ಕೋವಿಡ್ ವಿಚಾರದಲ್ಲಿ ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳಬಾರದು : ಎಂಎಲ್‌ಸಿ ವೀಣಾಅಚ್ಚಯ್ಯ ಒತ್ತಾಯ

May 2, 2021

ಮಡಿಕೇರಿ ಮೇ 2 : ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಕೊಡಗು ಜಿಲ್ಲೆಯಲ್ಲೂ ಪರಿಸ್ಥಿತಿ ಕೈಮೀರುತ್ತಿದೆ. ಒಂದೇ ದಿನದಲ್ಲಿ 7- 8 ಸೋಂಕಿತರು ಸಾವನ್ನಪ್ಪುತ್ತಿದ್ದು, ಸರ್ಕಾರ ಕೈಚೆಲ್ಲಿ ಕುಳಿತಂತೆ ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಕೇವಲ 5 ರಿಂದ 6 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿದೆ, ಆದರೆ ಇಂದಿಗೂ 4042 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಸಾವಿನ ಸಂಖ್ಯೆ 120 ಕ್ಕೆ ಏರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಈ ಸಂದಿಗ್ಧ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ವ್ಯವಸ್ಥೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
::: ಉಸ್ತುವಾರಿಗೆ ಕಾಳಜಿ ಇಲ್ಲ :::
ಜಿಲ್ಲೆಯ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗುತೊರೆದು ಕೋವಿಡ್ ಸೋಂಕಿತರ ರಕ್ಷಣೆಗಾಗಿ ರಾತ್ರಿ, ಹಗಲೆನ್ನದೆ ಶ್ರಮಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಎಲ್ಲವನ್ನೂ ಅಧಿಕಾರಿಗಳ ಮೇಲೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೊಡಗಿನ ಉಸ್ತುವಾರಿ ಸಚಿವರು ಇಲ್ಲಿನ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿಯನ್ನು ತೋರುತ್ತಿಲ್ಲ. ಸರ್ಕಾರ ಸೂಚಿಸಿದಾಗ ಮಾತ್ರ ಜಿಲ್ಲೆಗೆ ಬಂದು ಸಭೆ ನಡೆಸಿದಂತೆ ಮಾಡಿ ಮರಳುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇದ್ದಂತ್ತಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಕೂಡ ಉಸ್ತುವಾರಿ ಸಚಿವರು ಬರುವಾಗ ಬಂದು ಹೋಗುತ್ತಾರೆಯೇ ಹೊರತು ಜಿಲ್ಲೆಯ ಮೇಲೆ ಹೆಚ್ಚಿನ ಆಸಕ್ತಿ ವಹಿಸಿ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವೀಣಾಅಚ್ಚಯ್ಯ ಆರೋಪಿಸಿದ್ದಾರೆ.
ತಕ್ಷಣ ಉಸ್ತುವಾರಿ ಸಚಿವರು ಹಾಗೂ ಸಂಸದರು ಜಿಲ್ಲೆಯ ಆಸ್ಪತ್ರೆಗಳಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು, ಕೋವಿಡ್ ಪರೀಕ್ಷೆಗೆ ಮತ್ತು ಲಸಿಕೆ ಪಡೆಯಲು ಬರುತ್ತಿರುವವರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಉಸ್ತುವಾರಿ ಸಚಿವರ ಸಭೆಯಲ್ಲಿ ಅಧಿಕಾರಿಗಳು ಸಚಿವರನ್ನು ತೃಪ್ತಿ ಪಡಿಸುವುದಕ್ಕಷ್ಟೇ ವರದಿ ನೀಡುತ್ತಿದ್ದಾರೆ. ಕಳೆದ ಸಭೆಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಅಲ್ಲಿ ಕೋವಿಡ್ ಕೇರ್ ಸೆಂಟರ್ ಇಲ್ಲವೆಂದು ತಿಳಿದು ಬಂದಿದೆ. ಉಸ್ತುವಾರಿ ಸಚಿವರು ಕೂಡ ಅಧಿಕಾರಿಗಳು ಹೇಳಿದ್ದೇ ವೇದವಾಕ್ಯವೆಂದು ಭಾವಿಸದೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿಶೇಷ ಸಭೆಯನ್ನು ನಡೆಸಬೇಕೆಂದು ಸಲಹೆ ನೀಡಿದ್ದಾರೆ.
