ಕೊಡಗಿನಲ್ಲಿ 1 ತಿಂಗಳ ಕಾಲ ರೆಸಾರ್ಟ್, ಹೋಂಸ್ಟೇ ಸೇರಿದಂತೆ ಪ್ರವಾಸೋದ್ಯಮವನ್ನು ಸಂಪೂರ್ಣ ಬಂದ್ ಮಾಡಿ

April 30, 2021

ಮಡಿಕೇರಿ ಏ.30 : ಕೊಡಗಿನಲ್ಲಿ 1 ತಿಂಗಳ ಕಾಲ ರೆಸಾರ್ಟ್, ಹೋಂಸ್ಟೇ ಸೇರಿದಂತೆ ಪ್ರವಾಸೋದ್ಯಮವನ್ನು ಸಂಪೂರ್ಣ ಬಂದ್ ಮಾಡಬೇಕೆಂದು ಅಖಿಲ ಕೊಡವ ಸಮಾಜ,  ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ಒತ್ತಾಯಿಸಿದೆ.
  ಜಿಲ್ಲೆಯಲ್ಲಿ ಮತ್ತೆ ಕೊರೋನ ಅಟ್ಟಹಾಸ ಮುಂದುವರಿದಿದ್ದು ಕೊವೀಡ್-19 ಸೋಂಕಿತರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದೆ. ಒಂದು ಸಮಯದಲ್ಲಿ ಕೊರೋನ ಮುಕ್ತವಾಗಿ ಹಸಿರು ವಲಯದಲ್ಲಿ ಗುರುತ್ತಿಸಿಕೊಂಡಿದ್ದ ಕೊಡಗು ಜಿಲ್ಲೆ ಇದೀಗ ಕೊರೋನ ಪಾಸಿಟಿವಿಟಿ ದರ ಶೇ.15ಕ್ಕಿಂತ ಅಧಿಕವಿರುವ ಟಾಪ್ ಟೆನ್ ಜಿಲ್ಲೆಗಳ ಪೈಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯ ಪರಿಸ್ಥಿತಿ ಹೀಗೆ ಮುಂದುವರಿದರೆ ಏನಾಗುತ್ತೆ ಎಂದು ಊಹಿಸಲು ಅಸಾಧ್ಯ ಎನ್ನಬಹುದು. ಕೂಡಲೇ ಜಿಲ್ಲೆಯ ಪ್ರವಾಸೋದ್ಯಮವನ್ನು ಸಂಪೂರ್ಣ ಒಂದು ತಿಂಗಳು ಬಂದ್ ಮಾಡಿ, ರೇಸಾರ್ಟ್, ಹೋಂಸ್ಟೇ ಸೇರಿದಂತೆ ವಸತಿ ಗೃಹಗಳನ್ನು ಸಂಪೂರ್ಣ ಒಂದು ತಿಂಗಳ ಕಾಲ ಮುಚ್ಚಬೇಕಿದೆ ಎಂದು ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ಆಗ್ರಹಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಈ ಮೂರು ಸಂಸ್ಥೆಗಳ ಅಧ್ಯಕ್ಷರುಗಳಾದ ಮಾತಂಡ ಮೊಣ್ಣಪ್ಪ, ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಿಲ್ಲಾಡಳಿತವನ್ನು ಪ್ರವಾಸೋದ್ಯಮವನ್ನು ಕನಿಷ್ಟ  ಒಂದು ತಿಂಗಳ ಕಾಲ ಬಂದ್ ಮಾಡಲು ಒತ್ತಾಯಿಸಿದ್ದು ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಸಹಕರಿಸಬೇಕಿದೆ ಎಂದಿದ್ದಾರೆ. 
 14 ದಿನಗಳ ಲಾಕ್ ಡೌನ್ ಅವಧಿ ಮುಗಿದ ನಂತರ ಕೂಡ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ  ಕೊಡಗಿಗೆ ಬರುವ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಕೊಡಗಿನಲ್ಲಿ ದೆಹಲಿಯ ಪರಿಸ್ಥಿತಿ ತಲೆದೂರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.
