ತನ್ನ ವೃತ್ತಿಯಾಯಿತು, ತಾನಾಯಿತು : ಇವರ ಬಗ್ಗೆ ಒಂದಿಷ್ಟು …

May 4, 2021

ಮಡಿಕೇರಿಯಲ್ಲಿ ಅನೇಕ ವರ್ಷಗಳಿಂದ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸೂರ್ಯಕುಮಾರ್ ಅವರ ಹೆಸರು ಕೇಳದವರಿಲ್ಲ. ತನ್ನ ವೃತ್ತಿಯಾಯಿತು, ತಾನಾಯಿತು ಎಂದು ಕಾರ್ಯನಿರ್ವಹಿಸುತ್ತಿರುವ ಇವರ ಬಗ್ಗೆ ಒಂದಷ್ಟು ಬರೆಯಬೇಕೆಂಬ ಚಿಂತನೆ ಇತ್ತು. ಅವರು ಬರೆದ ಚೊಚ್ಚಲ ಪುಸ್ತಕವು ಅದಕ್ಕೆ ನಾಂದಿ ಹಾಡಿತು.
ಅವರ ಮೊದಲ ಕೃತಿ “ವೈದ್ಯ ಕಂಡ ವಿಸ್ಮಯ”. ಅವರ ವೈದ್ಯಕೀಯ ಬದುಕಿನ ಅನುಭವವನ್ನು ಕುರಿತು ಬರೆದ ಕೃತಿ. ಮೊದಲು ಓದಿ ನನ್ನ ಅಭಿಪ್ರಾಯವನ್ನು ತಿಳಿಸಲು ನನಗೆ ಪ್ರತಿಯೊಂದನ್ನು ನೀಡಿದರು. ಅದನ್ನು ಓದುತ್ತಾ ಹೋದಂತೆ ಅವರ ಬಗ್ಗೆ ವಿಸ್ಮಯ ಮೂಡತೊಡಗಿತು. ಇಷ್ಟೊಂದು ದೈತ್ಯ ಪ್ರತಿಭೆಯಾದ ಇವರು ಇಷ್ಟು ಸಾಧನೆ ಮಾಡಿದರೂ ಎಂತಹ ಸರಳತೆ, ಶಾಂತ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆನಿಸಿತು. ನಿಜವಾಗಿಯೂ ಇವರು ಎಲೆಮರೆಯ ಕಾಯಿ ಎನಿಸಿತು. ಏಕೆಂದರೆ 1986ರಿಂದ ಇವರೊಡನೆ ಆತ್ಮೀಯವಾದ ಸಂಬಂಧವಿದೆ. ಆದರೂ ಅವರೆಂದೂ ಅವರ ಬಗ್ಗೆ ಹೊಗಳಿಕೊಂಡದ್ದು ನಾನು ಕಂಡಿಲ್ಲ.
ಇವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 18 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ಆಗ ಜಿಲ್ಲಾ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ವೈದ್ಯರಿದ್ದರು. ಯಾರೂ ಇಲ್ಲಿಗೆ ಬರುತ್ತಿರಲಿಲ್ಲ. ಬಂದರೂ ಇರುತ್ತಿರಲಿಲ್ಲ. ಇವರು ಹೊರರೋಗಿಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ರೋಗಿಗಳು ಅಲ್ಲಿಗೆ ಮುಗಿಬೀಳುತ್ತದ್ದರು. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಅವರು ಇಲ್ಲಿಂದ ಮೂರು ಸಾರಿ ವರ್ಗಾವಣೆಯಾದರೂ ಅದನ್ನು ಜನರೇ ಹೋಗಿ ರದ್ದುಗೊಳಿಸಿಕೊಂಡು ಬರುತ್ತಿದ್ದರು. ಅಷ್ಟೊಂದು ಜನಪ್ರಿಯರಾಗಿದ್ದರು. ಅವರ ಇನ್ನೊಂದು ವಿಶೇಷವೇನೆಂದರೆ ಹೊರ ರೋಗಿಗಳ ವಿಭಾಗದಲ್ಲಿ ಸರತಿ ಸಾಲಿನಲ್ಲೇ ರೋಗಿಗಳನ್ನು ಪರೀಕ್ಷಿಸುತ್ತಿದ್ದರು. ಯಾರೇ ಬರಲಿ ಅವರನ್ನು ಸರತಿಯಲ್ಲೇ ನೋಡುತ್ತಿದ್ದರೇ ಹೊರತು, ತಾರತಮ್ಯ ಮಾಡುತ್ತಿರಲಿಲ್ಲ.
