ಸಿನಿಮಾ ನಗರಿಯಲ್ಲಿ ಕೊಡಗಿನ ಹೆಮ್ಮೆಯ ಗರಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ

April 17, 2021

ಖ್ಯಾತ ಚಲನಚಿತ್ರ ನಿರ್ದೇಶಕ ಎ.ಟಿ.ರಘು ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದ ನಂತರ ಕೊಡವ ಚಿತ್ರರಂಗ ಸೊರಗಿದಂತೆ ಕಂಡು ಬಂತು. ಆದರೆ ಕೊಡವ ಚಲನಚಿತ್ರಗಳ ನಿರ್ಮಾಣಕ್ಕೆ ಮತ್ತೆ ವೇದಿಕೆ ಕಲ್ಪಿಸುವ ಮೂಲಕ ಸ್ಫೂರ್ತಿಯನ್ನು ತುಂಬುವ ಕಾರ್ಯವನ್ನು ಮಾಡಿ ಯಶಸ್ಸನ್ನು ಸಾಧಿಸಿದವರು ನಿರ್ಮಾಪಕ, ನಿರ್ದೇಶಕ, ಕಥೆಗಾರ, ಸಂಭಾಷಣೆ ರಚನೆಕಾರ, ನಟ ಕೊಡಗಿನ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ.
ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ನಿವೃತ್ತಿ ನಂತರ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಗಮನ ಸೆಳೆದಿದ್ದಾರೆ.
ಕನ್ನಡ ಮತ್ತು ಕೊಡವ ಭಾಷೆಯ ಚಿತ್ರಗಳÀಲ್ಲಿ ಅಭಿನಯಿಸುವುದರೊಂದಿಗೆ ನಿರ್ದೇಶನ, ನಿರ್ಮಾಣ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕೊಡವ ಧಾರಾವಾಹಿಗಳಲ್ಲಿ ನಟಿಸುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಖ್ಯಾತ ನಿರ್ದೇಶಕ ಕೊಡಗಿನ ಎ.ಟಿ.ರಘು ಅವರು ನಿರ್ದೇಶಿಸಿರುವ ಕೊಡವ ಧಾರಾವಾಹಿ “ಗೆÀಜ್ಜೆತಂಡ್” ಮೂಲಕ ಪ್ರಕಾಶ್ ಕಾರ್ಯಪ್ಪ ಕಲಾ ಜೀವನ ಪ್ರಾರಂಭಿಸಿದರು.
ಬೆಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಹಾಲೋ ಬ್ರಿಕ್ಸ್ ಸಂಸ್ಥೆ ಜಾಹೀರಾತು ನೀಡಲು ತೆರಳಿದ್ದವರಿಗೆ ಕಲಾ ಜೀವನದ ಬಾಗಿಲು ತೆರೆಯಿತು. ನಿನ್ನ ಮುಖದಲ್ಲಿ ಕಲಾವಿದನ ಕಳೆ ಇದೆ ಎಂದು ಹೇಳಿದ ಎ.ಟಿ.ರಘು, ಬ್ರೋಕರ್ ಪಾತ್ರ ನೀಡಿದರು. ಮೊದಲ ಪ್ರಯತ್ನದಲ್ಲಿಯೇ ವೃತ್ತಿಪರ ನಟನಂತೆ ಪ್ರಕಾಶ್ ಕಾರ್ಯಪ್ಪ ಅಭಿನಯಿಸಿದರು. ನಂತರದ ದಿನಗಳಲ್ಲಿ ಎ.ಟಿ.ರಘು ನಿರ್ದೇಶನದ “ಜಮ್ಮಾಭೂಮಿ” ಹಾಗೂ ತಮ್ಮ ಪತ್ನಿ ಯಶೋಧಾ ಪ್ರಕಾಶ್ ನಿರ್ಮಾಣದ “ನಂಗ ಕೊಡವ” ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.
