ಪತ್ರಕರ್ತ ಜಗದೀಶ್ ಬೆಳ್ಯಪ್ಪ ಕಂಡಂತೆ ಇವರು ….

May 4, 2021

*ಡಿಯರ್ ಡಾಕ್ಟರ್… ನಿಮಗೊಂದು ಸಲಾಂ*
………….ಡಾ : ಹುಂ.. ದಿನಕ್ಕ್ ಎಚ್ಚಕ್ಕ್ ಸಿಗರೇಟ್ ಬಲಿಪಿಯಾ? ಜಗ್ಗ : ಒರ್ ಮೂಂದ್ ನಾಲ್ ಸರ್..ಡಾ : ಇಂದೇಂಜಾ ಬುಟ್ಟ್​ರ್.. ಬಲಿಚದ್ ಮದಿಜಗ್ಗ : ಎನ್ನ ಮಾಡೋ ಸರ್.. ಕೆಲಸನೇ ಅಂತಾಂದ್​.. ಎಕ್ಕಲೂ ಟೆನ್ಸನ್ನೇ!ಡಾ : ಉಂಡಿತಾನನಕೆ ಬಲಿಕತೆಜಗ್ಗ : ನಿಂಗ ಎಂತ ಎಣ್ಣವೋ ಸರ್.. ಉಂಡಿತಾನನಕೆ ಬಲಿಪಕಾ ಕ್​ಟ್ಟೋ ಮಜಾ ಬೋರೆ ಟೈಮ್​ಲ್ ಕ್​ಟ್ಟುಲೆ ಸರ್!ಡಾ : ಸಿಗರೇಟ್ ಬಲಿ… ಗೊತ್ತಾಪ್ಪ ನೀಕ್! ಇಕ್ಕಲೇ ಬಿಪಿ ಬಾರ್ಡರ್​ಲ್ ಉಂಡ್. ಇಂದಲ್ಲ ನಾಳೆ ಸ್ಟ್ರೋಕ್ ಆಚೇಂಗಿ ಗೊತ್ತಾಪ್ಪ.ಜಗ್ಗ : ಬುಡಿ ಸರ್​… ಅನ್ನನ್ನೆಲ್ಲಾ ಆಪುಲೇ..ಡಾ : ಹುಂ.. ಅನ್ನನೆ ಆಪದ್ ಬಾಂಡಾದ್ಂದೇ ಸಿಗರೇಟ್ ಬುಡ್ ಎಣ್ಣಿಯೇ.. ಎಲ್ಲಿ ಆಬರೀಕ್ ತಿರ್​.. ಒರ್ ಇಂಜಕ್ಷನ್ ತಪ್ಪಿ. 15ವರ್ಷದ ಹಿಂದೆ ಜ್ವರ ಬಂದಾಗ ಮಡಿಕೇರಿಯ ವೈದ್ಯರೊಬ್ಬರ ಬಳಿ ತೆರಳಿದಾಗ ಈ ಮಾತುಕತೆ ನನ್ನ ಹಾಗೂ ಆ ವೈದ್ಯರ ನಡುವೆ ನಡೆದಿತ್ತು. ಆ ಕ್ಷಣದಲ್ಲಿ ತಮಾಷೆಯ ಮಾತು ಅನ್ನಿಸಿದ್ದರೂ ನಂತರದ ದಿನಗಳಲ್ಲಿ ಕೈಯಲ್ಲಿ ಸಿಗರೇಟ್ ಹಿಡಿದಾಗೆಲ್ಲ ಆ ಡಾಕ್ಟರ್​ ನೆನಪಾಗಿ ಅರ್ಧಕ್ಕೆ ಎಸೆಯುತ್ತಿದ್ದೆ. ಯಾವುದೇ ಕಾರಣಕ್ಕೂ ಡಾಕ್ಟರ್​ ಹೇಳಿದಾಗೆ ಆಗಬಾರದು ಅಂತಾ ಒಳಗೊಳಗೆ ಪ್ರಾರ್ಥಿಸುತ್ತಿದ್ದೆ. ಈಗಲೂ ಅದು ಮುಂದುವರೆದಿದೆ. ಇನ್ನೊಂದು ಪ್ರಸಂಗ ಹೇಳ್ತೀನಿ… ಇದು ಸುಮಾರು 30ವರ್ಷ ಹಿಂದಿನ ಘಟನೆ. ನಾನು ಆಗ ಮಡಿಕೇರಿಯಲ್ಲಿ SSLC ಓದುತ್ತಿದ್ದೆ. ನಮ್ ಅಜ್ಜ, ಅಂದ್ರೆ ತಾಯಿಯ ಅಪ್ಪ ಮನೆಗೆ ಬಂದಿದ್ರು. ರಾತ್ರಿ ಅಜ್ಜ ಒಂದೆರಡು ಪೆಗ್ ಹಾಕಿ ಊಟ ಮಾಡಿದ್ರು. ಇನ್ನೇನು ಮಲಗಬೇಕು ಅನ್ನೋವಾಗ ಅಜ್ಜ ನನ್ನ ಕರೆದ್ರು. ನಾನು ಹೇಳಿ ಕೇಳಿ ಅವರ ಪ್ರೀತಿಯ ಮೊಮ್ಮಗ. ಅಲ್ಪ ಸ್ವಲ್ಪ ತಿಳ್ಕೊಂಡಿದ್ದಾನೆ ಅಂತಾ ಎಲ್ಲದಕ್ಕೂ ನನ್ನೇ ಕೇಳುತಿದ್ರು. ನನಗೆ ಸ್ವಲ್ಪ ತಲೆ ನೋವು ಆಗ್ತಿದೆ. ಯಾವುದಾದ್ರೂ ಟಾಬ್ ಲೆಟ್ ಇದ್ರೆ ಕೊಡು. ತಿಂದು ಮಲ್ಗಿಬಿಡ್ತೀನಿ ಅಂದ್ರು ಅಜ್ಜ. ನನಗೋ ತಾತಾ ನನ್ನ ಕರೆದು ಕೇಳಿದ್ರಲ್ಲ! ನನ್ನ ಅಪ್ಪನನ್ನು ಕೇಳಿಲ್ಲ. ನಾನು ಇವರಿಗೆಲ್ಲರಿಗಿಂತ ಬುದ್ದಿವಂತ. ನಾನು ಟಾಬ್ ಲೆಟ್ ಕೊಟ್ಟು ತಾತನ ಮಲಗಿಸಬೇಕು. ಬೆಳಿಗ್ಗೆ ಷಹಬ್ಬಾಸ್ ಹೇಳಿಸಿಕೊಳ್ಳಬೇಕು ಅಂತಾ ಮನೆಲಿ ಇದ್ದ  ಮಾತ್ರೆ ಹುಡುಕಿದೆ. ಹೇಗೂ ಸಿಟಿಲಿ ಇರೋದಲ್ವೇ. ಅಲ್ಪ ಸ್ವಲ್ಪ ಮೆಡಿಸಿನ್ ಬಗ್ಗೆ ತಿಳ್ಕೊಂಡಿದ್ದೆ. ಜೊತೆಗೆ ಮೆಡಿಕಲ್ ಶಾಪ್ ಓನರ್​ ಮಕ್ಕಳು ನನ್ನ ಸಹಪಾಠಿಗಳಾಗಿದ್ದರಿಂದ ಜ್ವರಕ್ಕೆ, ಕೆಮ್ಮು, ಶೀತಕ್ಕೆ ಯಾವ ಟಾಬ್ ಲೆಟ್ ತಗೋಬೇಕು ಅನ್ನೋದು ಗೊತ್ತಿತ್ತು. ಜೊತೆಗೆ ಅಮ್ಮ, ಅಪ್ಪ, ತಮ್ಮ, ತಂಗಿಗೆ ಹುಷಾರು ತಪ್ಪಿದ್ರೆ ಅವರನ್ನು ಮನೇಲೇ ಬಿಟ್ಟು ನಾನೇ ಡಾಕ್ಟರ್ ಹತ್ರ ಹೋಗಿ ಮೆಡಿಸಿನ್ ತರ್ತಿದ್ದೆ. ಹಾಗಾಗಿ ಒಂದೆರಡು ಟಾಬ್ ಲೆಟ್ ಗಳು ಮನೇಲೇ ಇರುತ್ತಿದ್ದವು.  