ಸೋಮವಾರಪೇಟೆಯ ವಿವಿಧೆಡೆ ಕೊಳೆಯುತ್ತಿದೆ ತರಕಾರಿ ಫಸಲು

May 3, 2021

ಸೋಮವಾರಪೇಟೆ ಮೇ 3 : ಕರೊನಾ ಕಾಟಕ್ಕೆ ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತರಕಾರಿ ಬೆಳೆಗಳನ್ನು ಮಾರಾಟ ಮಾಡುವುದಕ್ಕೆ ಸೌಲಭ್ಯಗಳಿಲ್ಲದೆ, ಕೃಷಿ ಭೂಮಿಯಲ್ಲೇ ಕೊಳೆಯಲು ಬಿಡುವಂತ ಪರಿಸ್ಥಿತಿ ಒದಗಿದೆ.
ಶಾಂತಳ್ಳಿ ಹೋಬಳಿಯ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ತರಕಾರಿಗಳನ್ನು ಬೆಳೆಯುತ್ತಿದ್ದು, ರೈತರು ಬೆಳೆದ ತರಕಾರಿ ಬೆಳೆಯನ್ನು ಸಂಗ್ರಹಿಸಿಡಲು ತಾಲೂಕಿನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಕಟಾವಿಗೆ ಬಂದ ತಕ್ಷಣ ಮಾರಬೇಕು. ಫಸಲು ಕೊಯ್ಲು ಮಾಡುವ ಸಂದರ್ಭದಲ್ಲೇ ಕರೊನಾ ಜನತಾ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಕೊಯ್ಲು ಮಾಡಿ ತಂದ ಬೀನ್ಸ್, ಹಾಲುಸಂದೆ, ಬದನೆಯನ್ನು ಕೇಳುವವರೆ ಇಲ್ಲದಂತಾಗಿದೆ. ವ್ಯಾಪಾರಸ್ಥರು ಕೂಡ ಅತೀ ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ಸಿಕ್ಕಷ್ಟು ಬೆಲೆಗೆ ಕೊಟ್ಟು ತೆರಳಬೇಕಾಗಿದೆ. ಆದರೆ, ಈಗ ಖರೀದಿದಾರರು ತರಕಾರಿ ಕೊಳ್ಳಲು ಬರುತ್ತಿಲ್ಲ.
ಸೋಮವಾರದ ಸಂತೆಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಮಾರಾಟ ಅಸಾಧ್ಯವಾಗಿದೆ. ಹೆಗ್ಗಡಮನೆ, ಬೀದಳ್ಳಿ, ನಾಡ್ಲಳ್ಳಿ, ಕುಮಾರಳ್ಳಿ, ಮಲ್ಲಳ್ಳಿ, ಚಾಚಳ್ಳಿ, ಕುಂದಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ನಗರಳ್ಳಿ, ಯಡೂರು, ತಾಕೇರಿ, ಬಸವನಕೊಪ್ಪ, ಕೋಟೆಯೂರು, ಗೌಡಳ್ಳಿ ಮತ್ತಿತರ ಗ್ರಾಮಗಳಲ್ಲಿ ತರಕಾರಿ ಬೆಳೆದಿದ್ದು, ರೈತರು ನಷ್ಟವನ್ನು ಅನುಭವಿಸಿದ್ದಾರೆ. ವಾರದಲ್ಲಿ ಎರಡು ದಿನ ರಸ್ತೆ ಬದಿಗಳಲ್ಲಿ ರೈತರಿಗೆ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ತಾಲೂಕು ಆಡಳಿತ ಅನುವು ಮಾಡಿಕೊಟ್ಟರೆ, ಕೃಷಿ ಭೂಮಿಯಲ್ಲಿ ಹಾಳಾಗುತ್ತಿರುವ ತರಕಾರಿಗಳನ್ನು ಮಾರಾಟ ಮಾಡಿಕೊಳ್ಳಬಹುದು ಎಂದು ರೈತರು ಒತ್ತಾಯಿಸಿದ್ದಾರೆ.
ಬಿಜೆಪಿ ರೈತಮೋರ್ಚಾ ಮನವಿ: ಗ್ರಾಮೀಣ ಭಾಗಗಳಲ್ಲಿ ರೈತರು ಕಷ್ಟ ಪಟ್ಟು ಬೆಳೆದ ತರಕಾರಿ ಬೆಳೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದು, ವಾರದಲ್ಲಿ ಎರಡು ದಿನಗಳ ತರಕಾರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತಮೋರ್ಚಾದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರರು ಹಾಗು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಅಧಿಕಾರಿಗಳು ತರಕಾರಿ ಮಾರಾಟ ಮಾಡಲು ಬಿಡುತ್ತಿಲ್ಲ. ಆದುದ್ದರಿಂದ ಪಟ್ಟಣದ ಹೈಟೆಕ್ ಮಾರುಕಟ್ಟೆ ಆವರಣದಲ್ಲಿ ಕೋವಿಡ್ ನಿಯಮಾನುಸಾರ ವಾರದಲ್ಲಿ ಎರಡು ದಿನಗಳ ಕಾಲ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ತಹಸೀಲ್ದಾರ್ ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರುಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ರೈತ ಮೋರ್ಚದ ಜಿಲ್ಲಾ ಪ್ರದಾನ ಕಾರ್ಯದರ್ಶಿ ದಿನೇಶ್ ಕುಂದಳ್ಳಿ, ಕಾರ್ಯದರ್ಶಿ ಶ್ರೀಕಾಂತ್, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಜಾ ಪೂಣಚ್ಚ, ರಾಜ್ಯ ಯುವ ಮೋರ್ಚದ ಕಾರ್ಯಕಾರಣಿ ಸದಸ್ಯ ಮಹೇಶ್ ತಿಮ್ಮಯ್ಯ ಇದ್ದರು.

error: Content is protected !!