ಇವರು ಜನಪ್ರಿಯ ವೈದ್ಯರಾಗಿ ಕಾರ್ಯನಿರ್ವಹಿಸಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ಪ್ರತಿಭೆಯ ಇನ್ನೊಂದು ಮುಖ ಹೆಚ್ಚಿನವರಿಗೆ ತಿಳಿದಿಲ್ಲ. ಅದನ್ನು ಓದುಗರಿಗೆ ಪರಿಚಯಿಸುವ ಒಂದು ಪುಟ್ಟ ಹೆಜ್ಜೆ ಇದು. 1990ರ ದಶಕದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಬಿಟ್ಟರೆ ಇಡೀ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದಂತಹ ಏಕೈಕ ವಿಧಿ ವಿಜ್ಞಾನ ತಜ್ಞರು ಇವರು. ಪೊಲೀಸ್ ಇಲಾಖೆಗೆ, ನ್ಯಾಯಾಂಗಕ್ಕೆ ಕಗ್ಗಂಟಾಗಿದ್ದ ಅಸ್ವಾಭಾವಿಕ ಸಾವು, ಆತ್ಮಹತ್ಯೆ, ಕೊಲೆ ಇಂತಹವುಗಳ ತನಿಖೆಯಲ್ಲಿ ಸಹಕರಿಸಿ ಕಗ್ಗಂಟಿನ ಪ್ರಕರಣಗಳನ್ನು ಬೇಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ನಡೆದ ಗಂಗಾರಾಮ್ ಕಟ್ಟಡದ ಕುಸಿತ, ವೀನಸ್ ಸರ್ಕಸ್ ದುರಂತ, ಕಳ್ಳಭಟ್ಟಿ ದುರಂತಗಳ ಶವಗಳ ಸರಮಾಲೆಗಳನ್ನು ಸಹಾಯಕರೊಡನೆ ಶವ ಪರೀಕ್ಷೆ ನಡೆಸಿದ ಕೀರ್ತಿ ಇವರದು. ಏಕೆಂದರೆ ಒಂದೆಡೆ ಕೊಳೆತ ಶವ, ಇನ್ನಂದೆಡೆ ಅರೆಬೆಂದಶವ, ಮತ್ತೊಂದೆಡೆ ಕಳ್ಳಭಟ್ಟಿ(ರಾಸಾಯನಿಕ ಮಿಶ್ರಿತ) ವಾಸನೆಯ ಶವ, ಒಟ್ಟಿಗೆ ನೂರಾರು ಹೆಣಗಳು, ಇನ್ನೊಂದೆಡೆ ಸಾವಿರಾರು ಜನರ ಆಕ್ರಂದನ. ಇವುಗಳ ನಡುವೆ ಶವ ಪರೀಕ್ಷೆ ನಡೆಸಿದ ಇವರ ಸಾಧನೆ ನಿಜಕ್ಕೂ ಅಭಿನಂದನಾರ್ಹ.
ಇವರ ಜನನ 1950, ಸೋಮವಾರಪೇಟೆಯಲ್ಲಿ, ತಂದೆೆ ಬಾಲಕೃಷ್ಣ ಎರಡನೇ ಮಹಾಯುದ್ಧದಲ್ಲಿ ಭಾರತದ ವಾಯುಸೇನೆಯಲ್ಲಿದ್ದವರು. ನಂತರ ಕೊಡಗಿನ ಹಲವು ಕಡೆ ಅಧ್ಯಾಪಕರಾಗಿದ್ದವರು. ತಾಯಿ ನೀಲಮ್ಮ, ಕೊಡಗಿನ ಗೌಡ ಮಹಿಳೆಯರಲ್ಲಿ ಪ್ರಥಮ ಎಸ್.ಎಸ್.ಎಲ್.ಸಿ.ಪಾಸ್ ಮಾಡಿದ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾದವರು. ನಂತರ ಅವರು ಕೂಡ ಕೊಡಗಿನ ಹಲವೆಡೆ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿದ್ದವರು. ಪೋಷಕರು ಅಧ್ಯಾಪಕರಾಗಿ ಕೊಡಗಿನ ಎಲ್ಲಾ ಕಡೆ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಇವರ ಬಾಲ್ಯವು ಭಾಗಮಂಡಲ, ಸಂಪಾಜೆ, ಮಡಿಕೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನಡೆಯಿತು. ನಂತರ ಪಿಯುಸಿಗೆ ಮಡಿಕೇರಿ ಸರ್ಕಾರಿ ಕಾಲೇಜಿಗೆ ಸೇರಿದರು. ಎಂ.ಬಿ.ಬಿ.ಎಸ್.ಪದವಿಯನ್ನು ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಓದಿದರು. ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 1975ರಿಂದ ವೈದ್ಯಕೀಯ ಸೇವೆ ಆರಂಭಿಸಿದ ಇವರು 1979ರಲ್ಲಿ ಸರ್ಕಾರಿ ಹುದ್ದೆಗೆ ಸೇರಿದರು. ವಿರಾಜಪೇಟೆ, ಸಂಪಾಜೆ, ಬೆಂಗಳೂರು ನಂತರ 1986ರಿಂದ ಮಡಿಕೇರಿಯಲ್ಲಿ ಸುಮಾರು 18 ವರ್ಷ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ವಿಭಾಗದಲ್ಲಿ ಪರಿಣತರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊನೆಗೆ ಸ್ವಯಂ ನಿವೃತ್ತಿ ಹೊಂದುವ ಸಮಯದಲ್ಲಿ ಪ್ರಭಾರ ಜಿಲ್ಲಾ ಶಸ್ತçಚಿಕಿತ್ಸಕರಾಗಿ ಕೆಲವು ತಿಂಗಳು ಕಾರ್ಯನಿರ್ವಹಿಸಿದರು. ಕೊಡಗು ಜಿಲ್ಲಾ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷರೂ ಕೂಡ ಆಗಿದ್ದ ಇವರು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದರು. ಈ ಸಮಯದಲ್ಲಿ ಬಳಗ ಕೊಡಗಿನ ಮೂಲೆ ಮೂಲೆಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಕೊಡಗಿನಲ್ಲಿ ನಡೆದ ಪ್ರಥಮ ಕೊಡಗು ಉತ್ಸವದಲ್ಲಿ ಲೇಖಕರ ಬಳಗ ಜಿಲ್ಲಾಡಳಿತದೊಂದಿಗಿನ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿತು. ಅದಕ್ಕೆ ಇವರ ಕೊಡುಗೆ ಹೆಚ್ಚಿನದಾಗಿತ್ತು.
ಇವರು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ವಿಶೇಷ ಪ್ರಕರಣಗಳನ್ನು, ವಿಷಯಗಳನ್ನು ಕನ್ನಡದ ಕಥೆಗಳ ರೂಪದಲ್ಲಿ ಅನೇಕ ನಿಯತಕಾಲಿಕ ಮತ್ತು ವಾರಪತ್ರಿಕೆಗಳಿಗೆ ಬರೆಯುತ್ತಿದ್ದರು. ಮಡಿಕೇರಿ ಆಕಾಶವಾಣಿಯಲ್ಲಿ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಇವರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.
ಇವರು ತಮ್ಮ ಮೊದಲ ಕೃತಿಯಾದ “ವೈದ್ಯಕಂಡ ವಿಸ್ಮಯ’ದಲ್ಲಿ ತಮ್ಮ ಅನುಭವವನ್ನು ತಮ್ಮದೇ ಹಾಸ್ಯಮಿಶ್ರಿತ ಧಾಟಿಯಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಓದಗರ ಮುಂದಿಟ್ಟಿದ್ದಾರೆ. ಸರ್ಕಾರಿ ಜೀವನದಲ್ಲಿ ಎದುರಿಸುವ ಸವಾಲುಗಳು, ಕೆಲವು ಘಟನೆಗಳಲ್ಲಿ ಕೆಲವು ಪರಿಸ್ಥಿತಿಗಳಲ್ಲಿ ನಾವೆಷ್ಟು ಅಶಕ್ತರಾಗಿರುತ್ತೇವೆಂದು ಚಿತ್ರಿಸಿದ್ದಾರೆ. ಈ ಪುಸ್ತಕದಲ್ಲಿ ಅವರ ಪ್ರತಿಭೆಯ ಪರಿಚಯವಾಗುತ್ತದೆ. ನನ್ನ ಅಭಿಪ್ರಾಯದ ಪ್ರಕಾರ ಅವರ ಅನುಭವವನ್ನು ಇನ್ನಷ್ಟು ಭಟ್ಟಿ ಇಳಿಸಿ ತಾಂತ್ರಿಕ ಅಂಶಗಳಿಗೆ ಒತ್ತುಕೊಟ್ಟು ವೈಜ್ಞಾನಿಕ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಕೃತಿಯೊಂದನ್ನು ಸಮಾಜಕ್ಕೆ ನೀಡಬಹುದು. ಇದರಿಂದ ನ್ಯಾಯಾಂಗಕ್ಕೆ, ಪೊಲೀಸರಿಗೆ, ವೈದ್ಯಕೀಯ ಕ್ಷೇತ್ರಕ್ಕೆ, ಪ್ರಸಾರ ಮಾಧ್ಯಮಕ್ಕೆ ಒಂದೊಳ್ಳೆ ಕೃತಿ ಆಗಬಹುದು. ಈ ಪ್ರಯತ್ನ ಅವರು ಮಾಡಬೇಕು. ಏಕೆಂದರೆ ಇವರ ಕೃತಿಯನ್ನು ಓದಿದರೆ ಯಾವುದೇ ಅಸ್ವಾಭಾವಿಕ ಸಾವಿನ ಬಗ್ಗೆ ತಕ್ಷಣ ತೀರ್ಮಾನಕ್ಕೆ ಬರಬಾರದು ಎಂದು ತಿಳಿಯುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಜನಸಾಮಾನ್ಯರು ಅಸ್ವಾಭಾವಿಕ ಸಾವಿನ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾರೆ. ಇದು ನ್ಯಾಯಾಂಗದ ಮೇಲೆ ಪರಿಣಾಮ ಬೀರುತ್ತದೆ. ತನಿಖೆಗೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಇಂತಹ ಸವಿಸ್ತಾರವಾದ ಕೃತಿಗಳು ಹೊರಬಂದರೆ ಜನಸಾಮಾನ್ಯರು ಸತ್ಯವನ್ನು ಅರಿಯಲು ಸಾಧ್ಯವಾಗುತ್ತದೆ.
ಸರಳತೆ, ಶಿಸ್ತು, ಸಮಯಪ್ರಜ್ಞೆ ಕೂಡ ಇವರನ್ನು ನೋಡಿ ವೃತ್ತಿಪರರು ಕಲಿಯಬೇಕು. ಇವರು ಮಡಿಕೇರಿಯಲ್ಲಿ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಜನಸೇವೆ ಮಾಡುತ್ತಿದ್ದಾರೆ. ತಮ್ಮ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 8.45ಕ್ಕೆ ಹಾಗೂ ಸಂಜೆ 4.45ಕ್ಕೆ ಸರಿಯಾಗಿ ಹಾಜರಿರುತ್ತಾರೆ. ತಮ್ಮ ಕ್ಲಿನಿಕ್‌ನಲ್ಲಿ ಕಡಿಮೆ ಮೊತ್ತದ ಸೇವಾ ಶುಲ್ಕವನ್ನು ಪಡೆಯುವ ಇವರು ಅದರಲ್ಲೂ ಹೆಚ್ಚಿನವರಿಗೆ ಮತ್ತು ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ತಮ್ಮಲ್ಲಿರುವ ಔಷಧಿಯನ್ನು ಉಚಿತವಾಗಿ ನೀಡುವುದೇ ಅವರ ಸೇವಾ ಮನೋಭಾವಕ್ಕೆ ಉದಹರಣೆ. ಇಂದಿನ ಕಾಲದಲ್ಲಿ ವೈದ್ಯರಲ್ಲಿಗೆ ಹೋದರೆ ಒಂದಷ್ಟು ಪರೀಕ್ಷೆಗಳ ಚೀಟಿ, ಸ್ಕಾö್ಯನಿಂಗ್ ಚೀಟಿ (ಅದರ ಉದ್ದೇಶ ಪ್ರತ್ಯೇಕವಾಗಿ ಹೇಳಬೇಕಿಲ್ಲ) ಬರೆದು ಕೊಟ್ಟು ರೋಗಿಗಳನ್ನು ಹೈರಾಣಾಗಿಸುತ್ತಾರೆ. ಆದರೆ ಇದಕ್ಕೆ ಇವರು ಹೊರತಾಗಿದ್ದಾರೆ. ಇವರು ತಮ್ಮ ವೃತ್ತಿಯನ್ನು ಹಣ ಮಾಡುವುದಕ್ಕಾಗಿ ಬಳಸಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಇವರ ಸರಳ ಜೀವನ. ಈ ವಯಸ್ಸಿನಲ್ಲೂ ಮಕ್ಕಳಿಗೆ ತಮ್ಮ ವಿದ್ಯೆ ಪ್ರಯೋಜನವಾಗಲೆಂದು ಬೋಧಕರಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜು, ಸುಳ್ಯ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ತಮ್ಮ “ವೈದ್ಯ ಕಂಡ ವಿಸ್ಮಯ” ಪುಸ್ತಕದಲ್ಲಿ ಅಹಂಕಾರ ಇಳಿಯಿತು ಎಂಬ ಶಿರೋನಾಮೆಯಡಿಯಲ್ಲಿ ಬರುವ ಕಥೆಯೊಂದರಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡು ಕ್ಲಿಷ್ಟಕರವಾದ ಶವ ಪರೀಕ್ಷೆ ನಡೆಸುವಾಗ ತಮಗಾದ ಸವಾಲು, ಅನುಭವ, ಸವಾಲಾದ ಗುಂಡು, ಕಗ್ಗಂಟನ್ನು ಬಿಡಿಸಲು ಪಟ್ಟ ಪರಿಶ್ರಮ, ಕೊನೆಗೆ ಸುಲಭವಾಗಿ ಭೇದಿಸಿದ ಅವರು ಆ ಪ್ರಕರಣದಲ್ಲಿ ಆದ ಅನುಭವವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ. “ನಾನೇ ಬುದ್ದಿವಂತ, ನನಗೆಲ್ಲ ಸುಲಭ ಎಂದು ತಿಳಿದಿದ್ದೆ, ನನ್ನ ಅಹಂಕಾರ ಇಳಿದು ಹೋಗಿತ್ತು. ಯಾವುದೇ ವಿಷಯದಲ್ಲಿ ಕಲಿಯುವುದಕ್ಕೆ ಕೊನೆ ಇಲ್ಲ ಎಂದು ಅರ್ಥವಾಯಿತು ಅಥವಾ ದೃಢವಾಯಿತು” ಎಂದು ಬರೆದಿದ್ದಾರೆ. ಅದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ. ಮನುಷ್ಯ ಕಲಿತಷ್ಟು ಸಾಲದು, ನಾನು ಎಂಬ ಅಹಂ ಬೇಡ ಎಂಬುದನ್ನು ಸಮಾಜಕ್ಕೆ ಪರೋಕ್ಷವಾಗಿ ಸಂದೇಶ ಮುಟ್ಟಿಸಿದ್ದಾರೆ.
ಇವರು ಮಡಿಕೇರಿಯಲ್ಲಿ ತಮ್ಮ ಪತ್ನಿ ಶ್ರೀಮತಿ ಗೀತಾ ಇವರೊಂದಿಗೆ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಮೊದಲ ಮಗಳು ಶೃತಿ, ದಂತ ವೈದ್ಯೆ ಹಾಗೂ ಅಳಿಯ ಶ್ರೀ ಬಸವರಾಜು, ಭಾರತದ ಸೇನೆಯಲ್ಲಿ ಕರ್ನಲ್ ಆಗಿ ಹೆಲಿಕಾಪ್ಟರ್ ಪೈಲೆಟ್ ಆಗಿದ್ದಾರೆ. ಎರಡನೇ ಮಗಳು ಶ್ರಾವ್ಯ ಹಾಗೂ ಅಳಿಯ ಶ್ರೀ ಅಕ್ಷಯ, ಇಬ್ಬರು ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದಾರೆ. ಒಂದು ರೀತಿಯಲ್ಲಿ ತುಂಬಿದ ಕುಟುಂಬ ಹಾಗೂ ಸರಳ ಮತ್ತು ಸ್ನೇಹಪರ ಜೀವಿಗಳು ಎನ್ನಬಹುದು.
1975ರಿಂದ ಆರಂಭವಾದ ಇವರ ವೈದ್ಯಕೀಯ ಸೇವೆ ಸಾಕಷ್ಟು ಏರಿಳಿತಗಳನ್ನು ಕಂಡು ಮುನ್ನಡೆಯುತ್ತಿದೆ. ಇವರು ವಿಧಿವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆಮಿಷಗಳನ್ನು, ಪ್ರಭಾವಗಳನ್ನು, ಬೆದರಿಕೆಗಳನ್ನು ಕಂಡಿದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮದೇ ಆದ ದಾರಿಯಲ್ಲಿ ಸಾಗಿದ್ದಾರೆ. ಇವರ ಜೀವನದಲ್ಲಿ 4000ದಿಂದ 5000ದಷ್ಟು ಶವ ಪರೀಕ್ಷೆ ಉಸ್ತುವಾರಿಯನ್ನು ಮಾಡಿದ್ದಾರೆ. ಇದು ಅವರ ದೊಡ್ಡ ಸಾಧನೆ ಎನ್ನಬಹುದು. ಇವರ ಸೇವೆ ಕೊಡಗಿನ ಜನರಿಗೆ ಇನ್ನಷ್ಟು ವರ್ಷಗಳ ಕಾಲ ಸಿಗಲಿ ಎಂದು ಹಾರೈಸುತ್ತೇನೆ.

ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ, ಮಡಿಕೇರಿ.
(9448899554, 9448809553).

error: Content is protected !!