ಹುಡುಕುತ್ತಿದ್ದಂತೆ ಒಂದು ಮಾತ್ರೆ ಸಿಕ್ತು. ಅಜ್ಜನಿಗೆ ಕೊಟ್ಟೆ. ಅವರು ಅದನ್ನ ನುಂಗಿ ನೀರು ಕುಡಿದು ಮಲಗಿದ್ರು. ನಾವೆಲ್ಲರೂ ನಿದ್ದೆಗೆ ಜಾರಿದ್ದೇವೆ. ಮಧ್ಯರಾತ್ರಿ 12 ಗಂಟೆ ಇರ್ಬೇಕು. ಅಪ್ಪ ಬಂದು ಎಬ್ಬಿಸಿದ್ರು. ತಾತಾನಿಗೆ ನೀ ಎಂಥ ಮಾತ್ರೆ ಕೊಟ್ಟಿದ್ದೀಯಾ? ಅವರು ನೋಡು ಫುಲ್ ಬೆವರುತ್ತಿದ್ದಾರೆ. ಎದುರುಸಿರು ಬಿಡ್ತಿದ್ದಾರೆ. ಎಂತಾ ಕೆಲಸ ಮಾಡಿದೆ ನೀನು. ಬೇಗ ಡಾಕ್ಟರ್​ಗೆ ಫೋನ್ ಮಾಡು ಅಂದ್ರು. ಗಾಬರಿಯಿಂದ ಎದ್ದು ಬಿದ್ದು ಬಂದವನೇ ತಾತಾನ ಹತ್ರ ಬಂದೆ. ಅವರಿಂದಲೂ ಒಂದಷ್ಟು ಬೈಗುಳ ಸಿಕ್ತು. ಅಮ್ಮನೋ ಗುರಾಯಿಸಿ ನನ್ನ ಅಪ್ಪನ ಕೊಂದೆ ಬಿಟ್ಟಿಯಲ್ಲೋ… ಎಂಥ ಸಾವುದು ಮಾತ್ರೆ ಕೊಟ್ಟೆ ನೀನು ಅಂದ್ರು. ತಕ್ಷಣ ಟೈಮ್ ನೋಡಿದೆ. ರಾತ್ರಿ 12:15. ನನ್ನ ಪ್ರೀತಿಯ ಡಾಕ್ಟರ್ ಮಲಗಿರ್ತಾರೆ. ಹೇಗೆ ಫೋನ್ ಮಾಡೋದು ಅಂತಾ ಹಿಂಜರಿಕೆಯಿಂದ್ಲೇ ಅವರ ಲ್ಯಾಂಡ್ ಲೈನ್ ನಂಬರ್ ಒತ್ತಿದೆ. ಮೂರೇ ರಿಂಗ್​ಗೆ ಆ ಕಡೆಯಿಂದ ಹಲೋ ಎಂದ್ರು ಡಾಕ್ಟರ್​! ಸರ್ ನಾನ್ ಜಗ್ಗ ಅಂದೆ. ಆ ಡಾಕ್ಟರ್​ ನನ್ನನ್ನ ಜಗ್ಗ ಅಂತಲೇ ಕರೆಯೋದು. ಹಾಗಾಗಿ ತಕ್ಷಣ ಅವರಿಗೆ ಗೊತ್ತಾಯ್ತು. ಹಾಂ ಎಂತಾ ಜಗ್ಗ. ಇಷ್ಟೊತ್ತಿಗೆ ಪೋನ್. ಮಲಗಿಲ್ವಾ? ಅಂದ್ರು. ನಾನು.. ಸರ್ ಮಲಗಿದ್ದೆ. ಈಗ ಅಪ್ಪ ಏಳಿಸಿದ್ರು. ತಾತಾಂಗೆ ಹುಷಾರಿಲ್ಲ. ಮೈಯಲ್ಲ ಬೆವರು.. ಎದುರುಸಿರು ಬಿಡ್ತಿದ್ದಾರೆ.. ಹೋಗೇ ಬಿಡ್ತಾರೇನೊ ಅಂದೆ.  ಅಯ್ಯೋ… ಏನಾಯ್ತು? ಎಷ್ಟೊತ್ತಿಗೆ ಹುಷಾರಿಲ್ಲದಾಗಿದ್ದು ಅಂತಾ ಕೇಳಿದ್ರು.ನಾನು.. ನಡೆದ ಕಥೆ ಎಲ್ಲಾ ಹೇಳಿದೆ. ಕೊನೆಗೆ ಅಮ್ಮಂಗೆ ತಲೆ ನೋವು ಬಂದಾಗ ನೀವು ಕೊಟ್ಟ ಟಾಬ್ ಲೆಟ್ ಅನ್ನೇ ನಾನು ತಾತಂಗೆ ಕೊಟ್ಟಿದ್ದು ಸರ್ ಅಂದೆ. ಅದಕ್ಕೆ… ಆ ಕಡೆಯಿಂದ ಅವರು ಗದರುತ್ತಾ.. ತಲೆ ನೋವಿಗೆ ನಾನು ಕೊಟ್ಟ ಮಾತ್ರೆ ಸರಿಯಾಗಿಯೇ ಇದೆ. ಆದ್ರೆ ಕಳ್ಳು ಕುಡಿದ ಮೇಲೆ ಮಾತ್ರೆ ಕೊಡು ಅಂತಾ ಹೇಳಿದ್ನಾ? ಅಧಿಕ ಪ್ರಸಂಗಿ. ಬೇಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗು. ಅಲ್ಲಿ ನಾನು ಹೇಳಿರ್ತಿನಿ. ಬೆಳಿಗ್ಗೆ ಬಂದು ತಾತನ ನೋಡ್ತೀನಿ ಅಂತಾ ಹೇಳಿ ಫೋನ್ ಇಟ್ರು. ತಕ್ಷಣ ಆಟೋದಲ್ಲಿ ತಾತನ ಕರೆದುಕೊಂಡು ಆಸ್ಪತ್ರೆಗೆ ಹೋಗಿ ಅಡ್ಮಿಟ್ ಮಾಡಿದೆ. ನರ್ಸ್​ ಡಾಕ್ಟರ್​ ಹೇಳಿದ ಮೆಡಿಸಿನ್ ಕೊಟ್ರು. ಬೆಳಗ್ಗೆಗೆ ತಾತಾ ನಾರ್ಮಲ್ ಆದ್ರು. 