ಮೇ 15ರ ವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತ : ಹೊಟೇಲ್ ಮತ್ತು ಹೋಂಸ್ಟೇ ಅಸೋಸಿಯೇಷನ್ ನಿರ್ಧಾರ

May 3, 2021

ಮಡಿಕೇರಿ ಮೇ 3 : ಕೊಡಗು ಜಿಲ್ಲೆಯ ಪ್ರವಾಸೋದ್ಯಮ ವಲಯವನ್ನು ಮೇ 15ರವರೆಗೆ ಸ್ಥಗಿತಗೊಳಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗೆ ಸಹಕಾರ ನೀಡಲು ಹೋಟೆಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನಿರ್ಧರಿಸಿದೆ.
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮತ್ತು ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಎರಡನೇ ಅಲೆ ಸಂದರ್ಭ ಜಿಲ್ಲೆಯಲ್ಲಿಯೂ ಪ್ರಕರಣಗಳು ಹೆಚ್ಚಾಗುತ್ತಿವೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಜನಸಂದಣಿಯನ್ನು ಇಂದಿನ ದಿನಗಳಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಇ ಸಾಮಾಜಿಕ ಹೊಣೆಗಾರಿಕೆಯಾಗಿ, ಕೊಡಗು ಜಿಲ್ಲೆಯ ಎಲ್ಲಾ ಹೋಟೆಲ್ ರೆಸಾರ್ಟ್ ಲಾಡ್ಜ್ ಹೋಂಸ್ಟೇಗಳನ್ನು 15 ರವರೆಗೆ ಮುಚ್ಚಲಾಗುತ್ತಿದೆ, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ವರ್ಷವೂ ಪ್ರವಾಸೋದ್ಯಮ ವಲಯವು ಕೊರೋನ ವ್ಯಾಪಿಸು ವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇಂತಹುದ್ದೇ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಸಹಕಾರ ನೀಡಿತ್ತು ಇದೀಗ ಮತ್ತೆ ಹೆಚ್ಚಳ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಕ್ರಮವಾಗಿ ಪ್ರವಾಸೋದ್ಯಮ ವಲಯವನ್ನು ಮುಂದಿನ 13 ದಿನಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮತ್ತು ಕೊರೊನ ಕಾರಣದಿಂದಾಗಿ ಪ್ರವಾಸೋದ್ಯಮ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ, ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆಯಾಗುತ್ತಿದೆ, ಸಂಸ್ಥೆಗಳ ನಿರ್ವಹಣೆ ಕೂಡ ಕಷ್ಟ ಆಗುತ್ತಿದೆ, ಹೀಗಿದ್ದರೂ ಕೊಡಗಿನಲ್ಲಿ ಕೊರೊನಾ ಸೋಂಕು ತಡೆಗಟ್ಟಿ ಕೊಡಗಿನ ಹಿಂದಿನ ವೈಭವವನ್ನು ಮರುಕಳಿಸುವ ಉದ್ದೇಶದಿಂದ ಆರ್ಥಿಕ ಸಮಸ್ಯೆಯನ್ನು ಸಹಿಸಿಕೊಂಡು ತಾರೀಖು 15ರವರೆಗೆ ಆತಿಥ್ಯ ಕ್ಷೇತ್ರವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

error: Content is protected !!