ಕುಶಾಲನಗರದಲ್ಲಿ ಸಾರಿಗೆ ನೌಕರರ ಪರ ಜನಾಂದೋಲನ ವೇದಿಕೆ ಪ್ರತಿಭಟನೆ

April 17, 2021

ಮಡಿಕೇರಿ ಏ.17 : ಸಾರಿಗೆ ನಿಗಮದ ನೌಕರರನ್ನು ರಾಜ್ಯ ಸರಕಾರ ನಿಷ್ಕøಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿ ಕೊಡಗು ಜನಾಂದೋಲನ ವೇದಿಕೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂಭಾಗ ಜನಾಂದೋಲನ ವೇದಿಕೆ ಪ್ರಮುಖರಾದ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತಲ್ಲದೆ, 6ನೇ ವೇತನ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, 6ನೇ ವೇತನ ಆಯೋಗ ಶಿಫಾರಸಿನಂತೆ ಸಾರಿಗೆ ನಿಗಮ ನೌಕರರ ವೇತನ ಏರಿಕೆ ಮಾಡುವಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತಿಂಗಳ ಮೊದಲೇ ನೋಟಿಸ್ ನೀಡಿ ಪ್ರತಿಭಟನೆಯಲ್ಲಿ ತೊಡಗಿರುವ ಸಾರಿಗೆ ನೌಕರರನ್ನು ಸರಕಾರ ಭಯೋತ್ಪಾದಕರಂತೆ ಕಾಣುತ್ತಿದೆ. ಅವರ ಕುಟುಂಬವನ್ನು ಬೀದಿಗೆ ತಳ್ಳುತ್ತಿದೆ. ಕನಿಷ್ಟ ವೇತನ ಏರಿಕೆಗೆ ಮೀನಾಮೇಷ ಎಣಿಸುತ್ತಾ ನಿರ್ಲಕ್ಷ ವಹಿಸುತ್ತಿದೆ. ಈ ಮೂಲಕ ರಾಜ್ಯ ಸರಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿ ನೌಕರರ ವಜಾ, ವರ್ಗಾವಣೆ, ಅವರ ಮೇಲಿನ ಮೊಕದ್ದಮೆಗಳನ್ನು ಕೈಬಿಡುವಂತೆ ಕೋರಿ ಕಂದಾಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಶಿರಂಗಾಲ ಗ್ರಾಮದ ಸಾರಿಗೆ ನೌಕರರ ಕುಟುಂಬಸ್ಥರಾದ ಉಮಾಮಣಿ, ಸುಮಾ, ಶೃತಿ, ವನಜಾಕ್ಷಿ, ಲೇಖನ ಧಮೇಂದ್ರ, ಶಾಂತಮ್ಮ, ಪ್ರಿಯಾ, ಜನಾಂದೋಲನ ವೇದಿಕೆ ಪ್ರಮುಖರಾದ ವಿ.ಎಸ್.ಆನಂದಕುಮಾರ್, ಎಸ್.ಎಸ್.ಚಂದ್ರಶೇಖರ್, ಸಿ.ಎನ್.ಲೋಕೇಶ್, ಎಸ್.ಬಿ.ಶ್ರೀಕಾಂತ್, ಎಚ್.ಎಸ್.ಮಂಜುನಾಥ್, ಎಸ್.ಎಸ್.ರಮೇಶ್, ಎಸ್.ಸಿ.ರುದ್ರಪ್ಪ, ಎಸ್.ಯು.ವೀರಭದ್ರಪ್ಪ, ಅಬ್ದುಲ್ ರಜಾಕ್, ನವೀನ್ ಮತ್ತಿತರರು ಇದ್ದರು.

error: Content is protected !!