8 ಗಂಟೆಗೆ ಡಾಕ್ಟರ್ ಬಂದ್ರು. ತಾತನ ನೋಡಿ.. ಅಮ್ಮಂಗೆ ಹಿ ಈಸ್ ಆಲ್ ರೈಟ್ ನೌ ಅಂದ್ರು. ಅಮ್ಮನ ನೋಡಿ ಎಲ್ಲಿ ಆ ಜಗ್ಗ ಅಂತಾ ಕೇಳಿದ್ರು. ನಾನೋ ಡಾಕ್ಟರ್ ಬರ್ತಾ ಇದ್ದಾಂಗೆ ಅವರ ಕೈಗೆ ಸಿಕ್ಕಿದ್ರೆ ಅಷ್ಟೆ ಅಂತಾ ಹೆದರಿ ಪಕ್ಕದ ಖಾಲಿ ಬೆಡ್​ನಲ್ಲಿ ಆಚೆ ತಿರುಗಿ ಮಲಗಿಬಿಟ್ಟೆ. ಅಮ್ಮ ನಗುತ್ತಾ ನನ್ನ ಕಡೆ ಕೈ ತೋರಿಸಿದ್ದಾರೆ. ಡಾಕ್ಟರ್ ಬಂದವರೇ ನನ್ನ ಕಿವಿ ಹಿಂಡಿ… ಕಳ್ಳು ಕುಡಿದ ಮೇಲೆ ಮಾತ್ರೆ ತಗೋಬಾರದು ಅಂತಾ ಗೊತ್ತಿಲ್ವಾ? ಮುಠ್ಠಾಳಾ.. ಅಂತಾ ಹೇಳಿದವ್ರೆ ನನ್ನ ಏಳಿಸಿ ಇನ್ನು ಹಾಗೆಲ್ಲ ಮಾಡ್ಬೇಡ. ಯಾವುದೇ ಕೆಲಸ ಮಾಡೋ ಮೊದ್ಲು ಸರಿಯಾಗಿ ತಿಳ್ಕೋಂಡು ನಂತ್ರ ಮುಂದುವರಿಯಬೇಕು ಅಂತಾ ಹೇಳಿ ಬೆನ್ನು ತಟ್ಟಿ ಹೋದ್ರು. ಅರೇ SSlC ಓದೋ ನನಗೆ ಆಗ್ಲೇ ಸರಕಾರಿ ವೈದ್ಯರು ಹೇಗೆ ಫ್ರೆಂಡ್ ಆಗ್ತಾರೆ ಅಂತಿರಾ? ಎಸ್.. ಅಷ್ಟು ದೊಡ್ಡ ಡಾಕ್ಟರ್​ ಇಷ್ಟು ಸಣ್ಣ ಹುಡುಗನ ಜೊತೆ ಸ್ನೇಹಿತನಂತೆ ಇರಲು ಕಾರಣ ಇದೆ. ನಾನು ಹುಟ್ಟಿದ್ದು ಅಜ್ಜನ ಮನೆಲಿ. ನಂತರ ಸಂಪಾಜೆಯಲ್ಲಿ ತಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ 3ನೇ ಕ್ಲಾಸ್​ವರೆಗೂ ಅಲ್ಲೇ ಇದ್ದೆ. ಈ ಡಾಕ್ಟರ್​ ಕೂಡ ಸಂಪಾಜೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ರು. ಡ್ಯಾಡಿಗೂ ವೈದ್ಯರಿಗೂ ಪರಿಚಯ. ಹಾಗಾಗಿ ನಮ್ಮ ಮನೇಲಿ ಯಾರಿಗೇ ಹುಷಾರಿಲ್ಲದಾದ್ರು ಆ ಡಾಕ್ಟರ್​ ಬಳಿಯೇ ಹೋಗುತ್ತಿದ್ದೆವು. ಮಗುವಿನಿಂದ ನನ್ನನ್ನು ಅವರು ನೋಡಿದ್ದಾರೆ. ನಂತರ ನನ್ನ ಮತ್ತು ಅವರ ಭೇಟಿಯಾಗಿದ್ದು ಮಡಿಕೇರಿಯಲ್ಲಿ. ಆಗ ನಾನು 7ನೇ ಕ್ಲಾಸು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಅವರು ಹೊರ ರೋಗಿಗಳ ವಿಭಾಗದಲ್ಲಿ ಇರುತಿದ್ರು. ಒಮ್ಮೆ ಹುಷಾರಿಲ್ಲದಿದ್ದಾಗ ಡ್ಯಾಡಿ ನನ್ನನ್ನು ಆ ಡಾಕ್ಟರ್ ಬಳಿ ಕರೆದುಕೊಂಡು ಹೋಗಿದ್ರು. ಹೀಗೆ ಎರಡು ಮೂರು ಬಾರಿ ಡ್ಯಾಡಿ ಜೊತೆ ಹೋಗಿದ್ದ ನನಗೆ ಆ ಡಾಕ್ಟರ್​ ಪರಿಚಯ ಚೆನ್ನಾಗಿಯೇ ಆಯಿತು. ಅವರು ಕೂಡ ಹೇ ಜಗ್ಗ! ಬಾ ಇಲ್ಲಿ ಅಂತಾ ಕರೆಯುತಿದ್ರು. ಈ ಸಲುಗೆಯಿಂದಾಗಿ ಮುಂದಿನ ದಿನಗಳಲ್ಲಿ ಮನೇಲಿ ಯಾರಿಗೇ ಹುಷಾರಿಲ್ಲದಾದ್ರು ನಾನು ಜಿಲ್ಲಾಸ್ಪತ್ರೆಯಲ್ಲಿ ಅವರ ಕೊಠಡಿ ಎದುರು ಹಾಜರಾಗಿ ಬಿಡುತ್ತಿದ್ದೆ. ಅವರು ಸಾಮಾನ್ಯವಾಗಿ ಬೆಳಗ್ಗೆ 9.15ಕ್ಕೆ ಕೊಠಡಿಗೆ ಬರುತಿದ್ರು. ಬಾಗಿಲಲ್ಲಿ ಕ್ಯೂ ನಿಂತುಕೊಳ್ಳಬೇಕು. ನರ್ಸ್​ ಒಬ್ಬೊಬ್ಬರನ್ನೇ ಕರೆಯುತ್ತಿದ್ದಂತೆ ಒಳಗೆ ಹೋಗಬೇಕು. ಒಂದೊಂದ ಸಲ ನಾನೇ ಮೊದಲನೆಯವ ಆಗುತ್ತಿದ್ದೆ. ಕೆಲವೊಮ್ಮೆ ನಾನು ಹೋಗೋ ಹೊತ್ತಿಗೆ ಕ್ಯೂ ಉದ್ದ ಆಗಿರುತ್ತಿತ್ತು. ಒಂದ್ಸಲ ನಾನು ಕ್ಯೂ ಬಿಟ್ಟು ನೇರವಾಗಿ ಒಳಗೆ ಹೋದೆ. ಗುಡ್ ಮಾರ್ನಿಂಗ್ ಸರ್ ಅಂದೆ. ಪಕ್ಕದ ಪೇಷಂಟ್ ಚೇರ್​ನಲ್ಲಿ ಕೂರಿಸಿಕೊಂಡ್ರು. ಯಾಕೆ ಕ್ಯೂ ಬಿಟ್ಟು ಬಂದೆ ಅಂತಾ ಹಿಗ್ಗಾಮುಗ್ಗಾ ಬೈದ್ರು. ಇನ್ನು ಮುಂದೆ ಹೀಗೆ ಮಾಡ್ಬೇಡ ಅಂತಾ ಹೇಳಿ ಮೆಡಿಸಿನ್ ಕೊಟ್ಟು ಕಳಿಸಿದ್ರು.  