ಗುಡ್ಡೆಮನೆ ಅಪ್ಪಯ್ಯ ಗೌಡರು ಅನಾಮಧೇಯ ವ್ಯಕ್ತಿ : ನ್ಯಾಯಾಲಯದ ಆದೇಶ ಸ್ವಾಗತಾರ್ಹವೆಂದ ಕಾವೇರಿಸೇನೆ

April 17, 2021

ಮಡಿಕೇರಿ ಏ.17 : ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ನಿರ್ಮಾಣಕ್ಕೆ ಅವಕಾಶ ಕೋರಿ ಕಾವೇರಿ ಜನ್ಮಭೂಮಿ ಟ್ರಸ್ಟ್ ಮತ್ತು ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಉಸ್ತುವಾರಿ ಸಮಿತಿಯಿಂದ ಹೂಡಲಾಗಿದ್ದ ದಾವೆಯನ್ನು ಮಡಿಕೇರಿಯ ಅಪರ ಸಿವಿಲ್ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿದೆ ಎಂದು ಕಾವೇರಿಸೇನೆ ಅಧ್ಯಕ್ಷ ರವಿಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯ ತನ್ನ ಆದೇಶದಲ್ಲಿ, ಕೋಟೆ ಆವರಣದಲ್ಲಿ ಅನಾಮಧೇಯ(ಅನ್‍ನೋನ್) ವ್ಯಕ್ತಿ ಗುಡ್ಡೆಮನೆ ಅಪ್ಪಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಅವಕಾಶವನ್ನು ಕೋರಿದ್ದಾರೆ ಎಂದು ತಿಳಿಸಿದೆ. ಸ್ಮಾರಕ ನಿರ್ಮಾಣದ ಪ್ರಯತ್ನಕ್ಕೆ ಮುಂದಾದವರು ಗುಡ್ಡೆಮನೆ ಅಪ್ಪಯ್ಯ ಎಂಬ ವ್ಯಕ್ತಿ ಇತಿಹಾಸ ಪುರುಷ, ಸ್ವಾತಂತ್ರ್ಯ ಹೋರಾಟಗಾರ ಎನ್ನುವುದನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದು, ದಾವೆ ವಜಾಗೊಂಡಿದೆ. ನ್ಯಾಯಾಲಯದ ಈ ಆದೇಶವನ್ನು ನಾವು ಸ್ವಾಗತಿಸುವುದಾಗಿ ಹೇಳಿದರು.
ಕೊಡಗಿನ ಇತಿಹಾಸ, ರಾಜರ ಆಳ್ವಿಕೆ ಮೊದಲಾದ ಸಮಗ್ರ ಮಾಹಿತಿಯನ್ನು ಒಳಗೊಂಡ ಸೂರ್ಯನಾಥ್ ಕಾಮತ್ ಅವರ ಸಂಪಾದಕತ್ವದಲ್ಲಿ ಹೊರ ಬಂದಿರುವ ‘ಕೊಡಗು ಗೆಜೆಟಿಯರ್’ನಲ್ಲೂ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಯಾವುದೇ ವಿಚಾರ ನಮೂದಾಗಿಲ್ಲ. ಮಡಿಕೇರಿ ಕೋಟೆಯು ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಪಟ್ಟ ಸ್ಮಾರಕವಾಗಿದೆ. ಆದರೆ ಕೋಟೆ ಸಂರಕ್ಷಿತ ಸ್ಮಾರಕವಲ್ಲ ಎನ್ನುವ ವಾದವನ್ನು ಕೋಟೆ ಆವರಣದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾದವರು ತಮ್ಮ ದಾವೆಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇಲ್ಲವಾದ್ದರಿಂದ ಸ್ಮಾರಕ ನಿರ್ಮಾಣದ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ರವಿಚಂಗಪ್ಪ ಸ್ಪಷ್ಟಪಡಿಸಿದರು.
ಇತಿಹಾಸದ ಪುಟಗಳಲ್ಲಿ ಇಲ್ಲದ ವ್ಯಕ್ತಿಯನ್ನು ಹೋರಾಟಗಾರನೆಂದು ಬಿಂಬಿಸುವ ಪ್ರಯತ್ನ ನಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿಸೇನೆ ತನ್ನ ಕಾನೂನು ಹೋರಾಟವನ್ನು ಮುಂದುವರೆಸಲಿದೆ ಎಂದು ಅವರು ತಿಳಿಸಿದರು.
ಕಾವೇರಿಸೇನೆಯ ಪ್ರಮುಖರಾದ ವಕೀಲ ಎನ್.ಕೆ.ಮಾಚಯ್ಯ ಮಾತನಾಡಿ, ಗುಡ್ಡೆಮನೆ ಅಪ್ಪಯ್ಯ ಗೌಡರು ಒಬ್ಬ ಸ್ಮಾತಂತ್ರ್ಯ ಹೋರಾಟಗಾರನೆಂದು ಹೇಳುವ ವಾದವನ್ನು ದೃಢ ಪಡಿಸುವಲ್ಲಿ ದಾವೆ ಹೂಡಿದವರು ಸಂಪೂರ್ಣ ವಿಫಲರಾಗಿದ್ದಾರೆ. ನ್ಯಾಯಾಲಯ ಅನಾಮಧೇಯ ವ್ಯಕ್ತಿ ಎಂದು ತಿಳಿಸಿದೆಯಾದರೆ, ಅದೇ ವ್ಯಕ್ತಿಯನ್ನು ಇತಿಹಾಸದ ವ್ಯಕ್ತಿಯಾಗಿ ಬಿಂಬಿಸುವ ಮೂಲಕ ಸಂಬಂಧಪಟ್ಟ ಸಂಘಟನೆಗಳು ಸುಳ್ಳು ಇತಿಹಾಸ ಸೃಷ್ಟಿ ಮಾಡಿವೆ ಎಂದು ಟೀಕಿಸಿದರು. ಇತಿಹಾಸ ಎಂದಿಗೂ ಸತ್ಯದ ಆಧಾರದ ಮೇಲೆ ನಿಲ್ಲಬೇಕೇ ಹೊರತು ಸುಳ್ಳಿನೊಂದಿಗೆ ಅಲ್ಲವೆಂದು ತೀಕ್ಷ್ಣವಾಗಿ ನುಡಿದರು.
ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಗುಡ್ಡೆಮನೆ ಅಪ್ಪಯ್ಯಗೌಡ ಅವರನ್ನು 1837 ರಲ್ಲಿ ಕೋಟೆ ಆವರಣದಲ್ಲಿ ಬ್ರಿಟಿಷರು ನೇಣಿಗೆ ಹಾಕಿದರು ಎಂದು ಪ್ರತಿಬಿಂಬಿಸಲಾಗುತ್ತಿದೆ. ಆದರೆ 1837 ರಲ್ಲಿ ಸ್ವಾತಂತ್ರ್ಯ ಹೋರಾಟವೇ ಆರಂಭಗೊಂಡಿರಲಿಲ್ಲ ಎಂದು ಪ್ರತಿಪಾದಿಸಿದ ಅವರು, ನ್ಯಾಯಾಲಯದ ಆದೇಶ ಸ್ವಾಗತಾರ್ಹವೆಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರಘು ಮಾಚಯ್ಯ ಹಾಗೂ ಬಿ.ಎಂ.ಗಣಪತಿ ಉಪಸ್ಥಿತರಿದ್ದರು.

error: Content is protected !!