ವೈದ್ಯರ ಮೇಲೆಯೇ ಹಲ್ಲೆ : ತಿತಿಮತಿಯಲ್ಲಿ ಘಟನೆ

May 3, 2021

ಮಡಿಕೇರಿ ಮೇ 3 : ಕರ್ನಾಟಕ ರಾಜ್ಯದೆಲ್ಲಡೆ ಕೋವಿಡ್ ಸೋಂಕು ವ್ಯಾಪಿಸುತ್ತಿರುವಂತೆಯೇ ಕೊಡಗು ಜಿಲ್ಲೆಯಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಕಂಡು ಬಂದಿದೆ. ಪರಿಸ್ಥಿತಿ ಹೀಗಿದ್ದರೂ ಇರುವಷ್ಟು ಸಿಬ್ಬಂದಿಗಳು ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆದರೆ ಇಂದು ತಿತಿಮತಿಯಲ್ಲಿ ಮೂವರು ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ವೀರಾಜಪೇಟೆ ತಾಲ್ಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿವೇಕಾನಂದ ಪ್ರತಿಷ್ಠಾನದ ವೈದ್ಯ ಡಾ.ಜಿ.ಹೊಸಮನಿ (70) ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ ಎಂದು ಆರೋಪಿಸಲಾಗಿದೆ.
::: ಘಟನೆ ವಿವರ :::
ತಿತಿಮತಿ ಗ್ರಾಮದ ಫಿರೋಜ್ ಎಂಬುವವರ ಪತ್ನಿ ಮಧ್ಯಾಹ್ನ 2:30 ರ ಸುಮಾರಿಗೆ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಸೈಯದ್ ಹಾಗೂ ಆತನ ಸ್ನೇಹಿತರು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅರ್ಧ ಗಂಟೆ ಕಳೆದರೂ ವೈದ್ಯರು ಬರಲಿಲ್ಲ. ಮಹಿಳೆಯನ್ನು ಯಾರು ಸರಿಯಾಗಿ ಗಮನಿಸುತ್ತಿಲ್ಲೆಂದು ಅಸಮಾಧಾನಗೊಂಡ ಯುವಕರು ಸ್ಥಳಕ್ಕೆ ಬಂದ ನಂತರ ವೈದ್ಯರು ಹಾಗೂ ಸೈಯದ್ ಫಿರೋಜ್ ಸಮೀರ್ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆಗೆ ಮುಂದಾಗಿದ್ದಾರೆ.
ಇದರಿಂದ ಗಾಯಗೊಂಡ ವೈದ್ಯ ಡಾ.ಜಿ.ಹೊಸಮನಿ(70) ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲ್ಲೆ ನಡೆಸಿದ ಮರಪಾಲದ ಫಿರೋಜ್, ಸಮೀರ್, ಎಡತೊರೆ ಸೈಯದ್‌ಆಲವಿ ಎಂಬುವವರನ್ನು ಗೋಣಿಕೋಪ್ಪ ಪೋಲೀಸರು ಬಂಧಿಸಿ ಪ್ರಕರಣ ದಾಖಸಿಕೊಂಡಿದ್ದಾರೆ.

error: Content is protected !!