ನೆಕ್ಸ್ಟ್ ಟೈಮ್ ಮತ್ತೆ ಹೋದಾಗ ಫುಲ್ ಕ್ಯೂ. ಒಳಗೆ ಹೋದ್ರೆ ಬೈತಾರೆ. ಏನ್ ಮಾಡೋದು ಅಂತಾ ಯೋಚಿಸುತ್ತಿದ್ದವನು ಬಾಗಿಲಿನ ಮತ್ತೊಂದು ಕಡೆ ಹೋಗಿ ನಿಂತುಕೊಂಡೆ. ಅವರು ಪೇಷಂಟ್ ನೋಡಿ ತಲೆ ಎತ್ತುತ್ತಿದ್ದಂತೆ ಅಲ್ಲಿಂದಲೇ ಗುಡ್ ಮಾರ್ನಿಂಗ್ ಸರ್ ಅಂದೆ. ಗುರಾಯಿಸಿದ ಅವರು ಕ್ಯೂ ಇರೋದು ಈ ಕಡೆ ಅಲ್ಲ.. ಆ ಕಡೆ.. ಅಲ್ಲಿ ಹೋಗಿ ನಿಂತ್ಕೋ ಅಂತಾ ದಬಾಯಿಸಿದ್ರು. ಹ್ಯಾಪ್ ಮೋರೆ ಹಾಕೊಂಡು ಕ್ಯೂ ನಲ್ಲಿ ನಿಂತೆ. ನನ್ನ ಮುಂದೆ 10ಕ್ಕೂ ಹೆಚ್ಚು ಜನರು ಇದ್ರು. ಒಂದಿಬ್ರು ಒಳಗೆ ಹೋದ ಮೇಲೆ ನರ್ಸ್ ಬಂದು ಯಾರಿಲ್ಲಿ ಜಗ್ಗ ಅಂದ್ರು. ಕೈ ಎತ್ತಿದೆ. ಒಳಗೆ ಕರ್ಕೊಂಡು ಹೋದ್ರು. ಅವರ ಮುಂದೆ ಕೂತ್ಕೊಂಡೇ. ನೋಡು ಕ್ಯೂ ಇರುವಾಗ ನಿನ್ನ ಬಂದ ತಕ್ಷಣ ಒಳಗೆ ಬಿಡಕ್ಕೆ ಆಗಲ್ಲ. ನೀನು ಬೇರೆಯಲ್ಲ.. ಅವರು ಬೇರೆಯಲ್ಲ. ಯಾರೇ ಬಂದ್ರು ನಾನು ಬಿಡಲ್ಲ ಅಂದ್ರು. ಈಗ ಮತ್ತೆ ಕ್ಯೂ ತಪ್ಪಿಸಿ ಒಳಗೆ ಕರೆದ್ರಿ ಅಲ್ಲ ಅಂದೆ. ಸುಮ್ಮನಿರು ಜೋರಾಗಿ ಹೇಳ್ಬೇಡ.. ಏನ್ ಪ್ರಾಬ್ಲಂ ಆಗಿದೆ ಅಂತಾ ಹೇಳು ಅಂತಾ ಕಿವಿ ಹಿಂಡಿದ್ರು.  ಮತ್ತೊಂದು ದಿನ ಹೀಗೆ ಆಯಿತು. ಕ್ಯೂ ಇದ್ರೂ ಡಾಕ್ಟರ್​ ಒಳಗೆ ಕರೆದ್ರು. ಅವತ್ತು ಸ್ವಲ್ಪ ಸಿಟ್ಟಿನಲ್ಲಿದ್ರು. ಎಂಥಾ ಆಚಿರಾ? ಅಂತಾ ಗದರಿಕೊಂಡೇ ಕೇಳಿದ್ರು. ಶೀತ, ಕೆಮ್ಮು, ಊಟ ಮಾಡಕ್ಕೆ ಆಗ್ತಿಲ್ಲ ಅಂದೆ. ಎಲ್ಲಿ ಬಾಯಿ ಆ.. ಮಾಡಿ ನಾಲಿಗೆ ಹೊರಕ್ಕೆ ಹಾಕು ಅಂದ್ರು. ಹಾಗೇಯೇ ಮಾಡಿದೆ.. ಎಲ್ಲಿ ಏನೂ ಆಗಿಲ್ಲವಲ್ಲ. ಸರಿ ಇದೆಯಲ್ಲ ಅಂದ್ರು. ಸರ್.. ನಂಗೆ ಅಲ್ಲ.. ಅಮ್ಮಂಗೆ ಅಂದೆ. ಸಿಟ್ಟು ತಡಿಯಕ್ಕಾಗದೆ ಅಮ್ಮಂಗೆ ಹುಷಾರಿಲ್ಲ ಅಂದ್ರೆ ನೀನು ಬರ್ತಿಯಾ. ಅಮ್ಮ ಬರ್ಬೇಕಲ್ಲ ಅಂದ್ರು. ಅಮ್ಮಂಗೆ ಜೋರು ಹುಷಾರಿಲ್ಲ ಅಲ್ವಾ ಅದಕ್ಕೆ ಮಲಗಿದ್ದಾರೆ. ಅವರಿಗೆ ಬರಕ್ಕೆ ಆಗಲ್ಲ ಅಂತಾ ನಾನು ಬಂದೆ ಅಂದೆ. ಎರಡು ಕೈನ ತಲೆ ಮೇಲೆ ಇಟ್ಟು ನಾನು ಟೆಸ್ಟ್ ಮಾಡಿ ಮಾತ್ರೆ ಕೊಡ್ಬೇಕಲ್ವಾ? ಪೇಷಂಟ್ ಇಲ್ಲಂದ್ರೆ ನಾನು ಹೇಗೆ ಕೊಡೋದು ಅಂದ್ರು. ಹೇ ಪರ್ವಾಗಿಲ್ಲ ಸರ್… ಅವತ್ತು ಕೊಟ್ಟ ಮಾತ್ರೇನೆ ಕೊಡಿ.. ಅದರಲ್ಲೇ ಹುಷಾರಾಗ್ತಾರೆ ಅಂದೆ. ಮುಖ ಕೆಂಪಾಯಿತು. ಚೀಟಿ ಬರೆದುಕೊಟ್ಟು ಇನ್ನೊಂದು ಸಲ ಬರ್ಬೇಡ ಅಂದ್ರು. ಆದ್ರೂ ಇನ್ನೊಂದು 10 ವರ್ಷ ಹೀಗೆ ಸಾಗಿತ್ತು.     