ನಿರ್ದೇಶಕ ಎನ್.ಟಿ.ಜಯರಾಮ್ ರೆಡ್ಡಿ ನಿರ್ದೇಶನದ ಕನ್ನಡ ಚಿತ್ರಗಳಾದ “ಮೀಸಲಾತಿ”, “ತಮಟೆ ನರಸಿಂಹಮಯ್ಯ”, ಚಿಕ್ಕಣ್ಣ ನಿದೇರ್ಶನದ “ಕಾಲ್ + ಏಜ್”, ಕೊಡಗಿನ ಮಾಯಾಮುಡಿಯವರಾದ ಡಾ.ಶೈಲಿ ನಿರ್ದೇಶನದ ನ್ಯೂ ಕ್ಲೈಮ್ಯಾಕ್ಸ್, ಪಟ್ಟಡ ಸೋಮಣ್ಣ ನಿರ್ಮಿಸಿರುವ ಈಶ ಮಹೇಶ ಹಾಗೂ ನಿರ್ದೇಶಕ ಗೋಪಿ ಪೀಣ್ಯ ನಿರ್ದೇಶನದ “ತೇಳಂಗ್ ನೀರ್” ಕೊಡವ ಚಿತ್ರದಲ್ಲಿ ನಟಿಸಿದ್ದಾರೆ.
::: ಚಲನಚಿತ್ರ ನಿರ್ಮಾಣ :::
ತಮ್ಮ ಪತ್ನಿ ಯಶೋಧಾ ಪ್ರಕಾಶ್ ತಮ್ಮದೇ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಮೂಲಕ ನಿರ್ಮಿಸಿದ, ಎಂ.ಡಿ.ಕೌಶಿಕ್ ನಿರ್ದೇಶನದ “ಬಾಕೆಮನೆ” ಕೊಡವ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ 2017 ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು.
ತಮ್ಮ ಹೆಸರಿನಲ್ಲಿರುವ “ಕೂರ್ಗ್ ಕಾಫಿ ವುಡ್ ಮೂವೀಸ್” ಬ್ಯಾನರ್‍ನಲ್ಲಿ ಮಕ್ಕಳ ಚಲನಚಿತ್ರ ಆಶ್ರಯಧಾಮ (ಕನ್ನಡ) ನಿರ್ಮಿಸಿದರು. 2017ರಲ್ಲಿ ಈ ಚಲನಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಎಂದು ಮೆಚ್ಚುಗೆಗೆ ಭಾಜನವಾಗಿತ್ತು. ರಾಜ್ಯ ಮಟ್ಟದ ಪ್ರಶಸ್ತಿಗೆ ಈ ಚಿತ್ರ ಪರಿಶೀಲನೆಯಲ್ಲಿತ್ತು. ತಮ್ಮ ಸಂಸ್ಥೆ ಮೂಲಕ ಎನ್.ಟಿ.ಜಯರಾಮ ರೆಡ್ಡಿ ನಿರ್ದೇಶನದಲ್ಲಿ “ಮೇಸ್ಟ್ರು ದೇವರು” ಕನ್ನಡ ಚಿತ್ರ ನಿರ್ಮಿಸಿದರು.
ಸ್ವಸ್ತಿಕ್ ಎಂಟರ್‍ಟೈನ್ ಮೆಂಟ್ ಬ್ಯಾನರ್‍ನಲ್ಲಿ “ಸ್ಮಶಾನ ಮೌನ” ಚಿತ್ರ ನಿರ್ಮಿಸಿದರು. ಈ ಚಿತ್ರ 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿತು. ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರ್‍ನಲ್ಲಿ “ದೀಕ್ಷಾ” ಮಕ್ಕಳ ಚಿತ್ರ ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಕಲ್ಬುರ್ಗಿ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ. ಒಟ್ಟು 172 ಚಿತ್ರಗಳ ಪೈಕಿ “ದೀಕ್ಷಾ” ಪ್ರಶಸ್ತಿಗೆ ಭಾಜವಾಗಿರುವುದು ಹೆಗ್ಗಳಿಕೆಯಾಗಿದೆ. ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಜಿಲ್ಲೆಯಲ್ಲೇ ಮೊದಲು ಎಂಬಂತೆ ಆರಂಭಗೊಂಡಿರುವ ಮೂವಿ ಕ್ಲಬ್ ನಲ್ಲಿ ವಿದ್ಯಾರ್ಥಿಗಳಿಗಾಗಿ “ದೀಕ್ಷಾ” ಚಿತ್ರವನ್ನು ಪ್ರದರ್ಶಿಸಲಾಗಿದೆ.
