ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಕಾರ್ಯಕ್ರಮ : ‘ಜಿಲ್ಲಾ ಪ್ರಗತಿ ನಿರ್ವಹಣಾ ಪದ್ಧತಿ’ಯಲ್ಲಿ ಅಪ್‍ಲೋಡ್ ಮಾಡಲು ಜಿಲ್ಲಾಧಿಕಾರಿ ಸೂಚನೆ

April 17, 2021

ಮಡಿಕೇರಿ ಏ.17 : ಸರ್ಕಾರದ ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಕಾರ್ಯಕ್ರಮಗಳ ಪ್ರಸಕ್ತ(2021-22) ಸಾಲಿನ ಜಿಲ್ಲಾ ಪ್ರಗತಿ ವಿವರವನ್ನು ‘ಜಿಲ್ಲಾ ಪ್ರಗತಿ ನಿರ್ವಹಣಾ ಪದ್ಧತಿಯಲ್ಲಿ (ಡಿಸ್ಟ್ರಿಕ್ ಪ್ರೋಗ್ರೆಸ್ ಮಾನಿಟರಿಂಗ್ ಸಿಸ್ಟಮ್‍ನಲ್ಲಿ) ಅಪ್‍ಲೋಡ್ ಮಾಡುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಪ್ರತಿ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದ ಅಭಿವೃದ್ಧಿಗೆ ಇಂತಿಷ್ಟು ಹಣವನ್ನು ಮೀಸಲಿಟ್ಟಿದ್ದು, ಈ ಕಾರ್ಯಕ್ರಮಗಳ ಪ್ರಗತಿ ಸಂಬಂಧ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬ ಬಗ್ಗೆ ಮಾಹಿತಿ ದೊರೆಯುವಂತಾಗಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಇದನ್ನು ಕಡ್ಡಾಯವಾಗಿ ಅಪ್‍ಲೋಡ್ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಹಾಗೆಯೇ ಕಳೆದ 2020-21 ನೇ ಸಾಲಿನ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ವಿವರವನ್ನು ಸಹ ಅಪ್‍ಲೋಡ್ ಮಾಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾರ್ಯಕ್ರಮ ಅನುಷ್ಠಾನ ಸಂಬಂಧ ಫಲಾನುಭವಿಗಳು ಸಿಗದಿದ್ದಲ್ಲಿ ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಇಲಾಖಾ ಅಧಿಕಾರಿ ಅವರ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ ಅವರು ಮಾತನಾಡಿ ಕರ್ನಾಟಕ ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಉಪಹಂಚಿಕೆ ಅಧಿನಿಯಮ 2013 ಮತ್ತು ನಿಯಮಗಳು 2017 ರ ಅನ್ವಯ ಜಿಲ್ಲಾ ಪ್ರಗತಿ ನಿರ್ವಹಣಾ ಸಿಸ್ಟಮ್‍ನಲ್ಲಿ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಕಾರ್ಯಕ್ರಮಗಳನ್ನು ಅಪ್‍ಲೋಡ್ ಮಾಡಬೇಕಿದೆ ಎಂದರು.
ವಿವಿಧ ಇಲಾಖೆಗಳು ಕಾಲ ಕಾಲಕ್ಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು ಎಂದು ಸಿಇಒ ಅವರು ಹೇಳಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು ಮಾಹಿತಿ ನೀಡಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾರ್ಯಕ್ರಮಗಳನ್ನು ಜಿಲ್ಲಾ ಪ್ರಗತಿ ನಿರ್ವಹಣಾ ಸಿಸ್ಟಮ್‍ನಲ್ಲಿ ಅಪ್‍ಲೋಡ್ ಮಾಡಲು ಎಲ್ಲಾ ಇಲಾಖೆಗಳಿಗೂ ಮಾಹಿತಿ ಕಳುಹಿಸಲಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದು ಅವರು ಹೇಳಿದರು.
ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿವೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಪರಿಶಿಷ್ಟರಲ್ಲಿನ ಎಲ್ಲರಿಗೂ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಪ್ರತೀ ಫಲಾನುಭವಿಗಳ ಹೆಸರು, ವಿಳಾಸ, ಫಲಾನುಭವಿಗಳ ಸಂಖ್ಯೆ ಮತ್ತಿತರ ಮಾಹಿತಿಯನ್ನು ದಾಖಲಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅವರು ಸಭೆಯ ಗಮನಕ್ಕೆ ತಂದರು.

ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚು ವಾಸಿಸುವ ಕಡೆಗಳಲ್ಲಿ ಎಂಜಿನಿಯರ್ ಇಲಾಖೆಗಳಿಂದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಡಿಡಿಪಿಐ ಮಚ್ಚಾಡೋ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ಅಂಬೇಡ್ಕರ್ ಅಭಿವದ್ಧಿ ನಿಗಮದ ಚಂದ್ರಶೇಖರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ಇತರರು ತಮ್ಮ ಇಲಾಖೆಯ ಕಾರ್ಯಕ್ರಮ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

error: Content is protected !!