::: ಸುಡು ಬಿಸಿಲಿನಲ್ಲಿ ರೋಗಿಗಳು :::
ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಪ್ರತಿದಿನ 500 ಕ್ಕೂ ಅಧಿಕ ಮಂದಿ ಕೋವಿಡ್ ಪರೀಕ್ಷೆಗಾಗಿ ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಸುಡು ಬಿಸಿಲಿನಲ್ಲಿ ನಿಲ್ಲುತ್ತಿರುವ ರೋಗಿಗಳಿಗೆ ನೆರಳು ಮತ್ತು ಕುಳಿತುಕೊಳ್ಳಲು ಕುರ್ಚಿಯ ವ್ಯವಸ್ಥೆಯನ್ನು ಮಾಡಿಲ್ಲ. ಅನೇಕರು ಬೆಳಗ್ಗೆ ಬಂದವರು ಸಂಜೆಯವರೆಗೆ ಕಾದು ಕುಳಿತುಕೊಳ್ಳುತ್ತಿರುವ ದೃಶ್ಯಗಳೂ ಕಂಡು ಬಂದಿದೆ. ಉಪಹಾರ ನೀಡಲಾಗುತ್ತದೆಯಾದರೂ ಮಧುಮೇಹ ಖಾಯಿಲೆ ಇರುವವರಿಗೆ ಒಗ್ಗುವಂತಹ ಆಹಾರ ಪದಾರ್ಥವನ್ನು ನೀಡಲಾಗುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ. ಆದ್ದರಿಂದ ಜಿಲ್ಲಾಡಳಿತ ಕೋವಿಡ್ ಪರೀಕ್ಷೆಗೆಂದು ಬರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶುದ್ಧ ಕುಡಿಯುವ ಬಿಸಿ ನೀರು, ನೆರಳು ಮತ್ತು ಕುರ್ಚಿಗಳ ವ್ಯವಸ್ಥೆಯನ್ನು ಮಾಡಬೇಕೆಂದು ವೀಣಾಅಚ್ಚಯ್ಯ ಆಗ್ರಹಿಸಿದ್ದಾರೆ.
::: 5 ಕಡೆ ಕೋವಿಡ್ ಆಸ್ಪತ್ರೆ :::
ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಕೋವಿಡ್ ಆಸ್ಪತ್ರೆಯಿದ್ದು, ಇಲ್ಲಿಗೆ ಜಿಲ್ಲೆಯ ವಿವಿಧ ಊರುಗಳಿಂದ ಸಾರ್ವಜನಿಕರಿಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕೋವಿಡ್ ಕರ್ಫ್ಯೂನಿಂದಾಗಿ ವಾಹನಗಳ ವ್ಯವಸ್ಥೆ ಇಲ್ಲದೆ ಮತ್ತಷ್ಟು ತೊಂದರೆ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಅರಿತುಕೊಂಡು ಜಿಲ್ಲೆಯ ಉಳಿದ ತಾಲ್ಲೂಕುಗಳಾದ ವಿರಾಜಪೇಟೆ, ಸೋಮವಾರಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯಲ್ಲೂ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಕೊಡಗಿನ ಆಸ್ಪತ್ರೆಗಳು ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದ್ದು, ಈಗ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರುಗಳಿಂದ ಸೇವೆಯನ್ನು ಪಡೆಯಲು ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೋವಿಡ್ ಕರ್ಫ್ಯೂ ಸಂದರ್ಭ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಅನಾರೋಗ್ಯಕ್ಕೆ ಒಳಗಾದವರು, ಗರ್ಭಿಣಿಯರು ಹಾಗೂ ಲಸಿಕೆ ಪಡೆದು ಮರಳುವವರು ಆಟೋರಿಕ್ಷಾ ವ್ಯವಸ್ಥೆ ಇಲ್ಲದೆ ಪರದಾಡುವ ದೃಶ್ಯಗಳು ಕಂಡು ಬಂದಿದೆ. ಪೊಲೀಸ್ ಇಲಾಖೆ ನಗರದಲ್ಲಿ ತುರ್ತು ಸಂಚಾರಕ್ಕೆ ಆಟೋ ರಿಕ್ಷಾಗಳಿಗೆ ಅವಕಾಶ ನೀಡಬೇಕೆಂದು ವೀಣಾಅಚ್ಚಯ್ಯ ಮನವಿ ಮಾಡಿದ್ದಾರೆ.
::: ಹೊರಗೆ ಬರಬೇಡಿ :::
ಕೊಡಗು ಜಿಲ್ಲೆಗೆ ಅನೇಕರು ಬೆಂಗಳೂರಿನಿಂದ ಬಂದಿದ್ದಾರೆ, ಯಾವುದೇ ರೋಗ ಲಕ್ಷಣಗಳು ಇಲ್ಲವೆಂದು ಭಾವಿಸಿ ಅಡ್ಡಾಡುತ್ತಿರುವ ಮಾಹಿತಿ ಲಭಿಸಿದೆ. ಹೊರ ಜಿಲ್ಲೆಯಿಂದ ಬಂದವರಿಂದಲೇ ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುತ್ತಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ. ಆದ್ದರಿಂದ ಬೆಂಗಳೂರು ಸೇರಿದಂತೆ ಇತರೆಡೆಯಿಂದ ಬಂದವರು ಮನೆಯಿಂದ ಹೊರ ಬಾರದೆ ಕನಿಷ್ಠ 2 ವಾರ ಮನೆಯಲ್ಲೇ ಉಳಿದು ಸೋಂಕು ವ್ಯಾಪಿಸುವುದನ್ನು ತಡೆಯಲು ಆಡಳಿತ ವ್ಯವಸ್ಥೆಗೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಹೊರ ಜಿಲ್ಲೆಯಿಂದ ಬಂದವರು ನಿರ್ಲಕ್ಷ್ಯ ವಹಿಸಿದರೆ ಮನೆಯಲ್ಲಿರುವವರಿಗೆ ಮಾತ್ರವಲ್ಲದೆ ಇಡೀ ಊರಿಗೆ ಸೋಂಕು ತಗಲಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!