“ಕೂರ್ಗ್ ಕಾಫಿ ವುಡ್ ಮೂವೀಸ್” ಬ್ಯಾನರ್‍ನಡಿ ನಿರ್ಮಾಣಗೊಂಡ “ಪರ್ಜನೀಯ” ಕನ್ನಡ ಚಿತ್ರವನ್ನು ಪ್ರಕಾಶ್ ಕಾರ್ಯಪ್ಪ ಅವರೇ ನಿರ್ದೇಶಿಸಿದ್ದಾರೆ. “ಅಬ್ದುಲ್ಲಾ” ಕನ್ನಡ ಚಿತ್ರಕ್ಕೆ ಪಾಲುದಾರ ನಿರ್ಮಾಪಕರಾಗಿದ್ದಾರೆ. “ಮಕ್ಕಳ ತೀರ್ಪು” ಕನ್ನಡ ಮಕ್ಕಳ ಚಲನಚಿತ್ರ ನಿರ್ದೇಶನ ಮಾಡಿದ್ದಾರೆ. “ನಾಡ ಪೆದ ಆಶಾ” ಕೊಡವ ಚಿತ್ರದ ಪಾಲುದಾರ ನಿರ್ಮಾಪಕರೂ ಆಗಿರುವ ಇವರು ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಕೂಡ ನಿಭಾಯಿಸಿದ್ದಾರೆ.
ಪ್ರಸ್ತುತ ಪ್ರಕಾಶ್ ಕಾರ್ಯಪ್ಪ ಅವರು ರಚಿಸಿರುವ ಕಥೆಯಾಧಾರಿತ ಕನ್ನಡ ಚಿತ್ರ “ಸಪ್ತ ಸೂತಕದ ಸುತ್ತ”ದ ಚಿತ್ರೀಕರಣ ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಇದರ ಪಾಲುದಾರ ನಿರ್ಮಾಪಕರು ಇವರೇ ಆಗಿದ್ದಾರೆ. ಅಲ್ಲದೆ ಇದು ಇವರ ಅಭಿನಯದ 12 ನೇ ಚಿತ್ರವಾಗಿದೆ. ಮಹಾಋಷಿ ಪ್ರೊಡಕ್ಷನ್‍ನಡಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಟಿ.ದೀಪೇಶ್ ನಿರ್ದೇಶಿಸುತಿದ್ದಾರೆ.
::: ಪುಸ್ತಕ ರಚನೆ :::
ಇವರು 5 ಪುಸ್ತಕಗಳನ್ನು ಕೂಡ ಬರೆದಿದ್ದು, ಕೊಡವ ಭಾಷೆಯ “ವಿಧಿರ ಕಳಿ”, ಕನ್ನಡ ಭಾಷೆಯ ಕರಗದ ಬದುಕು, ಮೋಹಪಾಶ, ವೀರಚಕ್ರ ಹಾಗೂ ಬೈಸಿಕಲ್ ಇವರ ರಚನೆಯಾಗಿದೆ.
::: ಫೀ.ಮಾ.ಕಾರ್ಯಪ್ಪ ಅವರಿಗೆ ಸಲಾಮಿ ಗಾರ್ಡ್ :::
ಬೆಂಗಳೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ “ಸಲಾಮಿ ಗಾರ್ಡ್” ಆಗಿ ಸೇವೆ ಸಲ್ಲಿಸಿದ್ದನ್ನು ಪ್ರಕಾಶ್ ಕಾರ್ಯಪ್ಪ ಹೆಮ್ಮೆಯಿಂದ ನೆನೆಯುತ್ತಾರೆ. ಸಲಾಮಿ ಗಾರ್ಡ್‍ಗಳ ಪೈಕಿ ಪ್ರತಿನಿತ್ಯ ಒಬ್ಬರಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಮಿಠಾಯಿ ನೀಡುತ್ತಿದ್ದರು. ಶಿಸ್ತುಬದ್ಧವಾಗಿ ಸಮವಸ್ತ್ರ ಧರಿಸಿದವರಿಗೆ ಈ ಮಿಠಾಯಿ ಸಿಗುತ್ತಿತ್ತು, ಮಿಠಾಯಿ ಪಡೆಯಲು ನಡೆಸಿದ ಸತತ ಪ್ರಯತ್ನ ವಿಫಲವಾಗಿ ಕೊನೆಗೊಮ್ಮೆ ಮಿಠಾಯಿ ಸಿಕ್ಕಿತು. ಆ ಮಿಠಾಯಿಯನ್ನು ಬಹುಕಾಲದಿಂದ ಸುರಕ್ಷಿತವಾಗಿ ಇಟ್ಟುಕೊಂಡಿದ್ದೇನೆ ಎಂದು ಸ್ಮರಿಸಿಕೊಳ್ಳುತ್ತಾರೆ.