ದೇಶದಲ್ಲಿ ಸೋಂಕಿತರ ಪ್ರಮಾಣ ದಿನೇ ದಿನೆ ಅಧಿಕವಾಗುತ್ತಿದ್ದು. ಬರೋಬರಿ 150 ಜಿಲ್ಲೆಗಳು ಅಪಾಯದ ಸ್ಥಿತಿಯಲ್ಲಿದೆ, ಇದರಲ್ಲಿ ಕೊಡಗು ಕೂಡ ಒಂದು ಎನ್ನುವುದು ಯೋಚಿಸಬೇಕಾದ ವಿಷಯವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಕೊವೀಡ್-19 ಸೋಂಕಿತರ ಹಾಗೂ ಕೊವೀಡ್ ಸೋಂಕು ಅಧಿಕವಾಗುತ್ತಿರುವ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಬೆಂಗಳೂರಿನಂತಹ ಮಹಾನಗರಗಳ ಪರಿಸ್ಥಿತಿ ಅದೋಗತಿಯಾದರೆ, ಅತ್ಯಂತ ಪುಟ್ಟ ಜಿಲ್ಲೆಯಾದ ಕೊಡಗಿನ ಪರಿಸ್ಥಿತಿ ಇದೀಗ ದಿನದಿಂದ ದಿನಕ್ಕೆ ಹದಗೆಡುತ್ತಿದೆ.ರಾಜ್ಯದಲ್ಲಿಯೇ ಕೊರೋನ ಹರಡುತ್ತಿರುವ ಟಾಪ್ ಟೆನ್ ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನರಲ್ಲಿ ಆತಂಕ ಮನೆ ಮಾಡಿದೆ. ಅಂಕಿಅಂಶಗಳ ಪ್ರಕಾರ ಕೊರೋನ ಪಾಸಿಟಿವಿಟಿ ದರ ಶೇ.15 ಹೆಚ್ಚಿರುವ ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆ ಒಂದನೇ ಸ್ಥಾನವನ್ನು ಪಡೆದುಕೊಂಡಿರುವುದು ವಿಷಾದನೀಯ. ಸೇನೆಯಲ್ಲಿ, ಕ್ರೀಡೆಯಲ್ಲಿ ಯಾವುದಾದರಂದು ಸಾಧನೆಯಲ್ಲಿ ಮುಂದಿದ್ದ ಕೊಡಗು ಜಿಲ್ಲೆ ಇದೀಗ ಕೊರೋನ ಹರಡುವಿಕೆಯಲ್ಲಿ ಮುಂದಿದೆ ಎಂದರೆ ಇದಕ್ಕೆ ಪ್ರವಾಸೋದ್ಯಮ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಲ್ಲ. ಕೂಡಲೇ ಕನಿಷ್ಟವೆಂದರು ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಹೋಂಸ್ಟೇ ರೇಸಾರ್ಟ್ ಹಾಗೂ ಇತರ ವಸತಿ ಗೃಹಗಳನ್ನು ಬಂದ್ ಮಾಡಿ ಪ್ರವಾಸೋದ್ಯಮವನ್ನು ಒಂದು ತಿಂಗಳು ಸಂಪೂರ್ಣ ಬಂದ್ ಮಾಡುವ ಮೂಲಕ ಕೊರೋನ ಹರಡದಂತೆ ತಡೆಯಬೇಕಿದೆ. 
ಈಗಾಗಲೇ ನಿಶ್ಚಯವಾಗಿರುವ ಮದುವೆಗಳು ಅವರವರ ಸಂಸಾರ ಸೇರಿಕೊಂಡು ಮನೆಯಲ್ಲಿಯೇ ಸರಳವಾಗಿ ನಡೆಸಲಿ ಅದುಬಿಟ್ಟು ಹೋಂಸ್ಟೇ ರೇಸಾರ್ಟ್ಗಳಲ್ಲಿ ಅನುವು ಮಾಡಿ ಕೊಡುವುದು ಬೇಡ. ಹಾಗೇ ಜಿಲ್ಲೆಯ ಎಲ್ಲಾ ಗಡಿ ಭಾಗಗಳನ್ನು ಕೂಡಲೆ ಬಂದ್ ಮಾಡಿ ಜಿಲ್ಲೆಯವರನ್ನು ಹೊರತುಪಡಿಸಿ ಹೊರ ಜಿಲ್ಲೆ ಹೊರ ರಾಜ್ಯದವರಿಗೆ ಕೊವೀಡ್ ಸರ್ಟಿಫಿಕೇಟ್ ಕಡ್ಡಾಯ ಮಾಡುವ ಮೂಲಕ ಕೊವೀಡ್ ಸೋಂಕು ಹರಡದಂತೆ ತಡೆಯಬೇಕಿದೆ. ಇದೀಗ ಜಿಲ್ಲೆಯ ಗಡಿಗಳಲ್ಲಿ ಬೆಳಿಗ್ಗೆ 10ರ ಒಳಗೆ ಯಾವುದೇ ತಪಾಸಣೆ ಇಲ್ಲದೆ ವಾಹನಗಳನ್ನು ಜಿಲ್ಲೆಯೊಳಗೆ ಬಿಡುತ್ತಿದ್ದು, ಕೂಡಲೇ ಇದನ್ನು ತಡೆಹಿಡಿಯಬೇಕಿದೆ. ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೂ ಕೂಡ ಕೊವೀಡ್ ಟೆಸ್ಟ್ ಕಡ್ಡಾಯ ಎಂದು ಮಾಡಬೇಕಾಗಿದ್ದು ಇವರಿಂದ ಕೂಡ ಜಿಲ್ಲೆಯಲ್ಲಿ ಸೋಂಕು ಹರಡುವುದಿಲ್ಲ ಎನ್ನುವುದಕ್ಕೆ ಯಾವ ಸಾಕ್ಷಿ ಇದೆ.
 ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ವ್ಯಾಪಾರ ವ್ಯವಹಾರ ಕುಸಿತದ ಹಿನ್ನಲೆಯಲ್ಲಿ ಲಾಕ್ ಡೌನ್ ಸಮಯ ಮುಗಿದ ನಂತರ  ಹೋಂಸ್ಟೇ ರೇಸಾರ್ಟ್ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟರೆ ಮತ್ತೆ ಕೊರೋನ ಅಟ್ಟಹಾಸ ಮುಂದುವರಿಯಲಿದೆ. ಈ ಕಾರಣಕ್ಕಾಗಿ ಸಂಪೂರ್ಣ ಒಂದು ತಿಂಗಳು ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಿದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಯಾವ ಹೋಂಸ್ಟೇ ಅಥವಾ ರೇಸಾರ್ಟ್ ಮಾಲಿಕನಿಗೂ ಅಥವಾ ಇತರ ವಸತಿ ಗೃಹ ಮಾಲಿಕನಿಗೂ ಇಲ್ಲ. ಶೇಕಡ 99ರಷ್ಟು ಮಂದಿಗೆ ಎರಡು ತಿಂಗಳಾದರೂ ಆರ್ಥಿಕವಾಗಿ ತಡೆದುಕೊಳ್ಳುವ ತಾಕತ್ತು ಇವರಿಗಿದೆ.
 ಮತ್ತೆ ಪ್ರವಾಸಿಗರು ಜಿಲ್ಲೆಗೆ ಬಂದು ಎಲ್ಲಿ ಕೊರೋನವನ್ನು ಹೊತ್ತು ತರುತ್ತಾರೆ ಎಂಬ ಆತಂಕ ಹೋಂಸ್ಟೇ ರೆಸಾರ್ಟ್ ಮಾಲಿಕರಲ್ಲಿ ಇಲ್ಲದಿದ್ದರು, ಜನಸಾಮಾನ್ಯರಲ್ಲಿ ಮನೆಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ. ಇತರ ಜಿಲ್ಲೆಯಲ್ಲಿ ಅವಕಾಶವಿದೆ ಅಲ್ಲಿ ಹಾಗಿದೆ ಇಲ್ಲಿ ಹೀಗಿದೆ ಎನ್ನುವುದು ಮುಖ್ಯವಲ್ಲ, ಕೊಡಗಿನ ಬಗ್ಗೆ ಕೊಡಗಿನ ಜನತೆಯ ಬಗ್ಗೆ ಕಾಳಜಿ ಮುಖ್ಯ. ಒಂದಷ್ಟು ಸಮಯ ಗಡಿ ತಪಾಸಣೆಯ ಮುದುವರಿಸಿ. ಜಿಲ್ಲೆಯ ಮಂದಿ ಹೊರತುಪಡಿಸಿ ಹೊರ ಜಿಲ್ಲೆ, ಹೊರರಾಜ್ಯದ ಮಂದಿಯ ಬಗ್ಗೆ ನಿಗಾ ವಹಿಸಬೇಕಿದೆ. ಈಗಾಗಲೇ ಕೇಂದ್ರ ಸರಕಾರ ಕೊಡಗು ಸೇರಿದಂತೆ 150 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವ ಚಿಂತನೆ ನಡೆಸಿದ್ದು, ಇದು ಆಗದಿದ್ದರು ಕೂಡ ಕೊಡಗು ಜಿಲ್ಲೆಗೆ ಸೀಮಿತವಾಗಿ ವಿಶೇಷ ಲಾಕ್ ಡೌನ್’ಗೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಚಿಂತಿಸಬೇಕಿದೆ. ಈ ಹಿಂದೆ ಜಿಲ್ಲಾಧಿಕಾರಿ ಕೇರಳ ಗಡಿ ಬಂದ್ ವಿಷಯದಲ್ಲಿ ತೆಗೆದುಕೊಂಡ ಸ್ವಯಂ ನಿರ್ಧಾರದಂತೆ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ವಿಶೇಷ ಸಭೆ ನಡೆಸಿ ತಿರ್ಮಾನ ಕೈಗೊಳ್ಳಬೇಕಿದೆ. ಹಾಗೇ ನಮ್ಮ ಜನರು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಅದಷ್ಟು ಮನೆಯಲ್ಲಿಯೇ ಇರಲು ಪ್ರಯತ್ನಿಸಬೇಕಿದೆ ಎಂದು ಮೂರು ಸಂಸ್ಥೆಯ ಅಧ್ಯಕ್ಷರುಗಳಾದ ಮಾತಂಡ ಮೊಣ್ಣಪ್ಪ, ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಗ್ರಹಿಸಿದ್ದಾರೆ.

error: Content is protected !!