ನನ್ನ ಎಜ್ಯುಕೇಷನ್ ಮುಗಿಯಿತು. ನಾನು ಜರ್ನಲಿಸ್ಟ್ ಆದೆ. ಮನೆಯವರ ಪರವಾಗಿ ಡಾಕ್ಟರ್ ಹತ್ರ ಹೋಗೊ ನನ್ನ ಸರದಿಯೂ ಕೊನೆಗೊಂಡಿತ್ತು. ನಾನು ಕೂಡ ಸುಮಾರು ದಿನ ಹುಷಾರು ತಪ್ಪಲಿಲ್ಲ. ದಿನ ಕಳೆಯುತ್ತಿದ್ದಂತೆ ಬೇರೆ ವೈದ್ಯರ ಸಂಪರ್ಕ ಸಿಕ್ಕಿ ಅವರೇ ಮೆಡಿಸಿನ್ ಕೊಡುತ್ತಿದ್ರು. ಹೀಗಾಗಿ ನನ್ನ ಮೊದಲ ಡಾಕ್ಟರ್​ ಸಂಪರ್ಕ ಕಡಿದುಕೊಂಡಿತ್ತು. ನಾನು ಶಕ್ತಿ ದಿನ ಪತ್ರಿಕೆಯಲ್ಲಿ ವರದಿಗಳನ್ನು ಮಾಡುತ್ತಿದ್ದೆ. ಒಂದ್ಸಲ ಜಿಲ್ಲಾಸ್ಪತ್ರೆಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಆ ಡಾಕ್ಟರ್​ ಸಿಕ್ಕಿದ್ರು.. ಹೇ ಜಗ್ಗ! ದೊಡ್ಡವನಾಗಿಬಿಟ್ಟಿದ್ದೀಯಲ್ಲ… ಎಷ್ಟು ದಿನ ಆಯಿತು ನಿನ್ನ ನೋಡಿ. ಪೇಪರ್​ಲಿ ಸಕತ್ತಾಗಿ ಬರಿತಿದ್ದೀಯಾ. ಹಾಗೆ ಮುಂದುವರಿಸು ಅಂತಾ ಹೇಳಿದ್ರು. ನಾನು ಕೂಡ ದೊಡ್ಡ ವಿಷಯ ತರ ಕಾಲರ್ ಎತ್ತಿ ಓಕೆ ಸರ್ ಥ್ಯಾಂಕ್ಯು ಅಂದೆ.      ಒಂದ್ಸಲ ಮಡಿಕೇರಿ ಜಿಲ್ಲಾಸ್ಪತ್ರೆ ಕರ್ಮಕಾಂಡದ ಬಗ್ಗೆ ಸರಣಿ ಲೇಖನ ಬರೆಯುತ್ತಿದ್ದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ವಿಭಾಗದ ಅವ್ಯವಸ್ಥೆ ಬಗ್ಗೆ ಟೀಕಾತ್ಮಕ ವರದಿ ಮಾಡಿದ್ದೆ. ಆವಾಗ ಪ್ರಕಾಶ್ ​ಚಂದ್ರ ಜಿಲ್ಲಾ ಸರ್ಜನ್ ಆಗಿದ್ರು. ಅವರು ಮತ್ತು ಈ ಡಾಕ್ಟರ್ ತುಂಬಾ ಸ್ನೇಹಿತರಾಗಿದ್ರು. ಒಂದು ದಿನ ಕಚೇರಿಗೆ ಫೋನ್ ಕಾಲ್ ಬಂತು. ಅಲ್ಲಿದ್ದವರೊಬ್ಬರು ಆ ಫೋನ್ ತೆಗೆದುಕೊಂಡು ನಿಮಗೆ ಕಾಲ್ ಸರ್ ಅಂತಾ ಕೊಟ್ರು. ಆ ಕಡೆಯಿಂದ ಹೇ ಜಗ್ಗ ಅಂದ್ರು. ನನಗೆ ಗೊತ್ತಾಯ್ತು ಆ ಡಾಕ್ಟರ್ ಅಂತಾ. ನಾನು ಎಣ್ಣಿ ಸರ್ ಅಂದೆ. ಅಲ್ಲಾ ಜಗ್ಗ ಮೂರ್ನಾಲ್ಕು ದಿನದಿಂದ ಬರೆಯುತ್ತಿದ್ದೀಯಾ. ಇಲ್ಲಿ ಎಲ್ಲರೂ ಕಂಗಾಲಾಗಿದ್ದಾರೆ. ಸರ್ಜನ್ ತುಂಬಾ ಟೆನ್ಸನ್​ಲಿ ಇದ್ದಾರೆ. ನೀನು ಬರೆಯುತ್ತಿರೋದು ಸರಿ ಇದೆ. ಸತ್ಯ ದರ್ಶನ ಮಾಡ್ತಿದ್ದೀಯಾ. ಆದ್ರೆ ನಮ್ಮ ಸ್ಟಾಫ್ ವಿಚಲಿತರಾಗಿದ್ದಾರೆ. ನಾನು ಸರ್ಜನ್​ಗೆ ಹೇಳಿ ಸರಿ ಮಾಡಿಸ್ತೀನಿ. ನೀನು ಇವತ್ತಿಗೆ ಲೇಖನ ಮುಗಿಸಿಬಿಡು. ಇಲ್ಲಂದ್ರೆ ಪೇಷಂಟ್​ಗೆ ತೊಂದರೆ ಆಗುತ್ತೆ ಅಂದ್ರು. ನಾನು ಓಕೆ ಅಂದೆ. ಆದ್ರೆ ಮರು ದಿನ ಮತ್ತೊಂದು ವರದಿ ಮಾಡಿಬಿಟ್ಟೆ. ವಾರದ ನಂತರ ಮತ್ತೆ ಕಚೇರಿಗೆ ಕಾಲ್ ಬಂತು. ಕಳೆದ ಬಾರಿ ಫೋನ್ ತಗೊಂಡವನೆ ಈ ಬಾರಿಯೂ ನನಗೆ ಪೋನ್ ಕೊಟ್ಟು ನಿಮಗೆ ಸರ್​ ಅಂದ. ನಾನು ಹಲೋ ಹೇಳುತ್ತಿದ್ದಾಗೆ ಆ ಕಡೆಯಿಂದ ಹೇ ಜಗ್ಗ! ಓಹೋ ನನ್ನ ಡಾಕ್ಟರ್. ಎಣ್ಣಿ ಸರ್ ಅಂದೆ. ನಾನು ಯಾವಾಗ ನಿನಗೆ ಆಸ್ಪತ್ರೆ ಬಗ್ಗೆ ಸುದ್ದಿ ಕೊಟ್ಟೆ. ನಾನು ಹೇಳಿಸಿ ಸುದ್ದಿ ಬರೆಸಿದ್ದೀನಾ? ನಾನು ಆಸ್ಪತ್ರೆ ಬಗ್ಗೆ ಬರೆಯಲು ಹೇಳಿದ್ದೀನಾ ಅಂತಾ ಸ್ಪೀಡಾಗಿ ಕೇಳಿದ್ರು. ನಾನು ಇಲ್ಲ ಸರ್. ನೀವು ನನಗೆ ಸಿಗಲೇ ಇಲ್ಲ. ನಾನೇ ಈ ವರದಿ ಮಾಡಿದ್ದು. ನೀವ್ಯಾಕೆ ಟೆನ್ಸನ್ ಆಗಿದ್ದೀರಿ ಅಂದೆ. ಇಲ್ಲ.. ಇಲ್ಲಿ ಎಲ್ರೂ ನಾನೇ ನಿನಗೆ ಸುದ್ದಿ ಕೊಟ್ಟಿದ್ದು ಅಂತಾ ಹೇಳ್ತಿದ್ದಾರೆ. ಬೇಕಾದ್ರೆ ಕೇಳು ಅಂತಾ ಸರ್ಜನ್ ಪ್ರಕಾಶ್ ​ಚಂದ್ರ ಅವರಿಗೆ ಫೋನ್ ಕೊಟ್ರು. ನಾನು ಮಾತಾಡಿ.. ಇಲ್ಲ ಸರ್.. ಡಾಕ್ಟರ್ ನನಗೆ ಸಿಗದೆ ಎಷ್ಟೋ ದಿನ ಆಯಿತು. ಅವರ ತಪ್ಪಿಲ್ಲ. ನಾನೇ ಆಸ್ಪತ್ರೆಗೆ ಬಂದು ಮಾತನಾಡಿಸಿ ಸುದ್ದಿ ಮಾಡಿದ್ದು ಅಂದೆ. ಅವರು ಓಕೆ ಅಂತಾ ಹೇಳಿ ಫೋನ್ ಇಟ್ಟರು. ನನಗೋ ಬೇಸರ. ನನ್ನಿಂದ ನನ್ನ ಡಾಕ್ಟರ್​ಗೆ ಹೀಗೆ ಆಯಿತಲ್ಲ ಅಂತಾ.  