::: ಬಹುಭಾಷೆ ಗೊತ್ತು :::
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರಿಗೆ ಬಹುಭಾಷಾ ಪಾಂಡಿತ್ಯವಿದೆ. ಕೊಡವ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ, ತುಳು ಭಾಷೆ, ಪಂಜಾಬಿ, ಬೋಜ್‍ಪುರಿ ಮೇಲೆ ಹಿಡಿತ ಹೊಂದಿದ್ದಾರೆ. ಭಾಷೆ ಗೊತ್ತಿದ್ದಷ್ಟು ವಿವಿಧ ವಿಷಯಗಳನ್ನು ಅರಿತುಕೊಳ್ಳಲು ಸುಲಭವಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
::: ಕಮಾಂಡೋ ಆಗಿದ್ದರು :::
ಭಾರತೀಯ ಸೇನೆ 1986 ರಲ್ಲಿ ರಚಿಸಿದ ಮೊದಲ ಬ್ಲ್ಯಾಕ್ ಕಮಾಂಡೋ ತಂಡದಲ್ಲಿ ನಾರ್ದನ್ ಕಮಾಂಡೋ (ಉದಮ್ ಪುರ್) ವಿಭಾಗದಲ್ಲಿ ಪ್ರಕಾಶ್ ಕಾರ್ಯಪ್ಪ ಸೇವೆ ಸಲ್ಲಿಸಿದ್ದಾರೆ. ಬ್ಲ್ಯಾಕ್ ಕಮಾಂಡೋ ತರಬೇತಿ ನನಗೆ ತುಂಬಾ ಪ್ರಯೋಜಕಾರಿಯಾಯಿತು. ಅಲ್ಲಿ ಬಾಕ್ಸಿಂಗ್, ಮಾರ್ಷಲ್ ಆಟ್ರ್ಸ್ ಕಲಿಯಲು ಸಾಧ್ಯವಾಯಿತು. ಇದು ಮುಂದಿನ ಬದುಕಿಗೆ ಸರಕಾರಿಯಾಯಿತ್ತೆಂದು ಪ್ರಕಾಶ್ ಕಾರ್ಯಪ್ಪ ಸ್ಮರಿಸುತ್ತಾರೆ.
::: ಪ್ರಕಾಶ್ ಕಾರ್ಯಪ್ಪ ಪರಿಚಯ :::
ಮಡಿಕೇರಿ ತಾಲೂಕು ವ್ಯಾಪ್ತಿಯ ಬೇಂಗೂರು ಚೇರಂಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಟ್ಟಿ ನಿವಾಸಿ ಕೊಟ್ಟುಕತ್ತಿರ ಏಲಕ್ಕಿ ಕಾರ್ಯಪ್ಪ-ರಾಗಿಣಿ ದಂಪತಿಯ ಏಕೈಕ ಪುತ್ರ. ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿ, 16ನೇ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು, 17 ವರ್ಷ ದೇಶ ಸೇವೆ ಮಾಡಿದರು. ಕಾಲೂರಿನ ಕೋಳುಮಾಡಂಡ ಮನೆಯಲ್ಲಿ ಬಾಲ್ಯ ಜೀವನವನ್ನು ಕಳೆದರು.
ಆಪರೇಷನ್ ಬ್ಲೂಸ್ಟಾರ್‍ನಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆ ಇವರದ್ದು. ಶ್ರೀಲಂಕಾ ಐಪಿಕೆಎಫ್ ನಲ್ಲಿ 22 ತಿಂಗಳು, ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಗ್ವಾಲಿಯರ್‍ನಲ್ಲಿರುವ ಭಾರತೀಯ ಸೇನೆಯ ಬಾಝ್ ಸಭಾಂಗಣದ ಉಸ್ತುವಾರಿಯನ್ನು ಸೇನಾ ಮುಖ್ಯಸ್ಥರು ಪ್ರಕಾಶ್ ಕಾರ್ಯಪ್ಪ ಅವರಿಗೆ ವಹಿಸಿದ್ದರು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು.
