ಹಣಬಲ, ತೋಳ್ಬಲ ಇಲ್ಲದೆಯೇ ಗೆದ್ದಿದ್ದೇವೆ : ಜನರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇವೆ : ಎಸ್‌ಡಿಪಿಐ ಭರವಸೆ

April 30, 2021

ಮಡಿಕೇರಿ ಏ.30 : ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದ್ಧರಾಗಿ ನಡೆದುಕೊಂಡ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಗಳು ಹಣಬಲ ಮತ್ತು ತೋಳ್ಬಲ ಇಲ್ಲದೆಯೇ ಗೆಲುವು ಸಾಧಿಸಿದ್ದು, ಜನರ ನಿರೀಕ್ಷೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎರಡನೇ ಬಾರಿಗೆ ನಗರಸಭೆ ಪ್ರವೇಶಿಸಿರುವ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಭರವಸೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಬಾರಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎಸ್‌ಡಿಪಿಐ ಈ ಬಾರಿ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸುವಷ್ಟು ಬೆಳೆದು ನಿಂತಿದ್ದು, ಇದಕ್ಕೆ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರೇ ಕಾರಣವೆಂದು ತಿಳಿಸಿದ್ದಾರೆ.
ಪಕ್ಷದ ನಾಲ್ವರು ಸದಸ್ಯರು ಐದು ವರ್ಷಗಳ ಕಾಲ ವಾರ್ಡ್ಗಳ ಎಲ್ಲಾ ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಪರಿಣಾಮ ಮತ್ತು ನಗರಸಭೆಯಲ್ಲಿ ಭ್ರಷ್ಟಾಚಾರ ಹಾಗೂ ಹಗರಣಗಳ ವಿರುದ್ಧ ಹೋರಾಡಿದ ಕಾರಣಕ್ಕಾಗಿ ಜನರು ಮತ್ತೆ ಎಸ್‌ಡಿಪಿಐ ಅಭ್ಯರ್ಥಿಗಳಿಗೆ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಐದು ಸ್ಥಾನಗಳ ಮೂಲಕ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿರುವ ಮನ್ಸೂರ್, ನಮ್ಮ ವಾರ್ಡ್ಗಳ ಏಳಿಗೆ ಮಾತ್ರವಲ್ಲದೆ ಇಡೀ ಮಡಿಕೇರಿ ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ.

error: Content is protected !!