ಎರಡು ದಿನ ಬಿಟ್ಟು ಮತ್ತೆ ಕಚೇರಿಗೆ ಕಾಲ್ ಬಂತು. ಪುನಃ ಅದೇ ಮನುಷ್ಯ ಫೋನ್ ಕೊಟ್ಟ. ಆ ಕಡೆಯಿಂದ ಹೇ ಜಗ್ಗ! ಅನ್ನೋ ಧ್ವನಿ. ಎಣ್ಣಿ ಸರ್ ಅಂದೆ. ನಿನ್ನ ಆಫೀಸಲ್ಲಿ ಒಬ್ಬ ಆಸ್ಪತ್ರೆಗೆ ಬಂದು ಸರ್ಜನ್​ ಜೊತೆ ಮಾತನಾಡಿದ್ದಾನೆ. ನಾನು ನಿನಗೆ ಸುದ್ದಿ ಕೊಟ್ಟಿದ್ದು ಅಂತಾ ಹೇಳಿದ್ದಾನೆ. ನಾನು ನಿನಗೆ ಕಾಲ್ ಮಾಡಿ ಬರೆಸಿದ್ದೀನಿ ಅಂತಾ ಹೇಳಿದ್ದಾನೆ ಅಂದ್ರು. ಇಲ್ಲ ಸರ್ ನಾನು ಅವನ ಬಿಡಲ್ಲ ಅಂದೆ. ಈ ಬಗ್ಗೆ ತನಿಖೆ ಮಾಡಿದೆ. ಡಾಕ್ಟರ್​ ಕಾಲ್ ಬರುತ್ತಿದ್ದಾಗ ಯಾರು ನನಗೆ ಫೋನ್ ಕೊಡುತಿದ್ರೋ ಅವರೇ ಈ ಕೆಲಸ ಮಾಡಿದ್ದಾರೆ ಅನ್ನೋದು ಗೊತ್ತಾಯಿತು. ಈ ಬಗ್ಗೆ ಸಂಪಾದಕರಾಗಿದ್ದ ರಾಜೇಂದ್ರ ಸರ್ ಅವರಿಗೆ ತಿಳಿಸಿದೆ. ಅವರು ಸೂಕ್ತ ಕ್ರಮ ಕೈಗೊಂಡರು. ಆಗಿದ್ದು ಇಷ್ಟೆ, ಆ ಡಾಕ್ಟರ್ ಕಾಲ್ ಮಾಡಿ ನನಗೆ ಹೇಳಿದ್ದು ಲೇಖನ ನಿಲ್ಲಿಸು ಅಂತಾ. ಆದ್ರೆ ಎರಡ್ಮೂರು ಬಾರಿ ಅವರು ನನಗೆ ಕಾಲ್ ಮಾಡಿರೋದನ್ನ ತಪ್ಪಾಗಿ ತಿಳ್ಕೊಂಡ ಆ ಮನುಷ್ಯ ಅಲ್ಲಿ ಫಿಟ್ಟಿಂಗ್ ಇಟ್ಟಿದ್ದ. ಆತ ಯಾವುದೋ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಹೋಗಿ ಸರ್ಜನ್ ಭೇಟಿ ಮಾಡಿದ್ದ. ಸರ್ಜನ್ ಯಾರಪ್ಪ ನಮ್ಮ ಬಗ್ಗೆ ಮಾಹಿತಿ ಕೊಡೋದು ಎಂದು ಕೇಳಿದ್ರು. ಈ ಮನುಷ್ಯ ನನಗೆ ಡಾಕ್ಟರ್​ ಕಾಲ್ ಬರೋದು ನೋಡಿ ಅವರೇ ಎಂದು ಹೇಳಿಬಿಟ್ಟ. ಈ ಮಿಸ್ ಕಮ್ಯೂನಿಕೇಷನ್​ನಿಂದ  ಆಪ್ತ ಸ್ನೇಹಿತರಾಗಿದ್ದ ಪ್ರಕಾಶ್ ​ಚಂದ್ರ ಮತ್ತು ನನ್ನ ಡಾಕ್ಟರ್ ನಡುವೆ ವೈಮನಸ್ಸು ಉಂಟಾಯಿತು. ಇಡೀ ಆಸ್ಪತ್ರೆ ನನ್ನ ಡಾಕ್ಟರ್ ವಿರುದ್ಧ ಇದ್ರು. ಇದು ಡಾಕ್ಟರ್​ಗೆ​ ತುಂಬಾನೇ ನೋವಾಗಿತ್ತು. ಇನ್ನೇನು ಅವರೂ ಕೂಡ ಜಿಲ್ಲಾ ಸರ್ಜನ್ ಆಗ್ಬೇಕಿತ್ತು. ಆದ್ರೆ ಆದದ್ದೆ ಬೇರೆ. ಒಂದು ದಿನ ಸಿಕ್ಕಿದ್ರು. ಹೇ ಜಗ್ಗ! ನಾನು ಆಸ್ಪತ್ರೆ ಬುಟ್ಟ್​ರುವಿ. ಇಲ್ಲಿ ಬಾರೀ ರಾಜಕೀಯ, ಹೊಲಸ್ ಆಯಿತ್ ಅಂದ್ರು. ಯಾಕೆ ಸರ್.. ನೀವು ಸರ್ಜನ್ ಆಗ್ಬೇಕು ಅಂದೆ. ಇಲ್ಲ ಇಲ್ಲ… ಇಲ್ಲಿ ಇದ್ರೆ ಟೆನ್ಸನ್​ಗೆ ಸ್ಟ್ರೋಕ್ ಆಗಿಬಿಡುತ್ತೆ. ಸುಳ್ಯದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಬರ್ತಿದೆ. ನಾನು VRS ತಗೊಂಡು ಅಲ್ಲಿ ಹೋಗಿ ಮಕ್ಕಳಿಗೆ ಪಾಠ ಮಾಡ್ತೀನಿ. ಸಾರ್ವಜನಿಕ ಸೇವೆ ಸಾಕು. ಇನ್ನು ಮಕ್ಕಳ ಸೇವೆ ಮಾಡ್ತೀನಿ. ಸಂಜೆ ಮಡಿಕೇರಿಲಿ ಕ್ಲಿನಿಕ್ ಓಪನ್ ಮಾಡಿ ಎರಡು ಗಂಟೆ ಕೂರ್ತಿನಿ. ನಿಮಗೆಲ್ಲರಿಗೂ ಸಿಗ್ತಿನಿ ಅಂದ್ರು. ಕೊನೆಗೆ ಹಾಗೇ ಮಾಡಿದ್ರು.  