಿಸಿದ್ದಾರೆ. ಈಗಾಗಲೇ ಉತ್ಸಾಹಿ ಸಾಹಿತಿಗಳ 25 ಕೊಡವ ಭಾಷಾ ಪುಸ್ತಕಗಳನ್ನು ಕೊಡವ ಮಕ್ಕಡ ಕೂಟದ ಮೂಲಕ ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ ಕನ್ನಡ ಭಾಷೆಯ 19 ಮತ್ತು ಇಂಗ್ಲೀಷ್ ಭಾಷೆಯ 5 ಹಾಗೂ ಹಿಂದಿ ಭಾಷೆಯ 1 ಪುಸ್ತಕವನ್ನು ಲೋಕಾರ್ಪಣೆ ಮಾಡಿ ಎಲ್ಲಾ ವರ್ಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
“1965ರ ಯುದ್ಧ ಹಾಗೂ ಕೊಡಗಿನ ಮಹಾವೀರ”À, ಮಾವೀರ ಅಚ್ಚು ನಾಯಕ, ಕೊಡಗಿನ ಗಾಂಧಿ, ಪಂದ್ಯಂಡ ಐ ಬೆಳ್ಯಪ್ಪ, ದೀವಾನ್ ಚೆಪ್ಪುಡಿರ ಪೊನ್ನಪ್ಪ, ಕೊಡವ ಕ್ರೀಡಾ ಕಲಿಗಳು, ಹರದಾಸ ಅಪ್ಪಚ್ಚ ಕವಿರ ನೆಪ್ಪು, 1785 ಕೂರ್ಗ್ ಟಿಪ್ಪುಸ್ ಡೈರಿ ಯಂತಹ ಗಮನಾರ್ಹ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವಲ್ಲಿ ಶ್ರಮ ವಹಿಸಿದ್ದಾರೆ.
ಪ್ರತಿಯೊಂದು ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕೆನ್ನುವ ಉತ್ಸಾಹ ಹೊಂದಿರುವ ಬೊಳ್ಳಜಿರ ಅಯ್ಯಪ್ಪ, “ಕೊಡಗ್‍ರ ಸಿಪಾಯಿ” ಹಾಗೂ ನಾಡ ಪೆದ ಆಶಾ ಕೊಡವ ಚಲನಚಿತ್ರಗಳಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
::: ಜಿಲ್ಲಾಡಳಿತದಿಂದ ಪ್ರಶಂಸೆ :::
2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ನೂರಾರು ಮಂದಿ ಸಂತ್ರಸ್ತರು ಅತಂತ್ರರಾದಾಗ ಸ್ವಯಂ ಸೇವಕರಾಗಿ ದುಡಿದು ನೋವಿಗೆ ಸ್ಪಂದಿಸಿರುವ ಇವರು ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಕೋವಿಡ್ ವಾರಿಯರ್ ಆಗಿ ದುಡಿದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
::: ಅತ್ಯುತ್ತಮ ಪ್ರಶಸ್ತಿ :::
ಬೊಳ್ಳಜಿರ ಅಯ್ಯಪ್ಪ ಅವರು ಬರೆದ “ಕಾಲೂರು ಸಂತ್ರಸ್ತ ಮಹಿಳೆಯರ ಜೀವನಗಾಥೆ”ಯ ಗ್ರಾಮೀಣ ವರದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಹಿರಿಯ ಪತ್ರಕರ್ತ ದಿ.ಪದ್ಯಾಣ ಗೋಪಾಲಕೃಷ್ಣಭಟ್ ಪ್ರಶಸ್ತಿ 2019 ರಲ್ಲಿ ಲಭಿಸಿದೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಕೂಡ ಅಯ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದೆ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಕಾಂ (ಸಿ.ಎ) ಪದವಿ ಪಡೆದಿರುವ ಬೊಳ್ಳಜಿರ ಬಿ.ಅಯ್ಯಪ್ಪ ಅವರು ನಿವೃತ್ತ ಸಬ್ ಇನ್ಸ್‍ಪೆಕ್ಟರ್ ಬೊಳ್ಳಜಿರ ಬೋಪಯ್ಯ ಹಾಗೂ ಯಶೋಧ ಬೋಪಯ್ಯ ಅವರ ಪುತ್ರ.
ಪತ್ನಿ ಯಮುನಾ ಅಯ್ಯಪ್ಪ ಅವರು ಕೂಡ ಕಲಾವಿದರಾಗಿದ್ದು, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪುತ್ರಿ ದೇಚಮ್ಮ ಹಾಗೂ ಪುತ್ರ ಬೋಪಣ್ಣ ಅವರು ತಂದೆಯ ಬಿಡುವಿಲ್ಲದ ಚಟುವಟಿಕೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

error: Content is protected !!