ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ !

May 3, 2021

ಮಡಿಕೇರಿ ಮೇ 3 : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ 10 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರತಕ್ಕದ್ದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮತ್ತಿತರ ಅಧಿಕಾರಿ/ ಸಿಬ್ಬಂದಿಗಳ ಕರ್ತವ್ಯದ ನಿಮಿತ್ತ ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ/ ನೌಕರರ ಸಂಚಾರಕ್ಕೆ ಅವಕಾಶ ಇದೆ. ಆದರೂ ಸಂಬಂಧಪಟ್ಟವರು ಆಯಾಯ ಕಚೇರಿಯಿಂದ ನೀಡಲ್ಪಟ್ಟ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಮತ್ತು ಪರಿಶೀಲನೆ ವೇಳೆ ಹಾಜರುಪಡಿಸಬೇಕು ಎಂದು ಎಂದು ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೆ ಅನಗತ್ಯ ಸಂಚರಿಸುವುದು / ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಎಂದರು.
ಈ ಆದೇಶದ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್ 2005ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

error: Content is protected !!