ಸೋಮವಾರಪೇಟೆಯಲ್ಲಿ ಕೋವಿಡ್ ಅತಿರೇಕ : ಶಾಸಕರು ಈ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ

May 3, 2021

ಸೋಮವಾರಪೇಟೆ ಮೇ 3 : ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಂಬAಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಇಲಾಖೆ ಹಾಗೂ ಗ್ರಾ.ಪಂ. ಪಿಡಿಓಗಳು ಹೆಚ್ಚಿನ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಹೊರಭಾಗದಿAದ ಜಿಲ್ಲೆಗೆ ಆಗಮಿಸುವ ಮಂದಿಗೆ ಕಡ್ಡಾಯವಾಗಿ ಸೀಲ್ ಹಾಕಬೇಕು. ಅವರುಗಳು ಹೊರಗಡೆ ಓಡಾಡಿದರೆ ಕ್ವಾರಂಟೈನ್ ಸೆಂಟರ್‌ಗೆ ಸಾಗಿಸಬೇಕು. ಕಾರ್ಮಿಕರು ಬೆಳಿಗ್ಗೆ 8 ಕ್ಕೆ ತೆರಳಿ ಸಂಜೆ 5ರ ನಂತರವೇ ವಾಪಸ್ ಆಗಬೇಕು. ಮಧ್ಯದಲ್ಲಿ ಓಡಾಡಿದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿಭಾಗದ ಚೆಕ್‌ಪೋಸ್ಟ್ಗಳನ್ನು ಬಿಗಿಗೊಳಿಸಬೇಕು ಎಂದು ಶಾಸಕರು ತಿಳಿಸಿದರು.
ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಮಂದಿಗೆ ಚೆಕ್‌ಪೋಸ್ಟ್ನಲ್ಲಿಯೇ ಸೀಲ್ ಹಾಕಿ, ಅವರುಗಳ ವಿವರ ನೋಂದಾಯಿಸಿ ಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿ, ಸ್ಥಳೀಯವಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಈಗಾಗಲೇ ಕಾರ್ಯೋನ್ಮುಖವಾಗಿದೆ. ಹೊರ ಜಿಲ್ಲೆಯಿಂದ ಬಂದವರ ಬಗ್ಗೆ ನಿಗಾ ವಹಿಸಬೇಕು. ಇವರುಗಳಿಗೆ ಕಡ್ಡಾಯವಾಗಿ ಸೀಲ್ ಹಾಕಿ ಕ್ವಾರಂಟೈನ್ ಮಾಡಿಸುವ ಕೆಲಸ ಸಮಿತಿಯಿಂದ ಆಗಬೇಕು ಎಂದರು.
ಕೊರೊನಾ ರೋಗ ಲಕ್ಷಣಗಳಿದ್ದರೂ ಹಲವಷ್ಟು ಮಂದಿ ಸರ್ಕಾರಿ ಅಸ್ಪತ್ರೆಗಳಿಗೆ ತೆರಳದೇ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲ ಖಾಸಗಿ ಕ್ಲಿನಿಕ್‌ಗಳ ವೈದ್ಯರು ಇವರುಗಳ ಬಗ್ಗೆ ವರದಿ ನೀಡದೇ ಚಿಕಿತ್ಸೆ ಕೊಡುತ್ತಿದ್ದಾರೆ. ಅಂತಹವರು ಮತ್ತೆ ಗ್ರಾಮದಲ್ಲಿ ಓಡಾಡಿಕೊಂಡು ಹೆಚ್ಚಿನ ಮಂದಿಗೆ ಸೋಂಕು ಹರಡಿಸುತ್ತಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಮನುಕುಮಾರ್ ಸಭೆಯ ಗಮನ ಸೆಳೆದರು.
ಅಂತಹ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಖಾಸಗಿಯಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ. ರೋಗ ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇದನ್ನು ಮೀರುವ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.
ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರುಗಳು, ಬಿ.ಇ.ಓ., ಸೋಮವಾರಪೇಟೆ ಹಾಗೂ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿಗಳು, ಎಲ್ಲಾ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!