ನಿವೃತ್ತಿ ಸಮಯದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಅಟ್ಯಾಚ್‍ಮೆಂಟ್ ಸೇವೆಯಲ್ಲಿ ಪಾಲ್ಗೊಂಡಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ ಬೆಂಗಳೂರಿನಲ್ಲಿ ಹೋಟೆಲ್ ಉದ್ದಿಮೆ ಪ್ರಾರಂಭಿಸಿ ವಿಫಲರಾದರು. ಅಲ್ಲಿಂದ ಹಾಲೋ ಬ್ರಿಕ್ಸ್ ಫ್ಯಾಕ್ಟರಿ ಪ್ರಾರಂಭಿಸಿ ಸಫಲರಾದರು. ನಂತರ ಕಟ್ಟಡ ನಿರ್ಮಾಣ, ಕಟ್ಟಡ ನಿರ್ಮಾಣ ಸಾಮಾಗ್ರಿ ಪೂರೈಕೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
::: ಮನೆ ಮಾತಾದ ಕೊಡಗ್‍ರ ಸಿಪಾಯಿ :::
ಕೂರ್ಗ್ ಕಾಫಿ ವುಡ್ ಮೂವೀಸ್ ಸಂಸ್ಥೆ ಮೂಲಕ ನಿರ್ಮಿಸಿ, ನಿರ್ದೇಶನ ಮಾಡಿದ “ಕೊಡಗ್‍ರ ಸಿಪಾಯಿ” ಕೊಡವ ಚಲನಚಿತ್ರ ಸೂಪರ್ ಹಿಟ್ ಆಯಿತು. ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ ಕೊಡವ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಯಿತು.
ಅಂತರರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅವರು ನಾಯಕ ನಟರಾಗಿ ನಟಿಸಿದ ಚಿತ್ರ ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಬೆಂಗಳೂರು, ಮೈಸೂರಿನಲ್ಲಿಯೂ ಪ್ರದರ್ಶನ ಕಂಡಿತು. ಕೊಡವ ಸಮಾಜಗಳು “ಕೊಡಗ್‍ರ ಸಿಪಾಯಿ” ಪ್ರದರ್ಶನಕ್ಕೆ ಸಹಕಾರ ನೀಡಿದವು. ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು.
::: ಪ್ರತಿ ವರ್ಷ ಸಿನಿಮಾ :::
ಇದುವರೆಗೆ ಪ್ರಕಾಶ್ ಕಾರ್ಯಪ್ಪ ಅವರು 18 ಚಲನಚಿತ್ರಗಳÀಲ್ಲಿ ಮತ್ತು 3 ಧಾರವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ, ಕೊಡವ ಭಾಷೆಯಲ್ಲಿ 12 ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರತಿ ವರ್ಷ ಒಂದು ಕೊಡವ ಚಿತ್ರ ನಿರ್ಮಿಸುವ ಉದ್ದೇಶ ಹೊಂದಿದ್ದಾರೆ.
ಆ ಮೂಲಕ ಕೊಡವ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡಲು ಸಂಕಲ್ಪ ತೊಟ್ಟಿದ್ದೇನೆ. ಪತ್ನಿ ಯಶೋಧಾ ಪ್ರಕಾಶ್ ಅವರ ಸಹಕಾರದಿಂದ ಮುನ್ನಡೆಯುತ್ತಿದ್ದೇನೆ. ಕೊಡಗಿನಲ್ಲಿ ಚಲನಚಿತ್ರ ವೀಕ್ಷಿಸಲು ಸರ್ಕಾರ ಜನತಾ ಥಿಯೇಟರ್ ಸ್ಥಾಪಿಸಬೇಕು ಎಂದು ಕೊಟ್ಟ್‍ಕತ್ತಿರ ಪ್ರಕಾಶ್ ಕಾರ್ಯಪ್ಪ ಮನವಿ ಮಾಡಿದ್ದಾರೆ.
ಕೊಡವ ಸಿನಿಮಾಗಳ ಪ್ರದರ್ಶನಕ್ಕೆ ಎಲ್ಲಾ ಕೊಡವ ಸಮಾಜಗಳು ಸಹಕಾರ ನೀಡಬೇಕು ಮತ್ತು ಇಲ್ಲಿಯವರೆಗೆ ನೀಡಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿರುವ ಅವರು, ಕೊಡವ ಚಿತ್ರಗಳಿಗೆ ಕೊಡವ ಸಮಾಜಗಳೇ ಚಿತ್ರ ಮಂದಿರಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿತ್ರರಂಗದಲ್ಲಿ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದ್ದು, ಕೊಡಗಿನ ಜನರು ಹಾಗೂ ಕೊಡವ ಸಮಾಜಗಳು ಕೈಜೋಡಿಸಬೇಕೆಂದು ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ. ((ಬರಹ :: ಬೊಳ್ಳಜಿರ ಬಿ.ಅಯ್ಯಪ್ಪ))

error: Content is protected !!