ಸೂರ್ಯಕಾಂತಿ ಎಣ್ಣೆಯ ಪ್ರಯೋಜನಗಳು

April 27, 2021

ತಲೆ ಬಾಚುವಾಗ ಪ್ರತಿದಿನ ಕೆಲವು ಕೂದಲು ಎಳೆಗಳನ್ನು ಕಳೆದುಕೊಳ್ಳುವುದು ಬಹಳ ಸಾಮಾನ್ಯವಾಗಿದೆ. ಒಂದು ವೇಳೆ ಕೂದಲು ನಿಮ್ಮ ನೆತ್ತಿಗಿಂತ ಹೆಚ್ಚಾಗಿ ನಿಮ್ಮ ಕೈ, ಭುಜಗಳು ಮತ್ತು ಬಟ್ಟೆಗಳ ಮೇಲೆ ಕಂಡುಬಂದರೆ ಈಗ ನೀವು ಕೂದಲಿನ ಮೇಲೆ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ ಎಂದರ್ಥ. ಇದಕ್ಕಾಗಿ ನೀವು ಸೂರ್ಯಕಾಂತಿ ಎಣ್ಣೆಯ ಸಹಾಯವನ್ನು ತೆಗೆದುಕೊಳ್ಳಬಹುದು.

ಕೂದಲು ಉದುರಲು ಹಲವು ಕಾರಣಗಳಿವೆ. ಇದು ಅನುವಂಶಿಕ ಕಾರಣವಾಗಿರಬಹುದು ಅಥವಾ ವಯಸ್ಸಾದ ಚಿಹ್ನೆಯಾಗಿರಬಹುದು. ಕೆಲವೊಮ್ಮೆ ಭಾರಿ ರಾಸಾಯನಿಕ ಚಿಕಿತ್ಸೆಗಳಾಗಿರಬಹುದು. ಹೆಚ್ಚು ಕಡಿಮೆ 30 ಮತ್ತು 40 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರ ಕೂದಲು ತೆಳುವಾಗುವುದನ್ನು ಗಮನಿಸಬಹುದು. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ರೋಟೀನ್ ಕೊರತೆ ಮತ್ತು ಹಾರ್ಮೋನುಗಳ ಬದಲಾವಣೆಗಳು, ಪ್ರೌಢವಸ್ಥೆ ಮತ್ತು ಋತುಬಂಧವು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಹೆರಿಗೆಯ ವೇಳೆ ದೇಹದ ಮೇಲೆ ತೀವ್ರ ಒತ್ತಡ ಉಂಟಾಗಿರುತ್ತದೆ. ಇದು ಕೂಡ ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಹಾಗೆಯೇ ಕೀಮೋಥೆರಪಿಟಿಕ್ ಔಷಧಗಳು, ಖಿನ್ನತೆ ಶಮನಕಾರಿ, ಸಂಧಿವಾತ ಮತ್ತು ಅಧಿಕ ರಕ್ತದೊತ್ತಡದ ಔಷಧಗಳು ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಆಗಾಗ್ಗೆ ಹೇರ್ ಬ್ಲೀಚಿಂಗ್, ಪರ್ಮಿಂಗ್, ಕರ್ಲಿಂಗ್ ಮತ್ತು ಸ್ಟ್ರೈಟ್’ನಿಂಗ್ ಇತರ ಹಾನಿಕಾರಕ ಸ್ಟೈಲಿಂಗ್ ಟೆಕ್ನಿಕ್’ನಿಂದ ಸಹ ಕೂದಲು ಉದುರುತ್ತವೆ. ಅಷ್ಟೇ ಅಲ್ಲ, ಶಾಂಪೂವಿನಲ್ಲಿ ಬಳಸಿರುವ ಕಠಿಣ ರಾಸಾಯನಿಕಗಳು ಸಹ ನಿಮ್ಮ ಕೂದಲನ್ನು ಹಾನಿಗೊಳಿಸುತ್ತವೆ.

ಸೂರ್ಯಕಾಂತಿ ಎಣ್ಣೆಯನ್ನು ಸೂರ್ಯಕಾಂತಿ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದು ನಿಮ್ಮ ಕೂದಲಿಗೆ ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿರುವ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ನೆತ್ತಿ ಉರಿಯೂತದ ಚಿಹ್ನೆಗಳಾದ ರೆಡ್ ನೆಸ್, ಫ್ಲೇಕಿಂಗ್, ಕಿರಿಕಿರಿ ಮತ್ತು ಉಬ್ಬುಗಳಂತಹ ಚಿಕಿತ್ಸೆಗಳಿಗೆ ಸಹಾಯ ಮಾಡುತ್ತದೆ. ಇದು ಕೂದಲಿನ ತೇವಾಂಶವನ್ನು ಸಹ ಉಳಿಸಿಕೊಳ್ಳುತ್ತದೆ ಮತ್ತು ಶುಷ್ಕತೆ ಎದುರಿಸಲು ಸಹ ಇದು ನೈಸರ್ಗಿಕ ಪರಿಹಾರವಾಗಿದೆ.

ಅಷ್ಟೇ ಅಲ್ಲ, ಇದು ಕೂದಲು ಒಡೆಯುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ. ಇದು ಗಾಮಾ ಆಲ್ಫಾ-ಲಿನೋಲೆನಿಕ್ ಆಸಿಡ್ (ಜಿಎಲ್‍ಎ) ಅನ್ನು ಸಹ ಹೊಂದಿರುತ್ತದೆ, ಇದು ಕೂದಲು ಉದುರುವಿಕೆ ಮತ್ತು ಬೋಳು ತಲೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಸೂರ್ಯಕಾಂತಿ ಎಣ್ಣೆಯಲ್ಲಿ ಒಲೀಕ್ ಆಮ್ಲವಿದೆ.

ಇದು ಕೂದಲು ಒಡೆಯುವುದನ್ನು ನಿಲ್ಲಿಸುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಮೊದಲೇ ಹೇಳಿದ ಹಾಗೆ ಇದು ಅನೇಕ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ತಲೆಹೊಟ್ಟು ಕಡಿಮೆ ಮಾಡಲು ಮತ್ತು ನೆತ್ತಿಯಲ್ಲಿರುವ ತುರಿಕೆ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಚರ್ಮರೋಗ ತಜ್ಞರು ಸೂಚಿಸಿದ್ದಾರೆ.

ಮನೆಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ತಯಾರಿಸುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದು ಹೊರತೆಗೆಯುವ ಪ್ರಕ್ರಿಯೆಯು ಬಹಳ ಸರಳವಾಗಿದೆ.ಹೌದು, ನೀವಿದನ್ನು ಎಕ್ಸ್‌ಪೆಲ್ಲರ್ ಪ್ರೆಸ್ಸಿಂಗ್ ವಿಧಾನವನ್ನು ಬಳಸಿ ತೆಗೆಯಬಹುದು. ಈ ವಿಧಾನದಲ್ಲಿ ಪುಡಿಮಾಡಿದ ಸೂರ್ಯಕಾಂತಿ ಬೀಜಗಳನ್ನು ಮೆಶಿನ್’ನಲ್ಲಿ ಹಾಕಿ ನಂತರ ಬಟನ್ ಒತ್ತಿದರೆ ಸೂರ್ಯಕಾಂತಿ ಬೀಜಗಳಿಂದ ಶುದ್ಧವಾದ ತೈಲ ಆಚೆ ಬರುತ್ತದೆ.

ಮನೆಯಲ್ಲಿಯೇ ಸೂರ್ಯಕಾಂತಿ ಎಣ್ಣೆಯನ್ನು ತಯಾರಿಸಲು ಇನ್ನೊಂದು ವಿಧಾನವಿದೆ. ನಿಮ್ಮ ಬಳಿ ಸೂರ್ಯಕಾಂತಿ ಬೀಜ, ಹುರಿಯುವ ಪ್ಯಾನ್, ಜಾಲರಿ ಮತ್ತು ಶಾಖ-ನಿರೋಧಕ ಮತ್ತು ಫ್ರೀಜರ್-ಸೇಫ್ ಕಂಟೇನರ್ ಇದ್ದರೆ ಸಾಕು. ಮೊದಲಿಗೆ ಸೂರ್ಯಕಾಂತಿ ಎಣ್ಣೆಬೀಜಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ, ಅದು ಪುಡಿಯಾದ ಮೇಲೆ ಪ್ಯಾನ್ ಮೇಲೆ ಹಾಕಿ.

ಹುರಿದುಕೊಂಡ ಪುಡಿಯನ್ನು 20 ನಿಮಿಗಳ ಕಾಲ ಐದು ನಿಮಿಷಗಳಿಗೊಮ್ಮೆ ಕೈಯಾಡುತ್ತಾ ಹುರಿಯಿರಿ. ನಂತರ ಎಣ್ಣೆ ಆಚೆ ಬರುತ್ತದೆ. ಅದನ್ನು ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಜಾಲರಿ ಮೂಲಕ ಶಾಖ-ನಿರೋಧಕ ಅಥವಾ ಫ್ರೀಜರ್ ಸೇಫ್ ಕಂಟೇನರ್’ನಲ್ಲಿ ಹಾಕಿ. ಫ್ರಿಜ್’ ನಲ್ಲಿ ಸಂಗ್ರಹಿಸಿ.

ಕೂದಲು ಮತ್ತು ನೆತ್ತಿಯನ್ನು ತೇವಗೊಳಿಸಲು ನಿಮ್ಮ ನೆತ್ತಿಗೆ ಸೂರ್ಯಕಾಂತಿ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದನ್ನು ಹಚ್ಚಲು ಸರಿಯಾದ ಮಾರ್ಗವೆಂದರೆ ಎರಡು ಮೂರು ಟೇಬಲ್ ಸ್ಪೂನ್ ಸೂರ್ಯಕಾಂತಿ ಎಣ್ಣೆಯನ್ನು ಬೆಚ್ಚಗೆ ಮಾಡಿ. ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ. ಇದನ್ನು 45 ನಿಮಿಷಗಳ ಕಾಲ ಬಿಡಿ. ನಂತರ, ಎಂದಿನಂತೆ ನಿಮ್ಮ ಕೂದಲನ್ನು ತೊಳೆಯಿರಿ.

ನಂತರ ಒಂದು ಅಥವಾ ಎರಡು ಹನಿ ಸೂರ್ಯಕಾಂತಿ ಎಣ್ಣೆಯನ್ನು ಅಂಗೈಗೆ ಸುರಿಯಿರಿ. ನಿಮ್ಮ ಅಂಗೈಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ, ಈಗ ನಿಮ್ಮ ಅಂಗೈ ಮೂಲಕ ಕೂದಲಿನ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಇದನ್ನು ಬಳಸಲು ನಿರ್ದಿಷ್ಟ ಸಮಯವಿಲ್ಲ, ಆದರೆ ರಾತ್ರಿ ಅದನ್ನು ಬಳಸುವುದು ಉತ್ತಮ.

error: Content is protected !!