ನಂತರ ಕೆಲ ಸಮಯ ಅವರು ಸಿಗಲಿಲ್ಲ. ನಾನು ಟಿವಿ9 ಸೇರಿದೆ. ಒಂದು ಸಲ ಯಾವುದೋ ಕೊಲೆ ವಿಚಾರಕ್ಕೆ ಶವದ ಮರು ಮರಣೋತ್ತರ ಪರೀಕ್ಷೆ ಮಾಡೋ ವಿಚಾರದಲ್ಲಿ ಮತ್ತೆ ನನ್ನ ಮತ್ತು ಡಾಕ್ಟರ್​ ಸಂಪರ್ಕ ಆಯಿತು. ಪೊನ್ನಂಪೇಟೆ ಬಳಿ ಒಂದು ಶವವನ್ನು ಹೂತು ಒಂದು ತಿಂಗಳು ಕಳೆದಿತ್ತು. ನನ್ನ ಡಾಕ್ಟರ್ ಕೋರಿಕೆ ಮೇರೆಗೆ​ ಆ ಶವದ ಮರು ಮರಣೋತ್ತರ ಪರೀಕ್ಷೆ ಮಾಡಲು ಬಂದಿದ್ದರು. ಯಾಕೆಂದ್ರೆ ಕೊಡಗಿನಲ್ಲಿ ಫೊರೆನ್ಸಿಕ್ (ವಿಧಿ ವಿಧಾನ) ತಜ್ಞ ಇದ್ದದ್ದೇ ಈ ಡಾಕ್ಟರ್ ಒಬ್ಬರು. ಇವರು ಮರಣೋತ್ತರ ಪರೀಕ್ಷೆ ಮಾಡಿದರೆಂದರೆ ಆರೋಪಿಗಳಿಗೆ ಜೈಲು ಗ್ಯಾರಂಟಿ. ಎಷ್ಟು ಕ್ಲಿಷ್ಟ ಕೇಸ್​ಗಳನ್ನು ಸಲೀಸಾಗಿ ಬಯಲಿಗೆಳೆದಿದ್ದ ಈ ಡಾಕ್ಟರ್​ ಮಡಿಕೇರಿ ಮಾತ್ರವಲ್ಲದೆ, ಬೆಂಗಳೂರು ಮತ್ತಿತರೆಡೆ ಕೂಡ ಪೊಲೀಸರ ಕೋರಿಕೆ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹಲವರಿಗೆ ಶಿಕ್ಷೆ ಕೊಡಿಸಿದ್ದಾರೆ. ಅಂತಹ ಡಾಕ್ಟರ್​ ಅವತ್ತು ನನ್ನ ಎದುರೇ ಕೊಳೆತ ಶವದ ಮರಣೋತ್ತರ ಪರೀಕ್ಷೆ ಮಾಡುತ್ತಿದ್ದರು. ಕೆಟ್ಟ ವಾಸನೆ, ನೋಡಲು ಸಾಧ್ಯವೇ ಇಲ್ಲದ ಕೊಳೆತ ಮೃತದೇಹ… ನಾನಂತೂ ತಡೆಯಲಾಗದೆ ಮಾರು ದೂರ ಓಡಿ ಹೋದೆ. ಆದ್ರೆ ಡಾಕ್ಟರ್ ಮಾತ್ರ ಮೂಗಿಗೆ ಮಾಸ್ಕ್ ಹಾಕೊಂಡು ಕೈಯಲ್ಲಿ ಪೆನ್ನು ಪೇಪರ್ ಹಿಡಿದು ಬರೆಯುತಿದ್ರು. ಶವದ ಕೆಲವು ಭಾಗ ತೆಗೆದು ಪ್ಯಾಕ್ ಮಾಡಿಸುತಿದ್ರು.  ಎಲ್ಲಾ ಮುಗಿದ ಮೇಲೆ ಅವರ ಬಳಿ ಹೋದೆ. ಓಹೋ ಎನ್ನ ಜಗ್ಗ! ಬಾರೀ ದೂರ ಬಂದಿಯಾ? ಎಂದ್ರು. ನಾನು ಸರ್ ನಿಂಗಕ್ ವಾಸನೆ ಬಪ್ಪಲೆವಾ? ಆ ಬಾಡಿ ನೋಟಿತ್ ಎನ್ನನೆ ಉಂಬುವಿರಾ? ಅಂತಾ ಕೇಳಿದೆ. ಅವರು ನಗುತ್ತಾ 30 ವರ್ಷದಲ್ಲಿ 3ಸಾವಿರಕ್ಕೂ ಹೆಚ್ಚು ಇಂತಹ ಕೇಸ್ ನೋಡಿದ್ದೀನಿ. ವಾಸನೆಯೂ ಬಂದಿಲ್ಲ… ಊಟಕ್ಕೂ ತೊಂದರೆಯಾಗಿಲ್ಲ. ಬಾ ಊಟ ಮಾಡೋಣ ಅಂದ್ರು. ನಾನು ಅಲ್ಲೇ ವಾಂತಿ ಮಾಡಿಕೊಂಡು ಹೊರಟೆ. ನಂತರ ನನ್ನ ಮತ್ತು ಅವರ ಭೇಟಿ ಮುಂದುವರೆದಿದ್ದು ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ಅವರ ಕ್ಲಿನಿಕ್ ನಲ್ಲಿ. ಹುಷಾರಿಲ್ಲದಿದ್ದಾಗೆಲ್ಲ ಅಲ್ಲಿಗೆ ಹೋಗುತ್ತಿದ್ದೆ. ಈ ಬಾರಿ ನನ್ನ ಅಪ್ಪ, ಅಮ್ಮನ ಬದಲಾಗಿ ನನ್ನ ಸಂಸಾರಕ್ಕೆ ಹುಷಾರಿಲ್ಲದಾದ್ರು ನಾನೇ ಹೋಗಿ ಮೆಡಿಸಿನ್ ತಗೊಂಡು ಬರುತ್ತಿದ್ದೆ. ನನ್ನ ಅಪ್ಪ ಅಮ್ಮ ಕೂಡ ಅವರ ಬಳಿ ಹೋಗಿ ಮೆಡಿಸಿನ್ ತಗೊಂಡು ಬರುತ್ತಿದ್ದಾರೆ. ಅದೇನು ಮಾಯೆ ಗೊತ್ತಿಲ್ಲ. ಅವರು ಮುಟ್ಟಿದ್ರೆ ಸಾಕು ಖಾಯಿಲೆ ಓಡಿ ಹೋಗುತ್ತೆ ಅನ್ನುತ್ತಾರೆ ನನ್ನ ಅಮ್ಮ. ನನ್ನ ಅಪ್ಪ ಅಮ್ಮನಿಗೆ ಈಗ 76 ವರ್ಷ. ಈಗಲೂ ಆ ಡಾಕ್ಟರ್​ ಹತ್ರನೇ ಹೋಗ್ತಾರೆ. ಅವರು ನಾಡಿ ಬಡಿತ ಚೆಕ್ ಮಾಡಿ ಮಾತ್ರೆ ಕೊಟ್ರೆ ಸಾಕು. ಅಪ್ಪ ಅಮ್ಮ ಎರಡೇ ದಿನದಲ್ಲಿ ರೆಡಿ. ಇದು ನನ್ನ ಅಮ್ಮನ ಅನುಭವ ಮಾತ್ರವಲ್ಲ. ಇಂತಹ ಅದೆಷ್ಟೂ ಜನ್ರು ಈ ಮಾತು ಹೇಳಿದನ್ನು ಕೇಳಿದ್ದೇನೆ. ಬಹುಷಃ ಇದಕ್ಕೆ ಹೇಳಿರಬೇಕು ವೈದ್ಯೋ ನಾರಾಯಣೋ ಹರಿಃ ಅಂತಾ. ಅಷ್ಟಕ್ಕೂ ಈ ಡಾಕ್ಟರ್​ ಯಾರು ಅಂತಾ ನಿಮಗೆ ಈಗ ಗೊತ್ತಾಗಿರಬೇಕು. ಹೌದು, ನಿಮ್ಮ ಊಹೆ ಸರಿ. ಅವರೇ ಡಾ. ಕೆ. ಬಿ. ಸೂರ್ಯ ಕುಮಾರ್. ಮಡಿಕೇರಿಯ ಕಾಲೇಜು ರಸ್ತೆಯಲ್ಲಿರುವ ರಾಜ್ ಮೆಡಿಕಲ್ ಶಾಪ್ ಮೇಲೆ ಇರುವ ಕ್ಲಿನಿಕ್​ನಲ್ಲಿರುವ ಫೇಮಸ್ ವೈದ್ಯ ಡಾ. ಕೆ. ಬಿ. ಸೂರ್ಯ ಕುಮಾರ್. ಅವರು ಈಗ ತಮ್ಮೆಲ್ಲ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವ ಮಾಹಿತಿ ಬಂದಿದೆ. ನಾನು ಕಳೆದ 6 ವರ್ಷದಿಂದ ಬೆಂಗಳೂರಿನಲ್ಲಿರುವ ಕಾರಣ ಅವರ ಭೇಟಿ, ಮಾತುಕತೆ ಆಗಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ನಾನು ಅವರು ವೈದ್ಯ ಕಂಡ ವಿಸ್ಮಯ ಅನ್ನೋ ಪುಸ್ತಕ ಬರೆದಿರೋದನ್ನ ತಿಳಿದುಕೊಂಡಿದ್ದೇನೆ. ಈ ಪುಸ್ತಕ ಖಂಡಿತ ಕೇವಲ ಅವರ ವೈದ್ಯಕೀಯ ಅನುಭವದ ಚಿತ್ರಣವಷ್ಟೇ ಅಲ್ಲ, ಬದಲಾಗಿ ಮುಂದೆ ವೈದ್ಯರಾಗುವವರಿಗೆ ಮಾರ್ಗದರ್ಶಿ ಪುಸ್ತಕ ಆಗಲಿದೆ. ಪಿ ಎಚ್ ಡಿ ಮಾಡುವವರಿಗೆ ಅಧ್ಯಯನ ಗ್ರಂಥ ಆಗಬಹುದು. ಜನಸಾಮಾನ್ಯರಿಗೆ ಜನರಲ್ ನಾಲೇಜ್ ಆಗಬಹುದು. ನಾನಂತೂ ಈ ಪುಸ್ತಕಕ್ಕಾಗಿ ಶಬರಿಯಂತೆ ಕಾಯುತ್ತಿದ್ದೇನೆ.  ಕೊನೆ ಮಾತು : ನನ್ನ ಮತ್ತು ಅವರ ನಡುವಿನ ಮಾತುಕತೆ ಕೊಡವ ಭಾಷೆಯಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ರೂಪಾಂತರ ಮಾಡಿದ್ದೇನೆ. ಕೆಲವು ಕೊಡವ ಭಾಷೆಯಲ್ಲಿ ಇದ್ರೆ ಚೆನ್ನ ಅನ್ನಿಸಿತು. ಅವರ ಬಗ್ಗೆ ಹೇಳಲು ಇನ್ನಷ್ಟೋ ವಿಚಾರ ಇದೆ. ಆದರೆ ಎಲ್ಲವನ್ನು ಒಂದೇ ಕಡೆ ಹೇಳಲು ಸಾಧ್ಯವಿಲ್ಲ. ಇಲ್ಲಿ ಬರೆದಿರುವುದು ನನ್ನ ಮತ್ತು ಅವರ ನಡುವಿನ ವೈಯಕ್ತಿಕ ವಿಚಾರವಾದ್ರೂ ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರ ಬದ್ದತೆ, ಸರಳತನ, ಸ್ಪಂದನೆ, ತುಡಿತ ಇಲ್ಲಿ ವ್ಯಕ್ತವಾಗುತ್ತದೆ. ನನ್ನ ಡಾಕ್ಟರ್ ಮಿತ ಭಾಷಿ. ಅವರ ಹಾಸ್ಯ ಪ್ರಜ್ಞೆಯಂತೂ ಸೂಪರ್. ನನ್ನ ಮತ್ತು ಅವರ ನಾಲ್ಕುವರೆ ದಶಕದ ಒಡನಾಟದ ಬಗ್ಗೆ ಹಂಚಿಕೊಳ್ಳಲು ಇದು ಸರಿಯಾದ ಸಮಯ ಎಂದು ಭಾವಿಸಿ ನಾಲ್ಕು ಅಕ್ಷರ ಬರೆದಿದ್ದೇನೆ.   ಡಾಕ್ಟ್ರೇ… ನನ್ನನ್ನು ಸಣ್ಣ ಮಗುವಿನಿಂದಲೇ ಎತ್ತಿ ಆಡಿಸಿದವರು ನೀವು. ಆ ಕೈಯಲ್ಲಿ ಅದೆಷ್ಟೋ ಜನರ ಜೀವ ಕಾಪಾಡಿದ್ದೀರಿ. ಈಗ ಪುಸ್ತಕ ರೂಪದಲ್ಲಿ ಕಳೆದ 5 ದಶಕದ ಅನುಭವವನ್ನು ಧಾರೆ ಎರೆಯುತ್ತಿದ್ದೀರಿ. ನಿಮ್ಮ ಜೀವನ ಸುಖಕರವಾಗಿರಲಿ.

ಹ್ಯಾಟ್ಸ್ ಆಫ್ ಟು ಯೂ ಡಾಕ್ಟರ್.  *ಜಗದೀಶ್ ಬೆಳ್ಯಪ್ಪ**Mob : 9060137282*

error: Content is protected !!